ನಾನಿಂದು ಸಹಜ ಮಾರ್ಗಾನುಸಾರ ನಮ್ಮ ರಾಜಯೋಗಪದ್ಧತಿಯ ಅತ್ಯದ್ಭುತವನ್ನು ತೋರಿಸಿಕೊಡುವೆನು.ಈ ಪದ್ಧತಿಯ ಪ್ರಭಾವವನ್ನು ತೀರ ಕೆಲಜನರು ಮನಗಂಡಿದ್ದಾರೆ. ನಾವು ಒಂದೇ ಒಂದು ವಸ್ತುವನ್ನು ದೈವೀಗುಣವನ್ನು ಮಾತ್ರ ಕುರಿತು ಚಿಂತನೆ ಮಾಡುವೆವು. ಅದನ್ನು ನಾವು ಗುರುವೆಂದಾಗಲಿ ಧ್ಯೇಯವಸ್ತುವೆಂದಾಗಲಿ ಕರೆಯುವೆವು. * ಈಗ , ಪುರುಷೋತ್ತಮನಾದಂಥ ಆ ವ್ಯಕ್ತಿಯನ್ನು ಕುರಿತಾದ ಒಂದೇ ಒಂದು ವಿಚಾರವು ನಮ್ಮಲ್ಲಿದೆ. ನಾವು ಶೀಘ್ರವಾಗಿಯೇ ಆ ರೂಪದಲ್ಲಿ ಎಷ್ಟರ ಮಟ್ಟಿಗೆ ಆಸಕ್ತರಾಗುವೆವೆಂದರೆ ಅನ್ಯವಸ್ತುಗಳು ನಮಗೆ ಗೌಣವಾಗಿ ಕಾಣತೊಡಗುವವು. ನಾವು ಆ ಒಂದೇ ವಸ್ತುವಿಗೆ ಮಹತ್ವವನ್ನು ಕೊಡುವೆವು. ಒಂದು ಪಂಪಿನ ಮೂಲಕ ಕಾಲುವೆಯಲ್ಲಿ ನೀರನ್ನು ಹಾಯಿಸಿದರೆ ಅದು ಸ್ವಲ್ಪ ಮಟ್ಟಿಗೆ ತನ್ನ ಶಕ್ತಿಯ ಓಘದಲ್ಲಿ ಹರಿಯುವದಲ್ಲದೆ ಯಂತ್ರದ ಸಹಾಯವೂ ಅದಕ್ಕೆ ದೊರೆಯುವುದು. ಅದೇ ಪ್ರಕಾರ ನಾವು ನಮ್ಮ ಇಚ್ಛಾಶಕ್ತಿಯನ್ನು ನಮ್ಮ ಉಗಮದಲ್ಲಿ- ಅರ್ಥಾತ್ ನಾವು ಹೊರಡುವ ಸ್ಥಾನದಲ್ಲಿ ಇರಿಸಿ ವಿಚಾರಧಾರೆಯ ಮೂಲಕ ಸರ್ವಶಕ್ತನೆಂಬ ಕಾಲುವೆಯಲ್ಲಿ ಸಾಗುವೆವು.ವೃಷ್ಟಿಮನಸ್ಸಿನಿಂದ ಬಂದ ಈ ಇಚ್ಛಾಶಕ್ತಿಯು ನಮ್ಮ ದಾರಿಯನ್ನು ಸುಗಮಗೊಳಿಸುವುದು. ವ್ಯಕ್ತಿಗತ ಮನಸ್ಸಿನಿಂದ ಹಲವೊಂದು ವಸ್ತುವನ್ನು ಹೊರದೂಡಬೇಕೆಂಬ ವಿಚಾರವನ್ನು ನಾವು ಇಟ್ಟುಕೊಳ್ಳುವೆವು. ದಿನದಿನಕ್ಕೂ ಅದರ ಬಲವು ಹೆಚ್ಚುವುದು; ಹಾಗೂ ನಮ್ಮ ಮನಸ್ಸಾದರೂ ಮೇಲಕ್ಕೇರಬೇಕೆಂಬ ವಿಚಾರದಿಂದ ಬಲವತ್ತರವಾಗುತ್ತ ಹೋಗಿ ಕೆಟ್ಟ ತರಬೇತಿಯ ಪರಿಣಾಮವನ್ನು ಕಳೆದುಕೊಳ್ಳುವುದು. ಇದು ಎರಡು ಪ್ರಯೋಜನಗಳನ್ನು ಸಾಧಿಸುವುದು; ಮೊದಲನೆಯದಾಗಿ ಇದು ವ್ಯಷ್ಟಿ ಮನಸ್ಸನ್ನು ಶುದ್ಧಮಾಡುವುದು; ಎರಡನೆಯದಾಗಿ ಮಾನವ ಜೀವನದ ಗುರಿಯನ್ನು ಸಮೀಪಗೊಳಿಸುವುದು.
