ಒಬ್ಬ ವ್ಯಕ್ತಿ ಸಹಜಮಾರ್ಗ ಪದ್ಧತಿಗನುಗುಣವಾಗಿ ಧ್ಯಾನದ ಅಭ್ಯಾಸ ಕೈಕೊಳ್ಳಬಯಸಿದರೆ, ಈ ಅಭ್ಯಾಸವನ್ನು ಕೈಗೆತ್ತಿಕೊಳ್ಳುವ ಮೊದಲು ತನ್ನ ಗುರಿಯನ್ನು – ನಿರ್ಧರಿಸುವದು ಆವಶ್ಯಕವಾಗಿದೆ. ಇಲ್ಲವಾದರೆ, ತನ್ನದೇ ಆದ ತಪ್ಪು ಕಲ್ಪನೆಗಳಿಂದ ಹಾಗೂ ದೋಷಪೂರ್ಣ ಅವಲೋಕನಗಳಿಂದ ಅವನು ದಾರಿತಪ್ಪುವ ಸಂಭವವಿದೆ. ಇಂದ್ರಿಯಾತೀತವಾದ ಹಾಗೂ ಎಲ್ಲ ಬಗೆಯ ಮಾನಸಿಕ ಉಲ್ಲಾಸಗಳನ್ನು ಹಾಗೂ ತನ್ನ ಅಹಂಕಾರವನ್ನು ಕೂಡಾ ಮೀರಿದಂತಹ, ದೇವರೊಡನೆ ಸಂಪೂರ್ಣ ಒಂದಾಗುವ ಅಥವಾ ತನ್ನ ವಿಕಾಸದ ಅತ್ಯುಚ್ಚ ಸ್ಥಿತಿಯು ಅವನ ಗುರಿಯಾಗಿರಬೇಕು. ಅದಕ್ಕಾಗಿ ಅಭ್ಯಾಸಿಯು (ಯಾರು ಧ್ಯಾನಾಭ್ಯಾಸ ಕೈಕೊಳ್ಳುವನೋ ಅಂಥವನು) ಇಂದ್ರಿಯಗಳಿಗೆ ಸಂಬಂಧಿತವಾದ ಅಥವಾ ಮಾನಸಿಕ ಅಥವಾ ಅಹಂಕಾರ ಸಂಬಂಧಿತವಾದ ತನ್ನ ಮನೋಲ್ಲಾಸಗಳ ಬಗೆಗೆ ತನಗೆ ಎಂದೆಂದಿಗೂ ಯಾವ ಸಂಬಂಧವೂ ಇಲ್ಲ ಅಂತ ನಿಶ್ಚಯಿಸಬೇಕು. ತದನಂತರವೇ, ಅವನು ಗುರುವಿನ ಪ್ರಾಣಾಹುತಿಯ ನೈಜ ಪ್ರಯೋಜನ ಪಡೆಯುವ ಆಶೆಮಾಡಬಹುದು.
ಮಾನವನಿಗೆ ಸಾಧ್ಯವಿರುವ ಅತ್ಯುನ್ನತ ಸ್ಥಿತಿಯ ಪ್ರಾಪ್ತಿಯನ್ನು ತನ್ನ ಧ್ಯೇಯವನ್ನಾಗಿ ನಿಶ್ಚಿತಗೊಳಿಸಿ, ಸಾಧಕನು ಗುರುವಿನ ಪ್ರಾಣಾಹುತಿಯನ್ನು ಬೈಠಕಗಳ ಮೂಲಕ ಸ್ವೀಕರಿಸಲು, ಶ್ರೀರಾಮಚಂದ್ರ ಮಿಶನ್ನಿನ ಯಾವದೇ ಪ್ರಶಿಕ್ಷಕನನ್ನು ಸಂಪರ್ಕಿಸಬೇಕು. ಪ್ರಶಿಕ್ಷಕನು ಒಬ್ಬ ಗುರು ಅಲ್ಲ. ಆದರೆ ಪ್ರಾಣಾಹುತಿಯ ಮೂಲಕ ಅಭ್ಯಾಸಿ ಬಂಧುಗಳಿಗೆ ಸಹಾಯ ಮಾಡಲು ಗುರುಗಳಿಂದ ಅನುಮತಿ ಪಡೆದ ಒಬ್ಬ ಅಭ್ಯಾಸಿ, ಅನ್ನುವದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಅಭ್ಯಾಸಿಯು ಪ್ರಶಿಕ್ಷಕನನ್ನು ನಕಲು ಮಾಡುವದಕ್ಕಾಗಲಿ ಅಥವಾ ಅವನ ತಪ್ಪು ಕಂಡುಹಿಡಿಯುವದಕ್ಕಾಗಲಿ ಪ್ರಯತ್ನಿಸದೇ, ಕೇವಲ ತನ್ನ ವಿಕಾಸಕ್ಕಾಗಿ ಹಾಗೂ ಗುರುಗಳ ಪ್ರಾಣಾಹುತಿಯ ಪರಿಣಾಮಗಳಿಗಾಗಿ ಸುಮ್ಮನೆ ಕಾಯಬೇಕು.
