(ಇಂಗ್ಲಿಷ್ ಮೂಲದಿಂದ)
‘ಮಹಾಪುರುಷರು ಅಕಸ್ಮಾತ್ತಾಗಿ ಹುಟ್ಟುವುದಿಲ್ಲ’ ಕಾಲದ ಅತ್ಯಾವಶ್ಯಕತೆಗನುಸಾರವಾಗಿ ಉದಯಿಸಿ ತಮ್ಮ ಕಾರ್ಯವನ್ನು ಪೂರೈಸಿ ಹೋಗುವರು. ಹೀಗಿದೆ ನಿಸರ್ಗದ ನಿಯಮ.ಎಂದಿನಿಂದಲೂ ಅಧ್ಯಾತ್ಮದ ನೆಲೆವೀಡಾದ ಭಾರತವು ತನ್ನ ಪುರಾತನ ಯೋಗ ಪದ್ದತಿಯ ಪರಂಪರೆಯನ್ನು ಸಂಪೂರ್ಣ ಮರೆತು ಕತ್ತಲೆಯಲ್ಲಿ ತೊಳಲಾಡುತ್ತಿದ್ದಿತು. ಸೂಕ್ಷ್ಮವಾದ ಅಧ್ಯಾತ್ಮಕತೆಯ ಬದಲು ಜಡವಾದ ಭೌತಿಕತೆಯು ನೆಲೆಸಿದ್ದಿತು.ಅಜ್ಞಾನದ ಕಾರ್ಮೋಡಗಳು ಎಲ್ಲ ಕಡೆಯಲ್ಲಿಯೂ ಕವಿದಿದ್ದವು,ಯೌಗಿಕ ಪ್ರಾಣಾಹುತಿಯು ಹಿಂದೂಗಳಿಗೆ ತೀರ ಪರಕೀಯವಾಗಿ ಬಿಟ್ಟಿತ್ತು.ಅಧ್ಯಾತ್ಮವು ಅಸಾಹಾಯವಾಗಿ ತತ್ತರಿಸುತ್ತಿದ್ದ ಇಂಥ ಕಾಲದಲ್ಲಿ ಪರಿಸ್ಥಿತಿಯನ್ನು ಸರಿಪಡಿಸಿ ಮಾನವ ಜನಾಂಗವನ್ನು ಮೇಲಕ್ಕೆತ್ತಲು ಮಹಾವಭೂತಿಯೊಂದರ ಅಗತ್ಯವಿದ್ದಿತು.
ಇಂಥ ಸಮಯದಲ್ಲಿ ದೈವೀಶಕ್ತಿಯು ಮಾನವ ಶರೀರ ಧಾರಣ ಮಾಡಿ ಉತ್ತರ ಪ್ರದೇಶದ ಫರೂಕಾಬಾದಿನಲ್ಲಿ ಸಮರ್ಥಗುರು ಮಹಾತ್ಮಾ ರಾಮಚಂದ್ರಜಿಯವರ ರೂಪದಲ್ಲಿ ಅವತರಿಸಿತು. ಈ ಆಧ್ಯಾತ್ಮ ಭಾನುವು ವಸಂತಪಂಚಮಿಯ ದಿನ,೧೮೭೩ನೆಯ ಇಸ್ವಿಯ ಫೆಬ್ರುವರಿ ೨ರಂದು ಸಂಮಾನ್ಯ ಕಾಯಸ್ಥ ಕುಟುಂಬವೊಂದರಲ್ಲಿ ಜನಿಸಿದನು.ಇವರ ತಾಯಿಯು ಉದಾರ ಚಿತ್ತಳೂ ಸರಳಜೀವಿಯೂ ಆಗಿದ್ದಳು.ದಿನದ ಬಹುಭಾಗವನ್ನು ಪೂಜೆ-ಭಕ್ತಿಗಳಲ್ಲಿಯೇ ಕಳೆಯುತ್ತಿದ್ದಳು. ತಾಯಿಯ ಪ್ರಭಾವದಿಂದಲೇ ಅವರು ತೀರ ಚಿಕ್ಕ ವಯಸ್ಸಿನಲ್ಲಿಯೇ ಇಧ್ಯಾತ್ಮದ ಪ್ರೇರಣೆ ಹೊಂದಿದರು.ಒಂದು ದಿನ ಅವರು ತಮ್ಮ ಗೆಳೆಯರೊಂದಿಗೆ ಆಡುತ್ತಿದ್ದಾಗ ಯಾವುದೋ ದೈವೀಶಕ್ತಿಯು, ಅವರು ಆಗ ನಿರತರಾಗಿದ್ದ ಕಾರ್ಯವು ಅವರ ಜೀವನೋದ್ದೇಶವಲ್ಲವೆಂಬ ಭಾವನೆಯನ್ನು ಅವರಲ್ಲಿ ಜಾಗೃತಗೊಳಿಸಿತು.ಮುಂಬರುವ ಮಹತ್ಕಾರ್ಯಕ್ಕಾಗಿ ಅವರು ಅಣಿಯಾಗ ಬೇಕಾಗಿದ್ದಿತು. ಆತ್ಮವು ಜಾಗೃತವಾಗಿ ಅವರು ಸಾಧನೆಯನ್ನು ಕೈಕೊಂಡರು. ಅವರು ಕೇವಲ ಏಳು ತಿಂಗಳುಗಳಲ್ಲಿ ಸಾಕ್ಷಾತ್ಕಾರವನ್ನು ಪಡೆದರು.ಇದು ನಿಜವಾಗಿಯೂ ಅನುಪಮವಾದ ಉದಾಹರಣೆಯಾಗಿದೆ. ಅಂದಿನಿಂದ ಅವರು ತಮ್ಮ ಇಡೀ ಜೀವನವನ್ನು ಆಧ್ಯಾತ್ಮಿಕ ಕಾರ್ಯಗಳಿಗಾಗಿಯೇ ಮೀಸಲಾಗಿಟ್ಟರು.