ಈ ಹಂತವನ್ನು ಮುಟ್ಟಿದ ಮೇಲೆ ಶೀಘ್ರದಲ್ಲಿಯೇ ನೀವು ಶಾಶ್ವತ ಶಾಂತಿಯ ಹಾಗೂ ಉದಾತ್ತತೆಯ ಸಮುದ್ರದಲ್ಲಿ ಕುಪ್ಪಳಿಸುತ್ತಿರುವಂತೆ ಅನುಭವಿಸುವಿರಿ. ನಿಮ್ಮ ವಿಚಾರವು ಸಾಗರದ ತೆರೆಗಳ ಮಧ್ಯದಲ್ಲಿ ಅಖಂಡವಾಗಿ ನೆಲಸತೊಡಗಿದಾಗ ಕೆಳಮಟ್ಟದಲ್ಲಿರುವ ಉಳಿದೆಲ್ಲ ವಸ್ತುಗಳು ಮಾಯವಾಗುವಂತೆ ಕಂಡುಬರುವುದು. ಆಗ ನಿಮ್ಮಲ್ಲಿ ಈ ಮೊದಲೇ ನೀವು ಮಾಡಿಕೊಂಡ ಆವೊಂದು ವಿಚಾರವನ್ನುಳಿದು ಬೇರಾವ ವಿಚಾರವೂ ಇರುವುದಿಲ್ಲ. ಇದರ ಪರಿಣಾಮವೆಂದರೆ ಅಡಿಯಲ್ಲಿರುವ ವಸ್ತುಗಳೆಲ್ಲ, ಉನ್ನತ ಶಿಖರದಿಂದ ಆಳವಾದ ಪ್ರಪಾತದಲ್ಲಿ ನೋಡಿದರೆ ಹೇಗೋ ಹಾಗೆ ಕಂಡುಬರುವವು.ಆ ವಸ್ತುಗಳನ್ನು ನೀವು ಕಾಣದಂತಾದಾಗ ಅವುಗಳಲ್ಲಿಯ ಆಸಕ್ತಿಯು ಇಲ್ಲದಂತಾಗುವುದು. ಕಟ್ಟಕಡೆಗೆ ಗುರಿಯು ಕಣ್ಣಿಗೆ ನಿಚ್ಚಳವಾಗಿ ಕಾಣತೊಡಗಿ ನೀವು ನಿಜವಾಗಿಯೂ ನಿರ್ದೋಷವಾಗಿಯೂ ಆರಿಸಿಟ್ಟುಕೊಂಡ ವಸ್ತುವಲ್ಲದೇ ಬೇರೇನೂ ಉಳಿಯದು.ಈಗ ನೀವು ಪ್ರಪಂಚದ ಆಸಕ್ತಿಗಳಿಂದ ಮುಕ್ತರಾಗಿರುವಿರಿ. ಅರ್ಥಾತ್ ನೀವು ವಸ್ತುಗಳನ್ನು ಕಂಡರೂ ಅವುಗಳಿಗೆ ಮಹತ್ವವನ್ನು ಕೊಡುವುದಿಲ್ಲ. ನಿಮ್ಮಲ್ಲಿ ಇಂಥದೇ ವಿಚಾರವಿರುವವರೆಗೆ ಈ ಸ್ಥಿತಿಯು ಕೆಲ ಕಾಲ ಉಳಿಯುವುದು. ಕಾಲಕಳೆದಂತೆ,ನೀವು ಮಲಗಿದ ಮನುಷ್ಯನು ತುರಿಯುವ ಅನುಭವವನ್ನು ನಿದ್ರೆಯಲ್ಲಿಯೇ ಪೂರ್ಣ ಮರೆವಿನ ಸ್ಥಿತಿಯಲ್ಲಿ ಶಮನ ಮಾಡಿಕೊಳ್ಳುವಂತೆ, ಸ್ವಾತಂತ್ರ್ಯವನ್ನೂ ಮರೆವನ್ನೂ ಅನುಭವಿಸುವಿರಿ.