ಪ್ರಿಯ ಸೋದರ, ಸೋದರಿಯರೆ,
ನಾನು ರಾಯಚೂರಿನಿಂದ ಬಂದಿರುವೆ. ನನ್ನಂತೆ ಬೇರೆ ಬೇರೆ ಸ್ಥಳಗಳಿಂದ ಬಹಳಷ್ಟು ಜನರು ಗುರುಗಳ ದರ್ಶನಕ್ಕಾಗಿ ಬಂದಿದ್ದಾರೆ. ಗುರುಗಳು ನಮ್ಮನ್ನು ಆಕರ್ಷಿಸಿದರು, ಮತ್ತು ನಾವು ಇಲ್ಲಿಗೆ ಬಂದೆವು. ನಾವು ಕೇವಲ ಗುರುಗಳ ದರ್ಶನಕ್ಕಾಗಿ ಬಂದೆವೋ ಅಥವಾ ಹೆಚ್ಚಿಗೆ ಏನೋ ಒಂದನ್ನು ಪಡೆಯಲು ಬಂದೆವೋ ? ಯಾವ ಉದ್ದೇಶವಿದೆ ? ಯಾವ ವಿಚಾರದಿಂದಾಗಿ ? ಈ ವಿಷಯಗಳನ್ನು ನಾವು ಯೋಚಿಸಬೇಕಾಗಿದೆ. ನಾನು ಎಲ್ಲ ಅಭ್ಯಾಸಿಗಳನ್ನು ಉದ್ದೇಶಿಸಿ ಹೇಳುತ್ತಿದ್ದೇನೆ.
ನಾವು ಧ್ಯಾನದ ಅಭ್ಯಾಸವನ್ನು ಕೈಗೊಂಡಿದ್ದೇವೆ. ಇಲ್ಲಿ ನಮ್ಮ ಚಿಂತನ ಕೆಲಸ ಮಾಡಬೇಕಾಗಿದೆ. ನೀವು ಚಿಂತನವನ್ನು ನಿಲ್ಲಿಸಲು ಬಯಸುವಿರಾದರೆ, ಅದಕ್ಕೆ ನೀವು ಭಯ ಹೊಂದಿದ್ದರೆ, ಮತ್ತು ನೀವು ಅದನ್ನು ನಿರ್ವಹಿಸಲಾರಿರಾದರೆ – ಅದು ನಿಮಗಾಗಿ ಅಲ್ಲ. ನಿಮಗೆ ಚಿಂತನೆ ಮಾಡುವುದು ಬೇಕಾಗಿಲ್ಲವಾದರೆ, ಅನೇಕ ತಥಾಕಥಿತ ಪದ್ಧತಿಗಳುಂಟು, ಅನೇಕ ತಥಾಕಥಿತ ಗುರುಗಳಿದ್ದಾರೆ, ಅನೇಕ ತಥಾಕಥಿತ ಯೌಗಿಕ ಪದ್ಧತಿಗಳಿವೆ. ಅಲ್ಲಿಗೆ ನೀವು ನಿಮ್ಮ ಚಿಂತನ ಶಕ್ತಿಯನ್ನು ಬಿಟ್ಟುಕೊಟ್ಟು ನಿದ್ದೆ ಹೋಗಬಹುದು. ಬುದ್ಧಿಯ ‘ಜಡತೆ’ ಮತ್ತು ‘ಶಾಂತಿ’ ಇವೆರಡರ ಬಗ್ಗೆ ಗೊಂದಲವುಂಟು. ನಾವು ಇಲ್ಲಿ ನಮ್ಮ ಚಿಂತನ ಸಾಮರ್ಥ್ಯವನ್ನು ಉಪಯೋಗಿಸಬೇಕಾಗಿದೆ. ನಮ್ಮ ವಿವೇಕ ಶಕ್ತಿಯನ್ನು ಬಳಸಬೇಕಾಗಿದೆ. ಅದನ್ನು ವಿಕಸಿಸಿಕೊಳ್ಳಲು ಧ್ಯಾನವು ಸಹಾಯ ಮಾಡುತ್ತದೆ. ಒಮ್ಮೆ ಅದು ವೃದ್ಧಿಗೊಂಡಿತೆಂದರೆ, ನಮ್ಮ ಇತರ ವರ್ತನೆಯೂ ಸಹಜವಾಗಿ ಬದಲಾಗುತ್ತದೆ ಅಥವಾ ಅದನ್ನನುಸರಿಸಿ ಬರುತ್ತದೆ. ಹಾಗಾಗುವುದು ಅವಶ್ಯ.
ಧ್ಯಾನ ಅಥವಾ ಪೂಜೆ ಅಭ್ಯಾಸವು ಒಂದು ತಾಸಿನವರೆಗೆ ಮಾಡಿ ನಂತರ ಮರೆತು ಬಿಡುವ ಔಪಚಾರಿಕ ವಿಷಯವಲ್ಲ. ಅದು ಹಾಗಿಲ್ಲ. ನೀವು ಅದರ ಸಾರತತ್ತ್ವವನ್ನು ಗ್ರಹಿಸಿರಿ, ‘ಸಹಜಮಾರ್ಗದ ಅಭ್ಯಾಸ -ಇದನ್ನು ನೀವು ಏತಕ್ಕೋಸ್ಕರ ಮಾಡುತ್ತಿರುವಿರಿ ? ನಿಮ್ಮ ಜೀವನವನ್ನು ಸಂಪೂರ್ಣವಾಗಿ ರೂಪಿಸುವುದಕ್ಕಾಗಿಯೇ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲೆಂದೇ ? ನಿಮ್ಮ ನಿರ್ಧಾರವನ್ನು ದೃಢವಾಗಿರಿಸಲೆಂದೇ ? ಅಂತಿಮ ಗುರಿಯ ಪ್ರಾಪ್ತಿಗಾಗಿಯೇ ? ಅಥವಾ ಅದನ್ನು ಇದೇ ಜನ್ಮದಲ್ಲಿ ಸಾಕ್ಷಾತ್ಕರಿಸಿಕೊಳ್ಳಲೆಂದೇ ? ನಿಮಗೆ ಅದನ್ನು ದೊರಕಿಸಿಕೊಳ್ಳಬೇಕಿದ್ದರೆ ಅಭ್ಯಾಸವನ್ನು ಮುಂದುವರಿಸಿರಿ. ನಿಮ್ಮ ಅಭ್ಯಾಸವನ್ನು ಒಬ್ಬ ಪ್ರಶಿಕ್ಷಕನ ಆದೇಶದಡಿಯಲ್ಲಿ ಮುಂದುವರಿಸುವುದಾದರೆ, ಅಂತಹ ಪ್ರಶಿಕ್ಷಕನ ಆದೇಶಗಳನ್ನು ಪೂರ್ಣ ವಿಶ್ವಾಸದಿಂದ ಅನುಸರಿಸಿರಿ ಮತ್ತು ನಿಮ್ಮ ಜೀವನವನ್ನು ರೂಪಿಸಿಕೊಳ್ಳಿರಿ. ನಿಮ್ಮ ವರ್ತನೆಯನ್ನು, ನಿಮ್ಮ ಮಾತಿನ ಶೈಲಿಯನ್ನು ಅದೇ ರೀತಿಯಲ್ಲಿ ರೂಪಿಸಿಕೊಳ್ಳಿರಿ.