ಅದಕ್ಕೆ ಪ್ರತಿಯಾಗಿ, ಆತ್ಮವಿಶ್ವಾಸ ಹಾಗೂ ಸದಿಚ್ಛೆಗಳನ್ನು ಕೇವಲ ಅನ್ಯ ಅಭ್ಯಾಸಿಗಳಲ್ಲಿ ಮಾತ್ರವಲ್ಲದೆ, ತನ್ನ ಸಂಪರ್ಕದಲ್ಲಿ ಬರುವ ಎಲ್ಲ ವ್ಯಕ್ತಿಗಳಲ್ಲಿಯೂ ಉಂಟುಮಾಡುವಂತೆ, ಒಬ್ಬ ಪ್ರಶಿಕ್ಷಕನು ತನ್ನನ್ನು ರೂಪಿಸಿಕೊಳ್ಳುವದಕ್ಕಾಗಿ ಗಮನಕೊಡಬೇಕು. ಅವನ ವರ್ತನೆ ಹಾಗೂ ಚಟುವಟಿಕೆಗಳು ಬೇರೆಯವರಲ್ಲಿ ಪ್ರೇಮ ಹಾಗೂ ಪವಿತ್ರತೆಯ ಭಾವನೆಗಳನ್ನುಂಟುಮಾಡಬೇಕು. ಸಹಜಮಾರ್ಗದ ಬೋಧನೆಗಳು ಹಾಗೂ ಆದರ್ಶಕ್ಕೆ ಅನುಗುಣವಾಗಿ ಒಬ್ಬ ಪ್ರಶಿಕ್ಷಕನು ತನ್ನ ಚಾರಿತ್ರ್ಯವನ್ನು ರೂಪಿಸಿಕೊಳ್ಳದಿದ್ದರೆ, ಅವನು ಸಂಸ್ಥೆಗೂ ಗುರುವಿಗೂ ಅಪಚಾರ ಮಾಡುವನು. ಅವನ ಸಂಗಾತಿಗಳು ಆತ್ಮವಿಶ್ವಾಸ ಹಾಗೂ ಒಳ್ಳೆಯ ಆಶೆಯಿಂದ, ಪ್ರಶಿಕ್ಷಕನಂತೆ ಮಾಡಲು, ಸ್ವತಃ ಪ್ರಶಿಕ್ಷಕನು ಧ್ಯಾನ, ಶುದ್ದೀಕರಣ ಹಾಗೂ ಪ್ರಾರ್ಥನೆಯ ಅಭ್ಯಾಸಗಳನ್ನು ಮಾಡಲೇಬೇಕು. ಪ್ರಶಿಕ್ಷಕನು ಒಬ್ಬ ಅಭ್ಯಾಸಿಯ ಸಾಧನೆಯನ್ನು ಸರಳ ಹಾಗೂ ಸುಲಭಗೊಳಿಸುವ ಕಾರ್ಯಮಾಡಬೇಕು.
ಅಭ್ಯಾಸಿಗಳ ಮನಸ್ಸಿನಲ್ಲಿ ಗೊಂದಲ ಹಾಗೂ ಕ್ಲಿಷ್ಟತೆಗಳನ್ನುಂಟು ಮಾಡುವ ಅಭ್ಯಾಸದ ಬಹಳಷ್ಟು ಪದ್ಧತಿಗಳನ್ನು ಶಿಫಾರಸ್ಸು ಮಾಡುವದು, ಪ್ರಶಿಕ್ಷಕನ ಒಂದು ಕೆಟ್ಟ ಕಾರ್ಯನೀತಿಯಾಗುವುದು. ಇಂಥ ಪ್ರಶಿಕ್ಷಕನು ಅಭ್ಯಾಸಿಗಳಿಗೆ ಕೆಡಕನ್ನುಂಟುಮಾಡುತ್ತಾನೆ. ಮಾತ್ರವಲ್ಲದೇ, ಸಾಕ್ಷಾತ್ಕಾರದ ಅತಿ ಸರಳವೂ ಸ್ವಾಭಾವಿಕವೂ ಆದ ಸಹಜಮಾರ್ಗ ಪದ್ಧತಿಗೂ ಸಹ ಕೆಟ್ಟ ಹೆಸರನ್ನು ತರುತ್ತಾನೆ.