ವಾದ್ಯ ವೃಂದವು ಬಾರಿಸಲ್ಪಡುವ ಸ್ಥಾನದಿಂದ ದೂರವಿರುವ ಮನುಷ್ಯನು ಆ ಸಪ್ಪಳವನ್ನು ಕೇಳಲಾರನು.ಅದೇ ಸಮೀಪದಲ್ಲಿ ನಿಂತಿರುವ ಮನುಷ್ಯನಾದರೂ ತನ್ನ ವಿಚಾರದಲ್ಲಿಯೇ ಆಳವಾಗಿ ಮಗ್ನನಾಗಿದ್ದರೆ ಅದನ್ನು ಕೇಳಲಾರನು. ಆತನು ತಾನು ವಾದ್ಯದೊಡನೆ ಇರುವಂತೆ ಅನುಭವಿಸದೆ ತನ್ನ ಸಾತ್ವಿಕ ವಿಚಾರದಲ್ಲಿರುವಂತೆ ಅನುಭವಿಸುವನು. ಈ ಸ್ಥಿತಿಯನ್ನು ಅವನು ಹೇಗೆ ಸಂಪಾದಿಸಿದ? ಇದಕ್ಕೆ ಉತ್ತರವೆಂದರೆ, ಮೊದಲೇ ಹೇಳಿದಂತೆ ಅವನು ಅತ್ಯಂತ ಮಹತ್ವದ್ದೆನಿಸುವ ಯಾವುದೋ ಒಂದು ವಿಷಯದಲ್ಲಿ ಮಗ್ನನಾಗಿರುತ್ತಾನೆ. ಆಗ ಸ್ವಾಭಾವಿಕವಾಗಿ, ಮುಖ್ಯವಲ್ಲದ ವಿಷಯಗಳೆಲ್ಲ ಆತನ ಮೇಲೆ ಪರಿಣಾಮವನ್ನುಂಟು ಮಾಡಲಾರವು.ಇದೇ ವೈರಾಗ್ಯದ ಸ್ಥಿತಿ.* ಪ್ರಾಪಂಚಿಕ ವಸ್ತುಗಳ ಬಗೆಗೆ ಆತನು ಅನುಭವಿಸುವ ಅನಾಸಕ್ತಿಯು ಆತನ ಹೃದಯದ ಮೇಲೆ ಅಮುಖ್ಯ ಸ್ವಭಾವದ ವಿಷಯಗಳ ಸಂಸ್ಕಾರವಾಗಲು ಎಡೆಗೊಡುವುದಿಲ್ಲ. ಅಭ್ಯಾಸಿಗೆ ತನ್ನಲ್ಲಿಯೇ ಇರುವ ಲಕ್ಷವನ್ನು ಶೋಧಿಸುವುದೊಂದೇ ಮುಖ್ಯ ವಿಷಯವಾಗಿರುತ್ತದೆ. ವೈರಾಗ್ಯವನ್ನು ಸಂಪಾದಿಸಲು ಅನೇಕ ಜನರು ಅತ್ಯಂತ ಪ್ರಯಾಸ ಪಡುತ್ತಿರುವರು. ಅದರ ಪ್ರಾಪ್ತಿಯು ಎಷ್ಟು ಸುಲಭ! ಆತನಿಗೆ ತನ್ನ ಲಕ್ಷವನ್ನುಳಿದು ಬೇರೆ ಯಾವ ವಿಚಾರವೂ ಇಲ್ಲವಾದುದರಿಂದ ಇಟ್ಟುಕೊಳ್ಳಲು ಅಯೋಗ್ಯವಾದು ದೆಲ್ಲವನ್ನೂ ಆತನು ಕಳೆದುಕೊಂಡಿದ್ದಾನೆ.
ರಾಜಯೋಗದ ಆರಂಭದ ಅಭ್ಯಾಸದಿಂದಲೇ ನೀವು ವೈರಾಗ್ಯವನ್ನು ಸಂಪಾದಿಸಿದಿರಿ. ನಿಮ್ಮ ಮನಸ್ಸು ಈಗ ಒಂದು ರೀತಿಯಿಂದ ಶಾಶ್ವತವಾದ ಸುಖ-ಶಾಂತಿಗಳ ಕ್ಷೇತ್ರಕ್ಕೆ ಹೊಂದಿಕೊಂಡಿದೆ. ಬೇರೆ ಶಬ್ದಗಳಲ್ಲಿ ಹೇಳುವದಾದರೆ,ನೀವು ನಿಮ್ಮ ವ್ಯಷ್ಟಿ ಮನಸ್ಸಿನಿಂದ ಉನ್ನತ ಕ್ಷೇತ್ರದೆಡೆಗೆ ದಾರಿ ಮಾಡಿರಿವಿರಿ. ಸರ್ವಶಕ್ತನ ರಾಜ್ಯದಲ್ಲಿಯ ಶಾಂತಿಯ ಸೌಮ್ಯ ತೆರೆಗಳು ವ್ಯಷ್ಟಿ ಮನಸ್ಸಿನ ಕಡೆಗೆ ನೇರವಾಗಿ ಹರಿದು ಬರುವುದರಿಂದ ಕಾಲಕ್ರಮದಲ್ಲಿ ನೀವು ಆ ಶಾಂತಿಯೊಂದಿಗೆ ಬೆರೆತು ಹೋಗುವಿರಿ.
ನಾವು ನಮ್ಮ ಕಲ್ಪನೆಗೂ ಮೀರಿದ ಒಂದೇ ಒಂದು ವಸ್ತುವಿನಲ್ಲಿ ಅನುರಕ್ತರಾಗುತ್ತ ಅದೊಂದರ ಚಿಂತನೆಯನ್ನೇ ಮಾಡಿದೆವು.ಈಗ ನಮ್ಮ ಹೃದಯದಲ್ಲಿ ಅದರ ಹಿರಿಮೆಯ ಕಲ್ಪನೆಯಿದೆ. ಸ್ವಾಭಾವಿಕವಾಗಿ ನಮ್ಮನ್ನು ನಾವು ಅದರ ಭಾಗವೆಂದೋ ಇಲ್ಲವೇ ಅದರೊಂದಿಗೆ ಹೋಲಿಸಿದಾಗ ಒಂದು ಕ್ಷುದ್ರ ವಸ್ತು ವೆಂದೋ ತಿಳಿಯುವೆವು. ಹೀಗೆ ನಾವು ಪುನಃ ಪುನಃ ಭಾವಿಸುವೆವು. ನಾವೀಗ ಸಾಕ್ಷಾತ್ಕಾರದ ಆ ಉನ್ನತ ವಲಯದೊಂದಿಗೆ ನಮ್ಮ ವಿಚಾರವನ್ನು ಜೋಡಿಸಿ ಒಂದು ದಾರಿಯನ್ನು ಮಾಡಿದ್ದೇವೆ.ಇದನ್ನು ನಾವು ಅಭ್ಯಾಸ ಮಾಡಿದಂತೆ ‘ಮಲಿನತೆಯ ಕಾರ್ಮೋಡಗಳು ಚೆದುರತೊಡಗಿ ನಮ್ಮ ಇಚ್ಛಾಶಕ್ತಿ ಯಿಂದ ಒಂದು ತರಹದ ನಿರ್ವಾತ ಪ್ರದೇಶವು ನಿರ್ಮಾಣವಾಗುವುದು. ಅನಂತರ ಆ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಒಳಗೆ ಹರಿದು ಬರಲಾರಂಭಿಸುವುದು; ಪರಿಣಾಮ ಸ್ವರೂಪವಾಗಿ ವೈಯಕ್ತಿಕತೆಯು ಹೊರಟುಹೋಗಿ ಮನಸ್ಸು ಮಾತ್ರ ಉಳಿಯುವುದು.ಮನಸ್ಸು ತನ್ನನ್ನು ದೈವಿಮನಸ್ಸಿನಿಂದ ಬೇರ್ಪಡಿಸಿಕೊಂಡಾಗ ವ್ಯಷ್ಟಿಮನಸ್ಸೆಂದೆನಿಸಿ ಕೊಳ್ಳುವುದು. ಅದು ಬೇರ್ಪಟ್ಟಂತೆ ನಾವು ಅನುಭವಿಸುವ ಕಾರಣವೇನು? ಏಕೆಂದರೆ ನಮ್ಮ ಕರ್ಮಗಳಿಂದ ಮತ್ತು ನಾವು ತಪ್ಪುದಾರಿ ಹಿಡಿದುದರಿಂದ ಆ ಪರಾ ಮನಸ್ಸಿನ ಕಾರ್ಯಗಳು ಅದರ ಮೇಲೆ ನಡೆಯದಂತಾಗುವವು.