ರಾಜಯೋಗದಲ್ಲಿ ಸಾಮಾನ್ಯವಾಗಿ ನಾವು ಧ್ಯಾನದಿಂದ ಆರಂಭ ಮಾಡುವೆವು.ಇದಕ್ಕೊಂದು ದೊಡ್ಡ ತಾತ್ತ್ವಿಕ ತಳಹದಿಯಿದೆ. ನಾವು ಯಾವಾಗಲೂ ಪ್ರಾಪಂಚಿಕ ವಿಷಯಗಳಲ್ಲಿ ತೊಡಗಿರುವೆವು.ನಮಗೆ ಕೆಲಸವಿಲ್ಲದಾಗ ನಮ್ಮ ವಿಚಾರಗಳಿಗೆ ರೆಕ್ಕೆ ಮೂಡಿದಂತಾಗುವುದು. ನಾವು ಯಾವಾಗಲೂ ಗೊಂದಲ ಹಾಗೂ ಅವ್ಯವಸ್ಥೆಯಲ್ಲಿರುವೆವು.ನಮ್ಮ ವ್ಯಕ್ತಿಗತ ಮನಸ್ಸು ಈ ಸ್ಥಿತಿಗೆ ಹೊಂದಿಕೊಂಡಿರುವುದು.ಈ ಪ್ರಕಾರ ನಾವು ಎಲ್ಲವನ್ನೂ ತಿರುವುಮುರುವು ಮಾಡಿದ್ದೇವೆ. ನಮ್ಮ ಕೃತಿಗಳು ಹಾಗೂ ವಿಚಾರಗಳು ಈ ವಿಪರ್ಯಾಸದಲ್ಲಿ ಬಹುಮಟ್ಟಿಗೆ ಕಾರಣವಾಗಿವೆ.ನಾವು ವಿವಿಧ ವಿಚಾರಗಳ ಮತ್ತು ಕಲ್ಪನೆಗಳ ಸಂಪರ್ಕದಲ್ಲಿದ್ದಾಗ ಅವು ನಮ್ಮ ಇಂದ್ರಿಯಗಳ ಹಾಗೂ ಭಾವನೆಗಳ ಮೇಲೆ ಸಂಸ್ಕಾರಗಳನ್ನುಂಟು ಮಾಡುವವು.ಆಗ ಎಲ್ಲ ಇಂದ್ರಿಯಗಳೂ ಕೆಟ್ಟುಹೋಗಿ ತಪ್ಪು ದಾರಿಯನ್ನು ಹಿಡಿಯುವವು.ಈ ಅಭ್ಯಾಸವು ಬಹುಕಾಲದವರೆಗೆ ಮುಂದುವರಿದರೆ ನಾವು ಅವನ್ನು ಮತ್ತಷ್ಟೂ ಕೆಡಿಸುವೆವು. ಹೀಗೆ ನಾವು ಇಂದ್ರಿಯಗಳ ಹಾಗೂ ಸಂವೇದನೆಗಳ ಮೇಲೆ ಉಂಟುಮಾಡಿದ ಸಂಸ್ಕಾರವು ಅವನ್ನು ಬಂಡೆಗಲ್ಲಿನಂತೆ ಗಟ್ಟಿಮಾಡಿ ನಿರ್ಬೋಧಗೊಳಿಸುವವು.ಆತ್ಮವೇನೋ ಆಲಿಪ್ತವಾಗಿಯೇ ಇರುವುದು.ಆದರೆ ನಾವೇ ಉಂಟುಮಾಡಿದ ಇಂಥ ಅಡ್ಡಿ-ಆವರಣಗಳು ರೇಶ್ಮೆಹುಳದ ಗೂಡಿನಂತೆ ಅದನ್ನು ಆವರಿಸುವವು.ಅನಂತರ ಏನಾಗುವುದು?