ನಮ್ಮ ಗುರುಗಳು ಅತಿ ಸರಳವೂ ಅತ್ಯಂತ ಪರಿಣಾಮಕಾರಿಯೂ ಆದ ಆಧ್ಯಾತ್ಮಿಕ ತರಬೇತಿಯ ಅದ್ಭುತ ಮಾರ್ಗವನ್ನಿತ್ತಿದ್ದಾರೆ. ಮನುಷ್ಯನ ಅಸ್ತಿತ್ವದ ಹಾಗೂ ನಡವಳಿಕೆಯ ಮೂಲಕಾರಣವನ್ನು ಅವರು ಕಂಡು ಹಿಡಿದರು. ಮನುಷ್ಯನ ಹಟಮಾರಿ ಮನಸ್ಸಿನ ಕಾರ್ಯಪದ್ಧತಿ, ಹೇಗೆ ಜಟಿಲತೆಗಳನ್ನೂ, ಸ್ಥೂಲತೆಯನ್ನೂ ಉಂಟುಮಾಡುವದು ಹಾಗೂ ಮನುಷ್ಯನು ಹೇಗೆ ತನ್ನದೇ ಸೃಷ್ಟಿಯ ದಾಸನಾಗಿ ಕೊನೆಯಿಲ್ಲದ ಹೋರಾಟದಲ್ಲಿ ನಿರತನಾಗುವನು, ಹಾಗೂ ಅದರಿಂದಾಗಿ ಹೇಗೆ ಇನ್ನೂ ಹೆಚ್ಚಿನ ಕ್ಲಿಷ್ಟತೆಗಳೂ ಬಂಧನಗಳನ್ನೂ ಉಂಟುಮಾಡುವನು, ಅನ್ನುವದನ್ನು ಗುರುಗಳು ತಿಳಿಸಿ ಹೇಳಿದ್ದಾರೆ. ತನ್ನ ವಿಚಾರ ಶಕ್ತಿಯನ್ನು ಬಳಸಿ, ತನ್ನದೇ ಬಲೆಯನ್ನು ವಿಚ್ಛಿನ್ನಗೊಳಿಸಲು ಪ್ರಯತ್ನಿಸುವದು, ತಾನು ಕಳೆದುಕೊಂಡ ಸ್ವಾತಂತ್ರ್ಯವನ್ನು ಮರಳಿ ಪಡೆಯುವ ಒಂದೇ ಒಂದು ದಾರಿಯಾಗಿದೆ. ಯಾರು ತನ್ನ ಬಲೆಯನ್ನು ತುಂಡರಿಸಿರುವನೋ ಹಾಗೂ ಯಾವದೇ ತರದ ಬಂಧನದಿಂದ ಅಥವಾ ಸೀಮಿತತೆಯಿಂದ ಅಥವಾ ಅಂಥವುಗಳಿಂದ ಪೂರ್ಣವಾಗಿ ಮುಕ್ತನಾಗಿರುವನೋ ಅಂಥವನು, ಸಾಧಕನಿಗೆ ಅತ್ಯಂತ ಕಲ್ಯಾಣಕಾರಿಯಾಗಬಲ್ಲನು. ಸಹಜಮಾರ್ಗ ಪದ್ಧತಿಯಲ್ಲಿ ಇಂಥ ಸಹಾಯವನ್ನು ಗುರುವಿನ ಪ್ರಾಣಾಹುತಿಯ ಮೂಲಕ ಕೊಡಲಾಗುವದು. ಧ್ಯೇಯ ವಸ್ತುವಿನ ನಿರಂತರ ಸ್ಮರಣೆಯಿಂದ ಅಭ್ಯಾಸಿಯು ಪ್ರಾಣಾಹುತಿಯನ್ನು ಯಥೇಷ್ಟವಾಗಿ ಗ್ರಹಿಸತೊಡಗುವನು.
(ನವೆಂಬರ ೧೯೭೯ ರ ಸಹಜಮಾರ್ಗ ಪತ್ರಿಕೆ)
ಯಾವುದು ಪರೋಕ್ಷವಾಗಿ ನಮ್ಮ ಆಸಕ್ತಿಯ ಕೇಂದ್ರವಾಗುವದೋ, ಅಂತಹ ಮಹಾನ್ ಹಾಗೂ ಅತ್ಯಂತ ಪ್ರಬಲವಾದುದು ನಮ್ಮ ದೃಷ್ಟಿಯಲ್ಲಿ ಬರುವವರೆಗೆ, ನಾವು, ಎಂದಿಗೂ ಆತ್ಮವನ್ನು ಮೀರಿ ಹೋಗಲಾರೆವು.
-ಬಾಬೂಜಿ