ಅದು ಪ್ರಾಪಂಚಿಕ ವಸ್ತುಗಳಿಂದ ಎಷ್ಟರಮಟ್ಟಿಗೆ ತುಂಬಿಹೋಗುವುದೆಂದರೆ ನಾವು ಕೇವಲ ಇವುಗಳ ಪ್ರಭಾವವನ್ನೇ ಅನುಭವಿಸುವೆವು ಹೊರತು ಸತ್ಯವಸ್ತುವಿನಲ್ಲ. ಈ ಸಂಸ್ಕಾರಗಳು ನಮ್ಮ ಇಂದ್ರಿಯಗಳ ಮೇಲೆ ಅಧಿಕಾರ ನಡೆಸುವಷ್ಟು ಪ್ರಬಲವಾಗುವವು. ಅದರ ಮೇಲೆ ಪರಿಸರವೂ ಪ್ರಭಾವ ಬಿರುವುದೂ ಎಂಬುದರಲ್ಲಿ ಸಂದೇಹವಿಲ್ಲ. ಈಗ, ನಾವು ಆ ಮುಖ್ಯ ಸಾತ್ವಿಕ ವಿಚಾರಕ್ಕೆ ನಮ್ಮ ಮನಸ್ಸಿನಲ್ಲಿ ಎಡೆಗೊಟ್ಟರೆ ನಾವು ಮಾಡಿಕೊಂಡ ಸಂಸ್ಕಾರಗಳು ತಮ್ಮ ಸ್ಥೂಲತೆಯನ್ನು ಕಳೆದುಕೊಳ್ಳುವವು. ಕಾಲಕ್ರಮದಲ್ಲಿ ನಾವು ಇವುಗಳಿಂದ ಮುಕ್ತರಾಗುವೆವು. ಆಗ ಪರಾಮನಸ್ಸಿನಲ್ಲಿರುವುದರ ಪರಿಣಾಮವು ಸಹ ಅನುಭವಕ್ಕೆ ಬರುವುದು. ನೀವು ಅಭ್ಯಾಸವನ್ನು ಮುಂದುವರಿಸಿದರೆ ಮೇಲಿನ ಮಟ್ಟದಲ್ಲಿ ಏನಿರುವುದೋ ಅದೇ ನಿಮ್ಮ ವ್ಯಷ್ಟಿಮನಸ್ಸಿನ ಅನುಭವಕ್ಕೆ ಬರುವುದು.ನಿಮ್ಮ ಮನಸ್ಸಿನಲ್ಲಿ ಈ ಅನುಭವಗಳು ಸ್ಥಾಯಿಯಾದಾಗ ನೀವು ಅದರ ವೈಯಕ್ತಿಕತೆಯನ್ನು ಕಳೆದು ಬಿಟ್ಟಿರುವರೆಂದು ತಿಳಿಯಿರಿ. ಸೃಷ್ಟಿಯ ಕಾಲವೊದಗಿದಾಗ ಕೇಂದ್ರದ ಅಡಿಯಲ್ಲಿರುವ ಗುಪ್ತ ಚಲನವು ಬಲಪಟ್ಟು ಕ್ಷೋಭವನ್ನುಂಟು ಮಾಡಿತು.ಅನಂತರ ಅದೇ ವಿಶ್ವದ ರಚನೆಗೆ ದಾರಿಮಾಡಿಕೊಟ್ಟಿತು.ಅದನ್ನು ಆ ಸರ್ವಶಕ್ತನ ಆದಿಮನಸ್ಸೆಂದಾಗಲಿ ಪರಾಮನಸ್ಸೆಂದಾಗಲಿ ಹೇಳಬಹುದು.ನಾವು ನಮ್ಮ ಅಸ್ತಿತ್ವಕ್ಕಾಗಿ ಆ ಪರಾಮನಸ್ಸಿಗೇ. ಋಣಿಯಾಗಿರುವೆವು.ಆ ಆದಿಮನದ ಹಿಂದುಗಡೆ ಕೇಂದ್ರ ಅಥವಾ’ತಮ’ದ ಅವಸ್ಥೆಯಿದೆ.ಇದನ್ನು ನಾನು ನನ್ನ’ಸಹಜ ಮಾರ್ಗದ ಹತ್ತು ನಿಯಮಗಳ ವ್ಯಾಖ್ಯಾನ’ವೆಂಬ ಪುಸ್ತಕದಲ್ಲಿ ವಿಶದವಾಗಿ ವಿವರಿಸಿದ್ದೇನೆ.