ನಾನು ಹೈದರಾಬಾದಿಗೆ ಭೆಟ್ಟಿಯಿತ್ತಾಗಲೆಲ್ಲ, ತಮ್ಮ ಆಂತರಿಕ ಪ್ರಗತಿಯ ಬಗ್ಗೆ, ಮತ್ತು ತಮ್ಮ ಮಟ್ಟ ಏನಿದೆಯೋ ಅದರ ಬಗ್ಗೆ ಕೇಳುವ ಹೈದರಾಬಾದಿನವರನ್ನಷ್ಟೇ ಅಲ್ಲದೆ ಬೇರೆಡೆಗಳಿಂದ ಬಂದ ಅಭ್ಯಾಸಿಗಳನ್ನು ಸಂಧಿಸಿದ್ದೇನೆ. ಅವರು ಅದರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸ್ವಾಭಾವಿಕವಾಗಿಯೇ ಕಾತರವುಳ್ಳವರೂ, ಕುತೂಹಲಿಗಳೂ ಆಗಿದ್ದಾರೆ. ಇದು ತುಂಬ ಒಳ್ಳೆಯ ಸಂಗತಿ. ನೀವು ಅದನ್ನು ಬೆಳೆಸಿಕೊಳ್ಳಿರಿ ಮತ್ತು ನೀವೇ ಅದನ್ನು ಕಂಡುಕೊಳ್ಳಲು ಪ್ರಯತ್ನಿಸಿರಿ. ನೀವು ಎಷ್ಟರಮಟ್ಟಿಗೆ ಪರಿವರ್ತಿತರಾಗಿದ್ದೀರಿ, ಎಷ್ಟರಮಟ್ಟಿಗೆ ನಿಮ್ಮ ವರ್ತನೆ, ರೂಢಿಗತ ಅಭ್ಯಾಸಗಳು ಬದಲಾದವು, ಇತರರಿಗೆ ಎಷ್ಟು ಸಹಾಯಶೀಲರಾಗಿದ್ದೀರಿ ಅನ್ನುವುದನ್ನು ಕಂಡುಕೊಳ್ಳಲು ಪ್ರಯತ್ನಿಸಿರಿ. ಈ ರೀತಿಯಾಗಿ ವಿಚಾರ ಮಾಡುವುದು ಅತ್ಯಂತ ಆವಶ್ಯಕ. ಆಗ ಮಾತ್ರವೇ ನೀವು ನಿಮಗೆ ಎಷ್ಟು ಸಹಾಯ ಮಾಡಿಕೊಳ್ಳಲು ಎಂಬುದನ್ನಲ್ಲದೆ, ಸಮಾಜಕ್ಕೆ, ಸಾಮಾನ್ಯವಾಗಿ ಮಾನವ ಕುಲಕ್ಕೆ ಸರಿಯಾದ ದಿಶೆಯಲ್ಲಿ ಪ್ರಭಾವ ಬೀರಲು ಶಕ್ತರಾಗುವಿರಿ. ಹಾಗಿಲ್ಲದಿದ್ದರೆ, ಗುರುಗಳೆಂದೆನಿಸಿಕೊಂಡವರು, ಸ್ವಾಮಿಗಳು, ಮತ್ತು ಮತಧರ್ಮಗಳು ಕೊಟ್ಟ ಹಳೆಯ ಕಲ್ಪನೆಗಳನ್ನು ಈಗಲೂ ಅಂಟಿಕೊಂಡಿರುವಿರಾದರೆ, ಆ ಎಲ್ಲ ಬಂಧನಗಳನ್ನು ಮತ್ತು ಆ ಹೊರೆಯ ಭಾರ ಹೊಂದಿರುವಿರಾದರೆ, ನೀವು ನಿಮ್ಮ ಹೃದಯದಲ್ಲಿ ಸ್ಥೂಲತೆಯನ್ನು ಸೇರಿಸಿಕೊಳ್ಳುವಿರಿ ಹಾಗೂ ನಿಮ್ಮ ಪ್ರಗತಿಗೆ ಅಡ್ಡಿ ಉಂಟು ಮಾಡಿಕೊಳ್ಳುವಿರಿ.
