ಪ್ರಿಯ ಸೋದರ, ಸೋದರಿಯರೇ,
ನಮ್ಮ ಗುರುಗಳ ೮೦ನೇ ಜನ್ಮದಿನ ಆಚರಿಸಲು ನಾವು ಇಂದು ಇಲ್ಲಿ ಕೂಡಿದ್ದೇವೆ. ಗುರುಗಳ ೮೦ನೇ ಹುಟ್ಟಹಬ್ಬವನ್ನು ೧೯೭೯ ರ ಎಪ್ರಿಲ್ ೩೦ ರಂದು ನಾವು ಅಹಮ್ಮದಾಬಾದಿನಲ್ಲಿ ಆಚರಿಸಿದಾಗ, ದೇಶದ ತುಂಬೆಲ್ಲ ಬೇರೆ ಬೇರೆ ಸ್ಥಳಗಳಲ್ಲಿ ಈ ವರ್ಷವಿಡೀ ಹುಟ್ಟು ಹಬ್ಬವನ್ನು ಆಚರಿಸುವ ವಿಚಾರ ಉದ್ಭವಿಸಿತು. ಜೀವಿಸುತ್ತಿರುವ ಒಬ್ಬ ಪರಿಪೂರ್ಣ ಗುರುವಿನ ಮಾರ್ಗದರ್ಶನಕ್ಕಾಗಿ, ತಮ್ಮ ಮಧ್ಯ ಇದ್ದದ್ದಕ್ಕಾಗಿ ಸಹಜಮಾರ್ಗ ಅಭ್ಯಾಸಿಗಳು ಬಹಳ ಅದೃಷ್ಟವಂತರೂ ಬಹಳ ಸಂತುಷ್ಟರೂ ಆಗಿದ್ದಾರೆ. ಮಾನವಕುಲಕ್ಕೆ ನೀಡಲು ಅವನ ಮಹಾನ್ ಸಂದೇಶವೊಂದಿದೆ. ಅವನ ಜೀವನವೇ ಆ ಮಹಾನ್ ಸಂದೇಶವಾಗಿದೆ. ಇಂಥ ಜೀವಂತ ಗುರು ಈ ವರೆಗೆ ಜಗತ್ತಿನಲ್ಲಿರಲಿಲ್ಲ. ಹಾಗೂ ಇಂಥ ವ್ಯಕ್ತಿತ್ವ ಭವಿಷ್ಯದಲ್ಲಿ ಎಂದಾದರೂ ಜನ್ಮತಾಳುವದು ಸಂದೇಹಾಸ್ಪದವಾಗಿದೆ. ಆದ್ದರಿಂದ, ಅವನ ಮಾರ್ಗದರ್ಶನದಲ್ಲಿರಲು ಹಾಗೂ ಅವನ ತರಬೇತಿಯಲ್ಲಿದ್ದುದಕ್ಕಾಗಿ ನಾವು ಬಹಳ ಅದೃಷ್ಟಶಾಲಿಗಳೆಂದು ಭಾವಿಸುತ್ತೇವೆ. ಹಾಗೂ ಅವನ ಜನ್ಮದಿನವನ್ನು ವರ್ಷಾಂತ್ಯವೆಲ್ಲ ಬೇರೆ ಬೇರೆ ಸ್ಥಳಗಳಲ್ಲಿ ಆಚರಿಸಲು ನಮಗೆ ಅತಿ ಸಂತಸವಾಗಿದೆ.