ನೀವು ನಿಮ್ಮ ವ್ಯಷ್ಟಿ ಮನಸ್ಸನ್ನು ಪರಾಮನಸ್ಸಿನಮಟ್ಟಕ್ಕೆ ತಂದುದಾದರೆ,ಮುಂದೆ, ಅದರ ಮೇಲಿರುವ ಕೇಂದ್ರದೆಡೆಗೆ ಅಥವಾ ಸರ್ವಶಕ್ತನೆಡೆಗೆ ಜಿಗಿಯುವುದಷ್ಟೇ ಉಳಿಯುವುದು.ಆ ಸ್ಥಿತಿಯೊಂದಿಗೆ ನೀವು ಸಾಮರಸ್ಯವನ್ನನುಭವಿಸಿದಾಗ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡಂತೆ ಅಲ್ಲಿ ನೀವು ಕೇವಲ ಈಜಾಡುವಿರಿ.ಅದರ ಅಂತವನ್ನು ಯಾರೂ ಅರಿಯರು. ಈ ಸ್ಥಿತಿಯು ನಿಮ್ಮಲ್ಲಿ ಉಂಟಾದಾಗ ನೀವು ಸರ್ವತ್ರ ಶಾಂತಿ, ಸಮತೆ,ಸರಳತೆಗಳನ್ನನುಭವಿಸುವಿರಿ.ನೀವು ಈ ಸ್ಥಿತಿಯಲ್ಲಿ ನಿರಂತರವಾಗಿ ಇರತೊಡಗಿದರೆ ಈ ಮೂರು ಇಲ್ಲದಂತಾಗುವವು.ಈಗ ಐಕ್ಯವು ತಾನೇತಾನಾಗಿದೆ. ಪ್ರಾರಂಭದ ಅಭ್ಯಾಸದಿಂದ ನಾವು ಇಷ್ಟೆಲ್ಲವನ್ನು ಪಡೆಯುವೆವು.ಹೀಗಿದೆ ಈ ಪದ್ಧತಿಯ ಪ್ರಭಾವ.ಬೇಕಾದರೆ ಅಭ್ಯಾಸ ಮಾಡಿನೋಡಿರಿ.
ಸಾಮನ್ಯವಾಗಿ ನಾವು ತೋರಿಕೆಗೆ ಮಾನವ ರೂಪದ ಧ್ಯಾನವನ್ನು ಕುರಿತು ಒತ್ತಿ ಹೇಳುವೆವು.ಆಧ್ಯಾತ್ಮಿಕ ಭಾವಗಳಿಗೆ ಇದು ಘಾತಕವಾದುದೆಂದು ವಿಮರ್ಶಕರು ತಿಳಿಯಬಹುದು. ಆದರೆ ಧ್ಯೇಯ ವ್ಯಕ್ತಿಯು ಅಸಾಧಾರಣ ಯೋಗ್ಯತೆಯವನಿದ್ದು ಆಧ್ಯಾತ್ಮಿಕ ತರಬೇತಿಗಾಗಿ ಕೇವಲ ನಿರ್ಗುಣದಿಂದ ಕೆಳಗಿಳಿದವನಾಗಲಿ,ಪರಾಕಾಷ್ಠೆಯ ಸ್ವಪ್ರಯತ್ನದಿಂದ ಈ ಕಾರ್ಯಕ್ಕೆ ಬೇಕಾಗುವ ಆಧ್ಯಾತ್ಮಿಕ ವಿಕಾಸದಮಟ್ಟವನ್ನು ಮುಟ್ಟಿದವನಾಗಲಿ ಆಗಿದ್ದರೆ ಏನೂ ಬಾಧಕವಾಗಲಾರದು ಉದಾಹರಣೆಗಾಗಿ ನಾನು ನಮ್ಮ ಸಮರ್ಥ ಗುರುಗಳಾದ ಫತೆಹ್ ಗಡದ ಮಹಾತ್ಮಾ ರಾಮಚಂದ್ರಜಿಯವರ ಹೆಸರನ್ನು ತೆಗೆದುಕೊಳ್ಳುವೆನು.ಈ ಮಾತು ಶೀಘ್ರದಲ್ಲಿಯೇ ಬೆಳಕಿಗೆ ಬರುವುದಲ್ಲದೆ ಜಗತ್ತು ಅವರನ್ನು ಎಂದೆಂದಿಗೂ ಸ್ಮರಿಸುವಂತ. ಕಾಲ ಬರುವುದು ಅವರು ನಿಸರ್ಗದೊಡನೆ ಪೂರ್ಣ ಸಮರಸವಾಗಿದ್ದರು.