ಅವರು ಸಮತ್ವ, ಸಹನೆ ಹಾಗೂ ಭಕ್ತಿಗಳ ಮೂರ್ತಿಯಾಗಿದ್ದರಲ್ಲದೆ ಸಂಪೂರ್ಣ ನಿರಹಂಕಾರಿಯಾಗಿದ್ದರು. ಅವರು ಪ್ರಾಣಾಹುತಿಯಲ್ಲಿ (Yogic Transmission)ಪ್ರವೀಣರಾಗಿದ್ದರು. ಪ್ರಾಣಾಹುತಿಯ ಮೂಲಕ ಯೌಗಿಕ ತರಬೇತಿಯ ನವಯುಗವು ಅವರಿಂದಲೇ ಆರಂಭವಾಯಿತು. ಕೇವಲ ದೃಷ್ಟಿಮಾತ್ರದಿಂದ ಮನುಷ್ಯರಿಗೆ ಪೂರ್ಣತ್ವವನ್ನು ಕರುಣಿಸಬಲ್ಲ ಸಾಮರ್ಥ್ಯವು ಅವರಲ್ಲಿದ್ದಿತು. ಗೃಹಸ್ಥಾಶ್ರಮಿಗಳಾಗಿದ್ದುಕೊಂಡೇ ಒಂದೇ ಜನ್ಮದಲ್ಲಿಯೇ ಪರಿಪೂರ್ಣತೆಯನ್ನು ಪಡೆಯಲು ಸಾಧ್ಯವಾಗುವ ಹಾಗೆ ಮಾಡಿದವರು ಅವರೇ. ಗಹಸ್ಥ ಜೀವನದ ದುಃಖ-ದುಮ್ಮಾನಗಳು ಅಧ್ಯಾತ್ಮಿಕ ಪ್ರಗತಿಯಲ್ಲಿ ತ್ಯಾಗ-ತಪಸ್ಸುಗಳೆಂದು ಅವರು ಹೇಳುತ್ತಿದ್ದರು. ಆಧ್ಯಾತ್ಮಿಕ ತರಬೇತಿಯ ಪದ್ಧತಿಗಳನ್ನು ಅವರು ಅದೆಷ್ಟೋ ಸುಗಮಗೊಳಿಸಿ ಕಾಲ ಪರಿಸ್ಥಿತಿಗಳಿಗೆ ಹೊಂದಿಕೆಯಾಗುವಂತೆ ಮಾಡಿದರು. ಆಧ್ಯಾತ್ಮಿಕ ಕ್ಷೇತ್ರದಲ್ಲಿಯ ಅವರ ಅನೇಕ ಸಂಶೋಧನಗಳಲ್ಲಿ ಒಂದನ್ನು’ಕೇಂದ್ರಮಂಡಲ’ವೆಂಬ ಶೀರ್ಷಿಕೆಯ ಕೆಳಗೆ ಈ ಪುಸ್ತಕದಲ್ಲಿ ಕೊಡಲಾಗಿದೆ.
ಇಂಥ ಅತ್ಯುಚ್ಚಕೋಟಿಯ ಆಧ್ಯಾತ್ಮಿಕ ಸಾಮರ್ಥ್ಯವನ್ನು ಪಡೆದಿದ್ದ ಅವರು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಮಾನವತೆಯ ಉದ್ಧಾರಕ್ಕಾಗಿ ವಿನಿಯೋಗಿಸಿದರು. ಮತ್ತು೩೬ ವರ್ಷಗಳ ಕಾಲ ಜನತೆಯ ಸೇವೆ ಸಲ್ಲಿಸಿ ೧೯೩೧ನೆಯ ಇಸ್ವಿಯ ಅಗಸ್ಟ್೧೪ರಂದು ತಮ್ಮ ೫೮ನೆಯ ವಯಸ್ಸಿನಲ್ಲಿ ಭೌತಿಕ ಶರೀರವನ್ನು ಬಿಟ್ಟು ಹೋದರು. ಅವರು ನಿಜವಾಗಿಯೂ ಅದ್ಭುತ ವಿಭೂತಿಯಗಿದ್ದರು. ತಮ್ಮ ಜೀವಮಾನದಲ್ಲಿ ಅವರು ಮಾಡಿದ ಕಾರ್ಯವು ಕಲ್ಪನಾತೀತವಾಗಿದೆ. ಕಾಲಕ್ರಮದಲ್ಲಿ ಮುಂಬರುವ ಪೀಳಿಗೆಯು ಅವರ ಯೋಗ್ಯತೆಯನ್ನರಿತೀತು.