ನಾವು ಆತ್ಮದ ಕಡೆಗೆ ಇಣಕಿ ಕೂಡ ನೋಡಲಾಗುವುದಿಲ್ಲ; ಸಾಕ್ಷಾತ್ಕಾರವಂತೂ ದೂರದಮಾತಾಯಿತು. ನಮ್ಮ ದುರ್ವಿಚಾರಗಳ ಹಾಗೂ ದುರಾಚಾರಗಳ ಪರಿಣಾಮದಿಂದಾಗಿ ನಾವು ನಮ್ಮ ವಿವೇಕಬುದ್ಧಿಯನ್ನೂ ಯಥಾರ್ಥಜ್ಞಾನವನ್ನೂ ಕೆಡಿಸಿಬಿಡುವೆವು. ಮೇಲೆ ಹೇಳಿದಂತೆ ಇಂಥ ಜಡಸ್ಥಿತಿಯನ್ನು ಹೊಂದಿದವರಿಗೆ ರಾಜಯೋಗದ ಶಿಕ್ಷಣ ಪದ್ಧತಿಯು ಹಿಡಿಸುವುದಿಲ್ಲ. ಆದುದರಿಂದಲೇ ನಾವು ಹೇಳುವುದರ ಕಡೆಗೆ ಜನರು ಕಿವಿ ಗೊಡುವುದಿಲ್ಲ. ಸತ್ಯವನ್ನು ಪಡೆಯುವುದಕ್ಕಾಗಿ ಅವರು ದೃಢನಿರ್ಧಾರ ಮಾಡಿದುದಾದರೆ ಗುರುದೇವರ ಶಕ್ತಿಯು ಅವರಲ್ಲಿ ಪರಿಣಾಮವನ್ನುಂಟು ಮಾಡುವುದು. ಅಲ್ಲದೆ, ಯೌಗಿಕ ಪ್ರಾಣಾಹುತಿಯ ಬಲದಿಂದ ಅಭ್ಯಾಸಿಯಲ್ಲಿಯ ಆಂತರಿಕ ತೊಡಕುಗಳನ್ನು ದೂರಮಾಡಿ ಆವರಣಗಳನ್ನು ಛೇದಿಸಲು ಸಮರ್ಥನಿರುವ ಗುರುವಿನ ಸಹಾಯದಿಂದಲೇ ಸ್ಥೂಲತೆಯು ನಿರ್ಮೂಲವಾಗಬಲ್ಲದು.ಅಭ್ಯಾಸಿಗೆ ಏಕಾಗ್ರತೆಗಾಗಿ ಹಲವು ಬಿಂದುಗಳ ಮೇಲೆ ಧ್ಯಾನ ಮಾಡಲು. ಹೇಳಲಾಗುತ್ತದೆ. ಅವನ್ನು ಚಕ್ರಗಳೆಂದೂ ಅಲಂಕಾರಿಕವಾಗಿ ಪದ್ಮಗಳೆಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ನಾವು ಧ್ಯಾನಕ್ಕಾಗಿ ಹೃದಯವನ್ನು ತೆಗೆದುಕೊಳ್ಳುತ್ತೇವೆ. ಹೃದಯವು ರಕ್ತವನ್ನು ಪೂರೈಸುವ ಕೇಂದ್ರಸ್ಥಾನವಾಗಿದೆ. ಅದು ರಕ್ತವನ್ನು ಶುದ್ಧಗೊಳಿಸಿ ದೇಹದ ಬೇರೆ ಬೇರೆ ನರಗಳಿಗೂ ಜೀವಕೋಶಗಳಿಗೂ ಮುಟ್ಟಿಸುವುದು. ಈಗ, ನಾವು ಹೃದಯವನ್ನು ಧ್ಯಾನದ ಕೇಂದ್ರವನ್ನಾಗಿ ತೆಗೆದುಕೊಂಡುದರಿಂದ ನಮ್ಮ ಶರೀರದೊಳಗೆಲ್ಲ ಹರಿಯುವ ರಕ್ತದ ಮೇಲೆ ಪರಿಣಾಮವಾಗುವುದು. ನಮ್ಮವೇ ಆದ ವಿಚಾರಗಳ ಹಾಗೂ ಕೃತಿಗಳ ಪರಿಣಾಮ ಸ್ವರೂಪವಾಗಿ ಉಂಟಾದ ಸ್ಥೂಲತೆಯು ಕರಗಲಾರಂಭಿಸುವುದು. ಈ ಪದ್ಧತಿಯಂತೆ ಹೃದಯದ ಮೇಲೆ ಧ್ಯಾನ ಮಾಡತೊಡಗಿದ ಮೊದಲ ದಿನದಿಂದಲೇ ನಮಗೆ ಈ ಲಾಭವು ದೊರೆಯಲಾರಂಭಿಸುವುದು. ರಾಜಯೋಗದ ಮೊದಲನೆಯ ಹಂತದಲ್ಲಿಯೇ ಧ್ಯಾನದಿಂದ ಸಾಗುವುದರ ಅಗತ್ಯವೆನೆಂದು ಜನರು ಕೇಳಬಹುದು. ಉತ್ತರವು ತೀರ ಸರಳ ಮತ್ತು ಸ್ಪಷ್ಟವಾಗಿದೆ. ನಮ್ಮ ವೈಯಕ್ತಿಕ ಮನಸ್ಸಿಗೆ ರೂಢಿಯಾದ ಚಾಂಚಲ್ಯವು ತೊಲಗಬೇಕೆಂಬ ದೃಷ್ಟಿಯಿಂದ ನಾವು ಒಂದು ಬಿಂದುವಿನ ಕಡೆಗೆ ನಮ್ಮನ್ನು ಸಂಗ್ರಹಿಸುತ್ತಿದ್ದೇವೆ. ಈಗ ಅದು ತನ್ನ ಸ್ವಭಾವವನ್ನು ಬದಲಿಸತೊಡಗಿದ್ದರಿಂದ ಕ್ರಮೇಣ ನಾವು ಈ ಅಭ್ಯಾಸದಿಂದ ಅದನ್ನು ಸರಿಯಾದ ಮಾರ್ಗದಲ್ಲಿ ತೊಡಗಿಸುವೆವು. ಹೀಗಾದಾಗ ಸ್ವಾಭಾವಿಕವಾಗಿಯೆ ನಮ್ಮ ವಿಚಾರಗಳು ತಪ್ಪುದಾರಿಗೆ ಹೋಗುವುದಿಲ್ಲ.ನಾವು ಮೊಟ್ಟ ಮೊದಲು ಸೃಷ್ಟಿಯಲ್ಲಿ ಬಂದಾಗ ಪರಿಪೂರ್ಣರಾಗಿಯೂ ಸರ್ವಶಕ್ತನಾದ ಭಗವಂತನಿಗೆ ತೀರಹತ್ತಿರವಾಗಿಯೂ.ಇದ್ದೆವೆಂದು ಹಿಂದೂ ಜನರಲ್ಲಿ ಒಂದು ನಂಬಿಗೆಯಿದೆ. ಇದು ನಿಜ ಕಾಲ ಕಳೆದಂತೆಲ್ಲ ಅವನತಿಯು ಆರಂಭವಾಗಿ ನಾವೀಗ ಮಾನವತೆಯ ಕೆಳಗಿನ ಸ್ತರದಲ್ಲಿ ನಮ್ಮನ್ನು ಕಾಣುತ್ತಿದ್ದೇವೆ. ನಮ್ಮಲ್ಲಿ ಇದನ್ನೆಲ್ಲ ಯಾರು ಉಂಟು ಮಾಡಿದರು? ಬೇರೆ ಯಾರೂ ಅಲ್ಲ ನಾವೇ . ನಾವೇ ನಮ್ಮನ್ನು ಅವನತಿಯತ್ತ ಒಯ್ದೆವು; ನಾವೇ ನಮ್ಮನ್ನು ದೇವರ ರಾಜ್ಯದಿಂದ ಬಹು ದೂರವಾದ ಅಂಧಕಾರದ ಪ್ರದೇಶದಲ್ಲಿ ಎಸೆದುಕೊಂಡಿದ್ದೇವೆ. ನಮ್ಮ ದುಷ್ಟ ವಿಚಾರಗಳ ಎಳೆಗಳಿಂದ ಬಲೆಯನ್ನು ನಿರ್ಮಿಸಿ ನಾವೇ ಈ ಅನರ್ಥವನ್ನುಂಟು ಮಾಡಿದ್ದೇವೆ. ಈಗ, ನಾವು ಯಾವ ಸ್ಥಿತಿಯಿಂದ ಕೆಳಗಿಳಿದೆವೋ ಆ ಸ್ಥಿತಿಗೆ ಅಪಗಮನದ ಮೂಲಕ ಹೋಗಬೇಕೆಂದಿಚ್ಛಿಸುವೆವು. ಈ ಜಗತ್ತನ್ನು ನಿರ್ಮಿಸುವಾಗ ಆ ಸರ್ವಶಕ್ತನು ತನ್ನ ಸಂಕಲ್ಪ ಶಕ್ತಿಯ ಮೂಲಕ ಕೇಂದ್ರದ ಅಡಿಯಿಂದ ಸೃಷ್ಟಿಕಾರ್ಯವನ್ನು ಪೂರ್ತಿ ಗೊಳಿಸಲು ಬೇರೆ ಬೇರೆ ರೂಪ ವರ್ಣಗಳಲ್ಲಿ ಜಾಳಿಗೆಯ ಎಳೆಗಳಂತೆ ಸೃಷ್ಟಿಯ ಶಕ್ತಿಗಳನ್ನು ಪ್ರಕಟಗೊಳಿಸಿದನು. ಹಾಗೆಯೇ ನಾವಾದರೂ ನಮ್ಮ ಕೇಂದ್ರಶಕ್ತಿಯನ್ನು ಒಂದು ಬಿಂದುವಿನ ಮೇಲೆ ಪ್ರಯೋಗಿಸುವೆವು. ಸೃಷ್ಟಿಯು ಬಾಹ್ಯ ರೂಪದಲ್ಲಿ ಪ್ರಕಟವಾಗುವುದಕ್ಕಿಂತ ಮೊದಲು ಅವನೊಡನೆ ಒಂದಾಗಿದ್ದಿತು. ಸ್ಪಷ್ಟ ವಸ್ತುಗಳು ಮತ್ತೆ ಆತನಲ್ಲಾಗಲಿ (ಈ ಪುಸ್ತಕದಲ್ಲಿ ಮುಂದೆ ಸ್ಪಷ್ಟೀಕರಿಸಲಾಗುವಂತೆ) ಮೂಲಬಿಂದುವೆಂದು ಕರೆಯಲಾದ ಕೇಂದ್ರದಲ್ಲಾಗಲಿ ಲಯವಾಗುವವರೆಗೂ ಆತನ ಕೇಂದ್ರದಲ್ಲಿಯೇ ಇರುವನು. ನಾವು ಸದಾ ಅವುಗಳೊಂದಿಗೇ ಇರುವೆವು. ಈಗ, ನಾವು ನಮ್ಮ ಕೇಂದ್ರಕ್ಕೆ ತಿರುಗಿ ಹೋಗಬೇಕೆಂದಿದ್ದೇವೆ. ಅದರ ಸ್ವಾಭಾವಿಕ ಪದ್ಧತಿಯೆಂದರೆ, ಈ ವಸ್ತುಗಳನ್ನೆಲ್ಲ ಮೂಲಬಿಂದುವಿಗೆ ಎಳೆದೊಯ್ಯುವುದು. ನಾವು ಧ್ಯಾನದಲ್ಲಿ ಅದನ್ನೇ ಮಾಡುವೆವು. ಕೆಳಗೆ ಬರುವಾಗ ನಾವು ಪ್ರಳಯದ ಸ್ಥಿತಿಯಲ್ಲಿದ್ದೆವಾದ ಕಾರಣ ನಮ್ಮ ಪ್ರಳಯವನ್ನುಂಟು ಮಾಡಲು ಅದೇ ಒಂದು ಬಿಂದುವಿಗೆ ಬರುವೆವು. ಧ್ಯಾನದಿಂದ ನಾವು, ಹೃದಯ ಮಂಡಲದ ಪರಿಸರವನ್ನೆಲ್ಲ ವ್ಯಾಪಿಸುವಂತಹ ಸಂಕಲ್ಪವನ್ನು ಹೃದಯದಲ್ಲಿ ಮಾಡುವೆವು. ಅದು ಕ್ರಮೇಣ ವಿಸ್ತಾರವಾಗುತ್ತ ದೇಹದೊಳಗಿನ ಎಲ್ಲ ಚಕ್ರಗಳಿಗೂ ವ್ಯಾಪಿಸುವುದು. ಈ ಪ್ರಕಾರ ಎಲ್ಲ ಚಕ್ರಗಳೂ ಬೆಳಗಲಾರಂಭಿಸುವವು. ಈ ಸಂಕಲ್ಪ ವಲಯವು ಹಿಗ್ಗುತ್ತ ಅನೇಕ ಮಂಡಲಗಳನ್ನು ದಾಟಿ ತೀರ ಒಳಗಿನ ವೃತ್ತದಲ್ಲಿ ಎಲ್ಲವೂ ಲೀನವಾಗುವವರೆಗೂ ಮುಂದುವರೆಯುವುದು. ಅಲ್ಲಿ ನೀವು ಕೆಲವು ವೇಳೆ ಕಣ್ಣು ಕೋರೈಸುವಂಥ ಬೆಳಕನ್ನು ಅನುಭವಿಸುವಿರಿ. ಏಕೆಂದರೆ, ನೀವು ಈಗಿದ್ದ ಕ್ಷೇತ್ರಕ್ಕೆ ಹೃದಯದ ಕಡೆಯಿಂದ ದಾರಿ ಮಾಡುವಿರಿ. ನೀವು ಇನ್ನೂ ಮುಂದು ವರಿದಂತೆಲ್ಲ ಆ ಪ್ರಕಾಶವು ಮಂದವಾಗುತ್ತ ನಡೆಯುವುದು. ನೀವು ಮಾಯೆಯ ಬೇರೆ ಬೇರೆ ಸ್ತರಗಳ ಸಂಪರ್ಕದಲ್ಲಿಯೂ ಬರುವಿರಿ. ಕಣ್ಣು ಕುಕ್ಕುವಪ್ರಕಾಶವು ಅಲ್ಲಿದೆ.ಅದನ್ನು ದಾಟಿದಾಗ ನೀವು ಪೂರ್ಣ ಪ್ರಶಾಂತ ವಾತಾವರ್ಣದಲ್ಲಿರುವಿರಿ. ಇಲ್ಲಿ ಭಗವಂತನ ರಾಜ್ಯವು ಆರಂಭವಾಗುವುದು. ಅನಂತರ ಅನೇಕಾನೇಕ ಸ್ಥಿತಿಗಳು ಬಂದು ಹೋಗುವವು. ‘ಧ್ಯಾನ’ದ ಶೀರ್ಷಿಕೆ ಯಲ್ಲಿ ಅವುಗಳ ಚರ್ಚೆಯು ಅಪ್ರಸ್ತುತವಾದ ಕಾರಣ ಅವನ್ನು ಬಿಟ್ಟುಕೊಡಲಾಗಿದೆ. ಈಗ ನಿಮ್ಮ ಧ್ಯಾನವು ನಿಮ್ಮನ್ನು ಮುಖ್ಯಗುರಿಯ ಕಡೆಗೆ ಒಯ್ಯುತ್ತಿದೆ. ಹಠಯೋಗದ ಯಾವ ಪ್ರಕ್ರಿಯೆಯೂ ಇಂಥ ಫಲವನ್ನು ಕೊಡಲಾರದು.