ಇಂಥ ಮಹಾತ್ಮರ ಮೇಲೆ ಧ್ಯಾನಮಾಡಿದ್ದಾದರೆ. ನಾವು ಅರಸುತ್ತಿರುವ ವಸ್ತುವುತಾನಾಗಿಯೇ ದೊರಕುವುದು.ರೇಖಾಗಣಿತದಪ್ರಕಾರ ‘ಅ’ವು ‘ಬ’ಗೆ ಸಮಾನವಾಗಿದ್ದು ‘ಕ’ವು ‘ಅ’ಗೆ ಸಮಾನವಾದರೆ ಅದು ‘ಬ’ದೊಂದಿಗೂ ಸಮವಾದಂತಾಯಿತು.ಇಂಥ ಗುರುವನ್ನು ನಿಮ್ಮ ಮಾರ್ಗದರ್ಶಿಯಾಗಿ ಪಡೆದುದಾದರೆ ಜೀವನದಸಮಸ್ಯೆಯು ಸಹಜವಾಗಿಯೇ ಪರಿಹಾರವಾಗುವುದು.ಇದಕ್ಕೊಂದು ಉದಾಹರಣೆ ಕೊಡುವೆನು. ಅರ್ಜುನನು ಶ್ರೀ ಕ್ರಷ್ಣನನ್ನು ಕುರಿತು,’ನಿನ್ನನ್ನು ಪೂಜಿಸುವವರು ಹಾಗೂ ಅವ್ಯಕ್ತವನ್ನುಪೂಜಿಸುವವರು ಇವರಲ್ಲಿ ಯಾರು ಶ್ರೇಷ್ಠಯೋಗಿಗಳು? ಎಂದು ಕೇಳಿದನು. ಶ್ರೀ ಕೃಷ್ಣನು ಹೇಳಿದ: ‘ಯಾರು ನನ್ನನ್ನು ಅತ್ಯಂತ ಶ್ರದ್ಧೆಯಿಂದ ಸತತವಾಗಿ. ಪೂಜಿ. ಸುವರೋ ಅವರೇ ಶ್ರೇಷ್ಠ ಯೋಗಿಗಳು.ಸರ್ವಶಕ್ತವೂ ಸರ್ವವ್ಯಾಪಿಯೂ ಸರ್ವಜ್ಞವೂ ಆದಿ ಅವ್ಯಕ್ತ ಕೇವಲವನ್ನು. ಆಶ್ರಯಿಸಿ ಪೂಜಿಸುವವರ ಪರಿಶ್ರಮವು ಹೆಚ್ಚಿನದಾಗಿದೆ.ಏಕೆಂದರೆ ವಸ್ತುತಃ ದೇಹಧಾರಿಗಳಿಗೆ ಸ್ವಪ್ರಯತ್ನದಿಂದ ಆ ದಾರಿಯಲ್ಲಿ ನಡೆಯುವುದು ಬಲುಕಠಿಣ ವಾದುದು’ನಾವು ಇಂಥ ಮಹಾತ್ಮನನ್ನು ಧ್ಯೇಯವನ್ನಾಗಿರಿಸಿಕೊಂಡು ಆತನನ್ನು ಪ್ರೀತಿಸತೊಡಗಿದಾಗ ಆತನ ಮೂಲಕ ದೈವೀಶಕ್ತಿಯು ಹರಿದು ಬರಲಾರಂಭಿಸುವುದು; ಏಕೆಂದರೆ, ಮಹಾತ್ಮರು ಇಂಥ ಶಕ್ತಿಗಳನ್ನು ಪಡೆದಿರುವರು. ನಮ್ಮ ಅಕಾರ್ಯಗಳಿಂದಲೇ ಕಲುಷಿತಗೊಳಿಸಲ್ಪಟ್ಟ ನಮ್ಮ ವ್ಯಕ್ತಿಗಳು ಹಾಗೂ ಭಾವೋದ್ವೇಗಗಳು ತಮ್ಮ ಮೂಲ ರೂಪಕ್ಕೆ ಬರತೊಡಗಿ ಉದಾತ್ತತೆಯನ್ನು ಹೊಂದುವವು. ಮೂಲರೂಪವೆಂದರೆ,’ಮೊಟ್ಟಮೊದಲು ಮಾನವ ದೇಹವನ್ನು ಧರಿಸುವಾಗ ಹೇಗಿದ್ದೇವೋ ಹಾಗೆಂದು’ಇಲ್ಲಿ ನನ್ನ ವಿವಕ್ಷೆ.ನಮ್ಮ ಕಾರ್ಯಗಳೆಲ್ಲ ಅನಿಯಂತ್ರಿತವಾಗಿ ಮನಸ್ಸು ಅಶಿಕ್ಷಿತವಾಗಿರುವುದರಿಂದ ನಾವು ಗುರುವೆಂಬ ಮಹಾತ್ಮನ ಆಶ್ರಯವನ್ನು ಹುಡುಕುವೆವು.