ನೀವು ಮೂರ್ತಿ ಪೂಜೆಯನ್ನು ಬಿಟ್ಟುಬಿಡಲು ಸಿದ್ಧರಿರಬೇಕು. ಯಾಂತ್ರಿಕವಾಗಿ ವಿಚಾರ ಮಾಡುವ ರೀತಿಯಿಂದಾಗಿ ಮೂರ್ತಿ ಪೂಜೆ ಬೆಳೆದು ಬಂದಿದೆ. ನೀವು ಅದರಿಂದ ಬಿಡುಗಡೆಯಾಗಬೇಕು. ನಿಮ್ಮ ವಿವೇಕವನ್ನು ಬಳಸಿರಿ, ಮತ್ತು ನೀವು ಅದನ್ನು ಏಕೆ ಮಾಡುತ್ತಿರುವಿರೆಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸಿರಿ. ನೀವು ಯಾಂತ್ರಿಕವಾಗಿ ಮಾಡುವಿರಾದರೆ, ನೀವು ನಿಮ್ಮ ಚಿಂತನ ಶಕ್ತಿಯನ್ನು ಉಪಯೋಗಿಸಿದಂತಾಗುವುದಿಲ್ಲ. ಅವಿವೇಕತನದ ಉದಾಹರಣೆ ಕೊಡಬೇಕೆಂದರೆ, ಅದು ಸೇವೆ ಮಾಡುವ ನಮ್ಮ ರೂಢಿಯ ಬಗ್ಗೆ; (ಅದೆಷ್ಟು ಎಡವಟ್ಟಿನದು ಮತ್ತು ಮೂರ್ಖತನದ್ದಾಗಿರುವುದೆಂದು ನಾನು ನಿಮಗೆ ಹೇಳುವುದಾದರೆ). ನಾವು ನಮ್ಮ ಗುರುಗಳನ್ನು ಪ್ರೀತಿಸುತ್ತೇವೆ. ನಾವು ಏಕಕಾಲದಲ್ಲಿ ಅವರ ಸೇವೆಗೆ ಸಲ್ಲಬೇಕೆಂದು ಬಯಸುತ್ತೇವೆ. ಸರಿ, ಅದರಿಂದಾಗುವ ಗೋಜಲನ್ನು ಕಲ್ಪಿಸಿಕೊಳ್ಳಿರಿ ! ಅದೊಂದು ದಿನ ಏನಾಯಿತೆಂದರೆ ಗುರುಗಳು ಮದ್ರಾಸಿನಿಂದ ರಾಯಚೂರಿಗೆ ಎಕ್ಸ್ಪ್ರೆಸ್ ರೇಲಿನಿಂದ ಬರುತ್ತಿದ್ದರು. ಟ್ರೇನು ನಿಲ್ದಾಣದಲ್ಲಿ ನಿಂತಿತು. ಮತ್ತು ನಮ್ಮ ಅಭ್ಯಾಸಿಗಳು ಟ್ರೇನಿನೊಂದಿಗೆ ಓಡತೊಡಗಿದರು.ನಮ್ಮಗುರುಗಳು ಒಂದು ಬೋಗಿಯಲ್ಲಿರುವುದನ್ನು ಕಂಡು ಬೋಗಿಯಲ್ಲಿ ನುಗ್ಗಿದರು; ಗುರುಗಳಿಗೆ ಅಲುಗಾಡಲೂ ಬಿಡಲಿಲ್ಲ. ಅವರು ಬಹಳ ಕಷ್ಟದಿಂದ ಹೊರಬರಬೇಕಾಯಿತು. ಅಭ್ಯಾಸಿಗಳು ಅವರ ಸಾಮಾನುಗಳನ್ನು ತೆಗೆದುಕೊಂಡು ಓಡಿದರು, ಸರಿ ! ಈ ಗದ್ದಲದಲ್ಲಿ ಏನಾಗಿರಬಹುದೆಂಬುದನ್ನು ಊಹಿಸಿರಿ.