ಮನುಷ್ಯನು ತನ್ನನ್ನು ತಾನು, ಜಗತ್ತಿನಲ್ಲಿಯ ಬೇರೆ ಎಲ್ಲ ಜೀವಿಗಳಿಗಿಂತಲೂ ಶ್ರೇಷ್ಠನೆಂದು ಪರಿಗಣಿಸುತ್ತಾನೆ. ಯಾಕೆಂದರೆ, ಅತ್ಯುತ್ಕೃಷ್ಟವಾಗಿ ಬೆಳೆದ ಮನಸ್ಸು ಅವನಿಗೆ ದೈವದತ್ತವಾಗಿ ದೊರಕಿದೆ. ಅವನ ಮನಸ್ಸು ಯೋಗ್ಯವಾಗಿ ನಿಯಂತ್ರಿತಗೊಂಡಿದ್ದಾದರೆ, ಮಾನವನು ಎಲ್ಲ ಪ್ರಾಣಿಗಳಿಗಿಂತಲೂ ನಿಜಕ್ಕೂ ಶ್ರೇಷ್ಠನಾಗಬಲ್ಲನು. ಸಹಜಮಾರ್ಗ ಪದ್ಧತಿಯ ಆಧ್ಯಾತ್ಮಿಕ ತರಬೇತಿ ಈ ಉದ್ದೇಶಕ್ಕಾಗಿ ಸರಳ ಹಾಗೂ ಸುಯೋಗ್ಯ ಪದ್ಧತಿಗಳನ್ನು ನೀಡುತ್ತದೆ. ತನ್ನ ಮನಸ್ಸನ್ನು ನಿಯಂತ್ರಣಗೊಳಿಸಬಯಸುವ ಒಬ್ಬ ಮನುಷ್ಯನು, ಮಾನವ ಜೀವನದ ಗುರಿಯ ಪ್ರಾಪ್ತಿಗಾಗಿ, ಯಾವುದು ಮಾನವ ವಿಕಾಸಕ್ಕಾಗಿ ಸಾಧ್ಯವಿರುವ ಅತ್ಯುಚ್ಚ ಕಾರಣವಾಗಬಲ್ಲದೋ, ಅಂಥ ನೈಜ ಗುರಿಯ ಬಗೆಗೆ ಚಿಂತಿಸಲು ಸಲಹೆ ಮಾಡಲಾಗಿದೆ. ಇಂಥ ಅತ್ಯುಚ್ಚ ಸ್ಥಿತಿಯ ಬಗೆಗೆ ಆಲೋಚಿಸುವಾಗ, ತನ್ನದೇ ಇಚ್ಛೆಗಳು ಹಾಗೂ ಆಶೆಗಳ ರೂಪದಲ್ಲಿ, ತನ್ನ ಮನಸ್ಸನ್ನು ಅಸಂಖ್ಯಾತ ದಿಕ್ಕುಗಳಲ್ಲಿ ನಿರಂತರವಾಗಿ ವಿಮುಖಗೊಳಿಸುವ ಅಡೆತಡೆಗಳ ತಿಳಿವಳಿಕೆಯನ್ನು ಅವನಿಗೆ ಮಾಡಿಕೊಡಲಾಗಿದೆ. ತನ್ನದೇ ಇಚ್ಛೆಗಳ ದಾಸ್ಯತ್ವದ ಅರಿವು ಅವನಿಗುಂಟಾದಾಗ, ಅವನು ಈ ದಾಸ್ಯತ್ವದಿಂದ ಮುಕ್ತಗೊಳ್ಳುವದರ ಬಗೆಗೆ ಆಲೋಚಿಸಲು ಪ್ರಾರಂಭಿಸುವನು. ತದನಂತರ ತನ್ನ ಸ್ವಾತಂತ್ರ್ಯವನ್ನು ಮರಳಿ ಪಡೆದ ಹಾಗೂ ತನಗೆ ಆಧ್ಯಾತ್ಮಿಕ ಪ್ರಾಣಾಹುತಿಯಿಂದ ಸಹಾಯ ಮಾಡಬಲ್ಲ, ತನ್ನ ಸಹಚರನೊಬ್ಬನ ಸಹಾಯವನ್ನು ಕಂಡು ಹಿಡಿಯಲು ಅವನಿಗೆ ಉಪದೇಶಿಸಲಾಗುವದು. ಸಹಜಮಾರ್ಗ ಪದ್ಧತಿಯಲ್ಲಿ, ಶಿಕ್ಷಕನು ಸಾಧಕನ ಪ್ರಬಲವಾದ ಆಂತರಿಕ ಬಂಧನಗಳನ್ನು ದುರ್ಬಲಗೊಳಿಸುವನು ಹಾಗೂ ಅವನ ಹೃದಯದಲ್ಲಿ ದೈವೀಪ್ರಕಾಶದ ಬೀಜ ಬಿತ್ತುವನು. ತರುವಾಯ ಸಾಧಕನಿಗೆ `ಹೃದಯದಲ್ಲಿ ದೈವೀಪ್ರಕಾಶವಿದೆಯೆಂದು ಹೃದಯದ ಮೇಲೆ ಧ್ಯಾನಮಾಡಲು ಸಲಹೆ ಮಾಡಲಾಗುವದು. ಯಾವುದೇ ಊಹೆ ಮಾಡದೇ ಹಾಗೂ ಯಾವುದೇ ದೈಹಿಕ ಒತ್ತಡವನ್ನು ಹೇರದೆ, ಧ್ಯಾನವನ್ನು ಅತಿ ಸರಳ ಹಾಗೂ ಸ್ವಾಭಾವಿಕ ರೀತಿಯಲ್ಲಿ ಅಭ್ಯಾಸ ಮಾಡಬೇಕು.
ಆಂತರಿಕ ಶುದ್ದೀಕರಣ ಹಾಗೂ ಪವಿತ್ರತೆಗಾಗಿ ಬೇರೆ ಕೆಲವು ಸರಳ ಅಭ್ಯಾಸಗಳನ್ನು ಸಹ ವಿಧಿಸಲಾಗಿದೆ. ಒಬ್ಬ ಪ್ರಶಿಕ್ಷಕನು ಅಭ್ಯಾಸಿಯ ಆಂತರಿಕ ಜಡತ್ವ, ಸ್ಥೂಲತೆ, ವಿಕ್ಷೇಪಗಳು ಹಾಗೂ ಅಂಧಃಕಾರವನ್ನು ತೆಗೆದು ಹಾಕಲು ತನ್ನ ಸಂಕಲ್ಪ ಶಕ್ತಿಯನ್ನು ಪ್ರಯೋಗಿಸುವನು. ಸಹಜಮಾರ್ಗದ ಒಬ್ಬ ಪ್ರಶಿಕ್ಷಕನಿಗೆ, ಗುರುವಿನಿಂದ ಆಧ್ಯಾತ್ಮಿಕ ಪ್ರಾಣಾಹುತಿ ಶಕ್ತಿಯನ್ನು ದಯಪಾಲಿಸಲಾಗಿರುತ್ತದೆ.
ಸಹಜಮಾರ್ಗ ಪದ್ಧತಿಗನುಗುಣವಾಗಿ ಅಭ್ಯಾಸ ಮಾಡುತ್ತ, ಬಹಳಷ್ಟು ಅಭ್ಯಾಸಿಗಳು, ತಮ್ಮ ಮನಸ್ಸಿನ ಅನಿಯಂತ್ರಿತ ಚಟುವಟಿಕೆಗಳು ಕ್ರಮೇಣ ಒಂದು ಬಗೆಯ ನಿಯಂತ್ರಣದಡಿಯಲ್ಲಿ ಬರುತ್ತಿರುವಂತೆ ಹಾಗೂ ತಾವು ತುಲನಾತ್ಮಕವಾಗಿ ಭಾರರಹಿತರೂ ಮುಕ್ತರೂ ಆಗುತ್ತಿರುವಂತೆ, ಬಹುಬೇಗನೆ ಕಂಡುಕೊಂಡರು. ಅತ್ಯುಚ್ಚ ಸ್ಥಿತಿಯನ್ನು ಪಡೆಯುವ ಇಚ್ಛೆ ಯಾವಾಗ ಪ್ರಬಲವಾಗುವದೋ, ಯಾರು ಆ ಸ್ಥಿತಿಯನ್ನು ಸಂಪಾದಿಸಿ ಅದರಲ್ಲಿಯೇ ಶಾಶ್ವತವಾಗಿ ವಾಸಮಾಡುತ್ತಿರುವರೋ, ಅಂಥವರನ್ನು ಸ್ಮರಿಸಲು ಅಭ್ಯಾಸಿಗೆ ಸೂಚಿಸಲಾಗುವದು. ಅಭ್ಯಾಸಿಯು ಕೂಡಲೇ ನಿರಂತರ ಸ್ಮರಣೆಯ ಅಭ್ಯಾಸವನ್ನು ಅಳವಡಿಸಿಕೊಳ್ಳುವನು ಹಾಗೂ ತನ್ನ ಅಸ್ತಿತ್ವದ ಉನ್ನತ ಸ್ತರಗಳೆಡೆ ಜಿಗಿಯ ತೊಡಗುವನು. ಆತನ ಆಕಾಂಕ್ಷೆಗಳ ಬೆಳವಣಿಗೆಯ ತೀವ್ರತೆಗನುಗುಣವಾಗಿ ಆತನ ಪ್ರಗತಿಯು ತೀವ್ರವಾಗುವದು. ಗುರುವಿನ ಪ್ರಾಣಾಹುತಿಯ ಸಹಾಯದಿಂದ ಒಬ್ಬ ಅಭ್ಯಾಸಿಯು ತನ್ನ ಆಂತರಿಕ ಬಂಧನಗಳಿಂದ ಮುಕ್ತಿ ಪಡೆಯುವನು ಹಾಗೂ ಗಮನಾರ್ಹವಾದ ಅತ್ಯಲ್ಪ ಸಮಯದಲ್ಲಿ ತನ್ನ ಗುರಿಯ ಸಮೀಪ ಮುಂದುವರಿಯುವನು.
ಅನೇಕ ಅಭ್ಯಾಸಿಗಳು ಈಗಾಗಲೇ ಅನುಭವಿಸುತ್ತಿರುವಂತೆ, ಯಾರು ತನ್ನನ್ನು ತಾನು ಸಹಜಮಾರ್ಗ, ಪದ್ಧತಿಗನುಗುಣವಾದ ಆಧ್ಯಾತ್ಮಿಕ ತರಬೇತಿಗೊಳಪಡಿಸಿಕೊಳ್ಳುವನೋ, ಅಂತಹ ಒಬ್ಬ ಪ್ರಾಮಾಣಿಕ ಅನ್ವೇಷಕನು, ಮೇಲೆ ಹೇಳಿದುದನ್ನೆಲ್ಲವನ್ನೂ ಅನುಭವಿಸಬಲ್ಲನು. ಮಾನವ ಜೀವಿಗಳ ಉಚ್ಚಮಟ್ಟದ ಅಸ್ತಿತ್ವಕ್ಕೆ ಆಗಿರುವ ನೈಜವಿಕಾಸವು, ಇದೇ ರೀತಿಯಲ್ಲಿ ಮಾತ್ರ ಸರಳ ಹಾಗೂ ಸ್ವಾಭಾವಿಕವಾಗಿ ಸಾಧ್ಯವಿದೆ. ಇಲ್ಲದೇ ಹೋದಲ್ಲಿ, ಮಾನವಕುಲವು ತನ್ನ ಶಕ್ತಿಯನ್ನು ಅನಾವಶ್ಯಕ ಹಿಂಸೆ ಹಾಗೂ ಘೋರ ಆತ್ಮವಿನಾಶದಲ್ಲಿ ಹಾಳು ಮಾಡುವ ಸಾಧ್ಯತೆಯಿದೆ.
ಈ ರೀತಿಯಾಗಿ, ಸಹಜಮಾರ್ಗವು ನಮಗೆ ದೊರಕಿದೆ. ಹಾಗೂ ನಾವು ಈ ಪದ್ಧತಿಯನ್ನು, ಅದಕ್ಕೂ ಹೆಚ್ಚಾಗಿ ನಮ್ಮ ಮಾರ್ಗದರ್ಶನಕ್ಕಾಗಿ ದೈವವಶಾತ್ ನಮ್ಮ ಮಧ್ಯದಲ್ಲಿರುವ ಈ ಪದ್ಧತಿಯ ಅನ್ವೇಷಕನ ಪ್ರಯೋಜನ ಪಡೆಯುವದಕ್ಕೆ ಕರ್ತವ್ಯಬದ್ಧರಾಗಿದ್ದೇವೆ.
ನಿಸರ್ಗದ ಬೇಡಿಕೆಯಂತೆ ವಿಕಸಿತವಾಗಲು ಗುರುಗಳು ನಮಗೆಲ್ಲರಿಗೂ ತಿಳಿವಳಿಕೆ ಹಾಗೂ ಉತ್ಕಟೇಚ್ಛೆಯನ್ನು ನೀಡಲಿ.
(ನ್ಯೂ ದೆಹಲಿಯಲ್ಲಿ ಸಪ್ಟೆಂಬರ ೨೦, ೧೯೭೯ ರಂದು ಮಾಡಿದ ಭಾಷಣ)