* * *
1*ಗುರುವನ್ನು ಧ್ಯೇಯವನ್ನಾಗಿಟ್ಟುಕೊಳ್ಳುವ ಕ್ರಮವು ಅತ್ಯಂತ ಪ್ರಭಾವಶಾಲಿಯಾದುದೇನೋ ನಿಜ.ಆದರೆ ಆತನು ನಿಜವಾಗಿಯೂ ಅತ್ಯುಚ್ಚಕೋಟಿಯವನಾಗಿದ್ದು ಅನಂತದಲ್ಲಿ ಲೀನನಾಗಿರಬೇಕು ಅಥವಾ ಮೂರ್ತಿಮಂತ ನಿಸರ್ಗವಾಗಿ ಪರಿವರ್ತನ ಹೊಂದಿರಬೇಕು. ಇಲ್ಲದಿದ್ದರೆ ಅಭ್ಯಾಸಿಯ ಮೇಲೆ ವಿಪರೀತ ಪರಿಣಾಮವುಂಟಾಗಿ ಆತನ ಅಂತಿಮ ಧ್ಯೇಯ ಸಾಧನೆಗೆ ಮಾರಕವಾಗುವುದು.
2* ಇಂದು ಸಾಮಾನ್ಯವಾಗಿ ವೈರಾಗ್ಯವೆಂದರೆ ಕೇವಲ ತೋರಿಕೆಯ ಸಂನ್ಯಾಸ್ಯ ಪ್ರಪಂಚದ ಎಲ್ಲ ಸಂಬಂಧಗಳಿಂದಲೂ. ದೂರವಾಗಿರುವುದು ಹಾಗೂ ಜೀವನದ ಕರ್ತವ್ಯಗಳನ್ನು ಪರಿಗಣಿಸದೆ ಇರುವುದು-ಎಂಬ ಭಾವನೆಯಾಗಿದೆ.ಒತ್ತಾಯದ ಬಾಹ್ಯ ವಿರಕ್ತಿಯಾಗಲಿ,ಪ್ರಾಪಂಚಿಕ ವಸ್ತುಗಳ ಬಗ್ಗೆ ತಿರಸ್ಕಾರವಾಗಲಿ ಜಿಗುಪ್ಸೆಯಾಗಲಿ ಅಥವಾ ಇನ್ನೇನಾದರೂ ಆಗಲಿ ವೈರಾಗ್ಯವಲ್ಲ.ಅದು ನಮ್ಮ ಸ್ವಾಭಾವಿಕ ಜೀವನಕ್ಕೆ ಅನಾವಶ್ಯಕವಾದ ವಸ್ತುಗಳಿಂದ ನಮ್ಮ ಹೃದಯವನ್ನು ತಿರುಗಿಸುವ ಋಜುವಾದ ಅಂತರಾನುಭವ. ಹೀಗೆ ಒಬ್ಬ ಸಾಮಾನ್ಯ ಮನುಷ್ಯನು ಕೂಡಾ ಪ್ರಾಪಂಚಿಕ ಜೀವನವನ್ನು ಸಾಗಿಸುತ್ತ ತನಗೆ ಅವಶ್ಯಕವಾದ ವಸ್ತುಗಳನ್ನು ಬಳಸುತ್ತ ದೈನಂದಿನ ಜೀವನದಲ್ಲಿಯೇ ವೈರಾಗ್ಯವನ್ನು ಸಂಪಾದಿಸಬಲ್ಲನು.