ವಾಸ್ತವಿಕವಾಗಿ ಪ್ರತಿಯೊಬ್ಬನೂ ಪ್ರೀತಿಯಿಂದಲೇ ಸೇವೆ ಮಾಡಲೋಸುಗವೇ ವರ್ತಿಸಿದನು, ನಿಜ. ಆದರೆ, ಅದರ ಬದಲಿಗೆ ಪರಿಣಾಮ ಆದದ್ದೇನು ? ಗುರುಗಳು ಸ್ವಲ್ಪ ಸಮಯ ಕಾಯುತ್ತ ನಿಲ್ಲಬೇಕಾಯಿತು, ಮತ್ತು ನನ್ನ ಸಾಮಾನುಗಳೆಲ್ಲಿ ? ಎಂದು ಕೇಳಬೇಕಾಯಿತು. ಹೀಗೆ ಸಹಾಯಕರಾಗುವ ಬದಲಿಗೆ ನಾವು ನಿಶ್ಚಿತವಾಗಿ ಅನನುಕೂಲತೆ ಉಂಟುಮಾಡಿ, ಅವರ ಸಹಾಯಕ್ಕೆ ಸಲ್ಲದವರಾಗುತ್ತೇವೆ. ಅಲ್ಲದೆ, ಇದು ಸಮಯ ಅಪವ್ಯಯ ಮಾಡುವ ಸಂಗತಿಯೂ ಆಗುತ್ತದೆ. ಸಾಮಾನುಗಳೆಲ್ಲ ಸರಿಯಾಗಿ ಬಂದವೇ ಎಂದು ನೋಡಿ ಹೊಂದಿಸುವುದನ್ನು ಕಾಯುತ್ತಗುರುಗಳು ಹದಿನೈದು ನಿಮಿಷ ಕಾಯಬೇಕಾಯಿತು. ಇದೊಂದು ಸಣ್ಣ ಸಂಗತಿ; ಇದರಿಂದ ಅಭ್ಯಾಸಿಗಳ ಪ್ರೀತಿ-ವಾತ್ಸಲ್ಯಗಳನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಬದಲಿಗೆ, ಇದೆಲ್ಲವನ್ನೂ ಒಂದು ವ್ಯವಸ್ಥಿತ ರೀತಿಯಲ್ಲಿ ಮಾಡಿದರೆ ಅದು ಸಹಾಯಕವಾದೀತು.
ನಮ್ಮನ್ನೆಲ್ಲ ಆಮಂತ್ರಿಸಿದ ಹೈದರಾಬಾದಿನ ಅಭ್ಯಾಸಿಗಳನ್ನು ನಾನು ಅಭಿನಂದಿಸುತ್ತೇನೆ. ಹೊರಗಿನಿಂದ ಬಂದವರ ಕರ್ತವ್ಯವೇನು ? ಯಾವುದೇ ಮುನ್ಸೂಚನೆ ಕೊಡದೆ, ಬೇಕಾದ ಸಮಯಕ್ಕೆ ಹೋಗಬಹುದಾದ ಮತ್ತು ಮೈತುಂಬ ಬೂದಿ ಬಳಿದುಕೊಂಡು ಅವರಂತೆಯೇ ಆಗುವ ಸಂನ್ಯಾಸಿಗಳ ಆಶ್ರಮವಲ್ಲ; ನಾವೆಲ್ಲರೂ ಸಂಪಾದನೆ ಮಾಡುವ ಸದಸ್ಯರು, ಗೃಹಸ್ಥರು. ನಮಗೆಲ್ಲ ಆ ಹೊಣೆಗಾರಿಕೆಯ ಅರಿವು ಇರಬೇಕು. ನಾವು ಬರುವುದರ ಬಗ್ಗೆ ನಿರ್ದಿಷ್ಟ ಸಮಯದ ಬಗ್ಗೆ ವ್ಯವಸ್ಥಾಪಕರಿಗೆ ಸೂಚನೆ ಕೊಡಬೇಕು. ಅದರಿಂದ ನಮಗೋಸ್ಕರ ಆಹಾರ ಮುಂತಾದವುಗಳನ್ನು ವ್ಯವಸ್ಥೆಗೊಳಿಸಲು ಸಾಧ್ಯವಾಗುವುದು. ಒಮ್ಮೆಲೇ ಮಧ್ಯ ರಾತ್ರಿಯಲ್ಲಿ ಇಪ್ಪತ್ತು ಜನರು ಬಂದು, ಆಹಾರ ಮುಂತಾದವುಗಳ ಬೇಡಿಕೆಯಿಟ್ಟರೆ, ಅವರಿಗೆ ಅನನುಕೂಲತೆ ಉಂಟು ಮಾಡುವುದು. ನಾವಿಲ್ಲಿ ಬಂದೆವು, ನಮಗೆ ಆಹಾರ ಬೇಕು; ಅವರು ಆಮಂತ್ರಿಸಿರುವುದು ನಿಜ, ಅದು ಅವರ ಒಳ್ಳೆಯತನ. ಆದರೆ ನಾವು ಅವರಿಗೆ ಭಾರವೆನಿಸಬಾರದು. ಹೀಗೆ ನಾವು ನಮ್ಮ ಮೆದುಳನ್ನು, ಅರ್ಥಾತ್ ಬುದ್ಧಿಯನ್ನು ಉಪಯೋಗಿಸಬೇಕಾದ ಅನೇಕ ವಿಷಯಗಳಿವೆ. ನಾವು ನಮ್ಮ ಮೆದುಳನ್ನು ಉಪಯೋಗಿಸಲು ಅಸಮರ್ಥರಾದರೆ, ನಾವು ಈ ಪೂಜೆಯನ್ನು ಮಾಡುವುದರ ಅಥವಾ “ನಾನು ಹತ್ತು ವರ್ಷಗಳಿಂದ, ಹದಿನೈದು ವರ್ಷಗಳಿಂದ ಪೂಜೆ ಮಾಡುತ್ತಿರುವ ಅಭ್ಯಾಸಿ” ಎಂದು ಸ್ವಪ್ರದರ್ಶನ ಮಾಡುವುದರ ಅರ್ಥವಾದರೂ ಏನು ? ಪ್ರಗತಿಯನ್ನು ಅಭ್ಯಾಸದ ವರ್ಷಗಳಿಂದ ಅಳೆಯಲು ಬಾರದು.
ಗುರುಗಳು ಆಗಮಿಸಿದಾಗ ಅವರಿಗೆ ಚಲಿಸಲೂ ಸಾಧ್ಯವಾಗದಂತೆ ಅವರಿಗೆ ಅನಾನುಕೂಲತೆ ಉಂಟುಮಾಡುತ್ತೇವೆ. ಈ ಕುರಿತು ಯೋಚಿಸಿರಿ. ನೀವು ಅದನ್ನು ಇಚ್ಛಾಪೂರ್ವಕ ಮಾಡುತ್ತೀರೆಂದಲ್ಲ. ನೀವು ಗುಂಪು-ಮನಸ್ಥಿತಿಗೆ ವಶವಾಗುತ್ತೀರಿ. ಒಬ್ಬನು ಗುರುಗಳ ಪಾದಸ್ಪರ್ಶ ಮಾಡಲು ಪ್ರಾರಂಭಿಸುತ್ತಾನೆ, ಮತ್ತು ಎಲ್ಲರೂ ಅವನನ್ನು ಅನುಸರಿಸುತ್ತಾರೆ. ಚರಣ ಸ್ಪರ್ಶ ಮಾಡುವುದು ಸರಿಯೇ ಇದೆ. ಅದರ ಬಗ್ಗೆ ನನ್ನ ಆಕ್ಷೇಪವಿಲ್ಲ. ಆದರೆ, ನಮ್ಮ ಬುದ್ಧಿಯನ್ನು ಉಪಯೋಗಿಸದೆ, ನಿಶ್ಚಿತವಾಗಿ ಪೀಡೆ ಉಂಟುಮಾಡುವುದು, ಅದನ್ನು ಒಂದು ಯಾಂತ್ರಿಕ ರೂಢಿಯಾಗಿ ಮಾಡಿಕೊಳ್ಳುವುದು ಒಂದು ಪೀಡಾಜನಕ ಸಂಗತಿ. ನಾನು ಹೇಳುವುದರ ಅರ್ಥವೇನೆಂದರೆ, ನಾವು ಒಂದು ಸಾಧನಾ ಪದ್ಧತಿಯನ್ನು ಅಭ್ಯಾಸ ಮಾಡುತ್ತಿದ್ದರೆ, ನಾವು ನಮ್ಮ ವಿವೇಕವನ್ನು ಬೆಳೆಸಿಕೊಳ್ಳಲೇಬೇಕು. ಅದು ನಮ್ಮ ಬುದ್ಧಿಯನ್ನು ಪ್ರಕಾಶಿತಗೊಳಿಸಬೇಕು. ಇವೆರಡು ಸಂಗತಿಗಳು ವೃದ್ಧಿಗೊಳ್ಳದಿದ್ದರೆ, ಏನೋ ಒಂದು ತಪ್ಪಾಗಿದೆ, ಧ್ಯಾನ ಸರಿಯಾಗಿಲ್ಲ, ಅಥವಾ ನೀವು ಸಹಜಮಾರ್ಗಾನುಸಾರ ಧ್ಯಾನ ಮಾಡುತ್ತಿಲ್ಲ, ಎಂದು ತಿಳಿಯಿರಿ.