ಆಜ್ಞಾ ಚಕ್ರದ ನಂತರ ಅದು ವಿಫಲವಾಗುತ್ತದೆ. ರಾಜಯೋಗದ ಅಂಗವಾದ ಧ್ಯಾನ ವೊಂದೇ ನಿಮ್ಮನ್ನು ಕೊನೆಯವರೆಗೂ ಒಯ್ಯುವುದು. ಕೇಂದ್ರವನ್ನು ತಲುಪಲು ಬೇರೆ ಯಾವ ಸಾಧನವೂ ಇಲ್ಲ. ಕೇಂದ್ರದೊಳಗಿಂದ ಉದ್ಭವಿಸಿದ ಒಂದು ಸಂಕಲ್ಪವು ಇಷ್ಟು ದೊಡ್ಡ ವಿಶ್ವವನ್ನು ಹುಟ್ಟಿಸಿತೆಂಬುದನ್ನು ನಾವು ನೋಡಿದೆವು. ನಮ್ಮಅಕಾರ್ಯ ಗಳಿಂದ ವಿಕೃತವಾಗಿದ್ದರೂ ಅದೇ ಶಕ್ತಿಯನ್ನೇ ನಾವು ಉಪಯೋಗಿಸುವೆವು. ಧ್ಯಾನದ ಮೂಲಕ ನಾವು ಅದೇ ಶಕ್ತಿಯಿಂದಲೇ ಕೆಲಸ ತೆಗೆದು ಕೊಳ್ಳುವೆವು. ಹೀಗೆ ನಾವು ಸಹಜ ವಾಗಿ ನಿಸರ್ಗದ ಶಕ್ತಿಯೊಂದಿಗೆ ಮುಂದೆ ಸಾಗುವೆವು.
ನಾವು ಧ್ಯಾನದಲ್ಲಿದ್ದಾಗ ನಮ್ಮೊಳಗಿದ್ದ ಕೇಂದ್ರದ ಶಕ್ತಿಗೆ ಗತಿಯುಂಟಾಗುವುದು ಅದು ತನ್ನ ಶಕ್ತಿಯಿಂದ ತುಂಬ ಬಿರುಸಾದ ವಿಕಾರ – ವಿಕ್ಷೇಪಾದಿಗಳ ಅಸಂಖ್ಯಾತ ಕಾರ್ಮೋಡಗಳನ್ನು ಚೆದುರಿಸುವುದು. ಅದನ್ನು ಕೇವಲ ಅಭ್ಯಾಸಿಯೇ ಅನುಭವಿಸಬಲ್ಲನು. ಇದನ್ನು ಪ್ರತ್ಯಕ್ಷ ಸಾಧನೆಯಿಂದಲೇ ತಿಳಿಯಲು ಸಾಧ್ಯ. ಶೀಘ್ರದಲ್ಲಿಯೇ ನೀವು ಶಾಶ್ವತ ಸುಖ- ಶಾಂತಿಗಳಲ್ಲಿ ಈಜಾಡುತ್ತಿರುವಂತೆ ಅನುಭವಿಸುವಿರಿ. ಇಲ್ಲಿ ಎಲ್ಲವೂ ಕೊನೆಗೊಳ್ಳುವುದು. ಜಗತ್ತಿನೊಂದಿಗೆ ಯಾವ ಇಸಕ್ತಿಯೂ ಇರುವುದಿಲ್ಲ. ಮನಸ್ಸು ಸುಶಿಕ್ಷಿತವಾಗಿ ತನ್ನಿಂದ ತಾನೇ ನಿಯಂತ್ರಣಗೊಳ್ಳುವುದು. ಇಂದ್ರಿಯಗಳು ವಶದಲ್ಲಿ ಬರತೊಡಗಿ ಅವುಗಳ ಮೇಲೆ ನೀವು ಸ್ಟಾಮ್ಯಗಳಿಸುವಿರಿ. ಸ್ವಂತದ ಮೇಲೆ ಪ್ರಭುತ್ವ ಸಂಪಾದಿಸುವುದೆಂದರೆ ನಿಸರ್ಗವನ್ನು ಸ್ವಾಧೀನಪಡಿಸಿ ಕೊಂಡಂತೆ. ಈ ದಾರಿಯು ಸುಗಮವಾದಾಗ ನಿಸರ್ಗದ ಕಾರ್ಯವು ನಿಮ್ಮ ಅಳವಿನಲ್ಲಿ ಬಂದುದನ್ನು ಅನುಭವಿಸುವಿರಿ ಅರ್ಥಾತ್ ನೀವೇ ಸ್ವತಃ ಕಾರ್ಯವನ್ನಾರಂಭಿಸುವಿರಿ.