ಪ್ರಶಿಕ್ಷಕರ ಬಳಿಗೆ ಒಬ್ಬರೇ ಖಾಸಗಿಯಾಗಿ ಹೋಗಿರಿ. ನಿಮ್ಮ ಕಷ್ಟಗಳನ್ನು, ತೊಂದರೆಗಳನ್ನು ತಿಳಿಸಿರಿ. ಅವರು ಸಹಾಯ ಮಾಡಲು ಶಕ್ತರು. “ನೀನು ನನ್ನ ಪಾದಕ್ಕೆ ಬೀಳು, ಆಗ ಮಾತ್ರವೇ .ನೀನು ನಿಮಗೆ ಸ್ವರ್ಗಕ್ಕೆ ಹೋಗುವ ಟಿಕೆಟ್ ಸಿಗುವುದು” -ಎಂದು ಹೇಳುವ, ತಥಾಕಥಿತ ಗುರುಗಳ ಉಪನ್ಯಾಸಗಳನ್ನು ಆಲಿಸುವುದರ ಕಾರಣದಿಂದ ಉಂಟಾಗಿ, ಸಂಚಯಗೊಂಡ ನಮ್ಮ ಸ್ಥೂಲತೆಯನ್ನು, ಅಪರಿಷ್ಕೃತ ಪ್ರಾರಂಭಿಕ ವಿಚಾರಗಳನ್ನು ಕಳೆದುಕೊಳ್ಳಬೇಕು. ಇದು ಮೂರ್ಖತನದ್ದು. ಆ ವಿಚಾರಗಳ ಸಂಸ್ಕಾರಗಳನ್ನು ತೊಳೆದು ಹಾಕಿರಿ. ಇದು ಅತ್ಯಾವಶ್ಯಕ. ಎಲ್ಲಿಯವರೆಗೆ ನೀವು ಈ ಎಲ್ಲ ಸಂಗತಿಗಳನ್ನು ತೊಳೆದು ಹಾಕುವುದಿಲ್ಲವೋ ಹಾಗೂ ಎಲ್ಲ ಸ್ಥೂಲತೆ, ಜಟಿಲತೆಗಳನ್ನು ಬಿಸುಟಿಬಿಟ್ಟು ಶುದ್ಧಗೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲಾರಿರಿ. ನಮಗೆ ಅಂತಹ ಒಬ್ಬ ಶಕ್ತಿವಂತ. ಗುರುವು ದೊರಕಿರುವಾಗ ನಾವು ಬೇಡಿದ ಮಾತ್ರಕ್ಕೆ ಉನ್ನತ ಸ್ಥಿತಿಗಳು ಕ್ಷಣಮಾತ್ರದಲ್ಲಿ ಲಭ್ಯವಾಗಲು ಸಾಧ್ಯ. ಆದರೆ ಈ ಶುದ್ದೀಕರಣವಾಗುವುದಾದರೂ ಹೇಗೆ ? ನಾವು ಅದಕ್ಕೆ ಅರ್ಹರಾಗಿರುವೆವೇ ? ನಾವು ನಮ್ಮನ್ನು ಅದಕ್ಕೆ ಅರ್ಹರಾಗುವಂತೆ ಮಾಡಿಕೊಂಡಿದ್ದೇವೆಯೇ ? ನಾವು ಅವನಿಗೆ ಸಂಪೂರ್ಣವಾಗಿ ಸಮರ್ಪಿತರಾಗಿರುವೆವೇ ? ಆತನು ಬೋಧಿಸಿದ ಬೋಧನೆಗಳನ್ನು ಸ್ವೀಕರಿಸಲು ಮತ್ತು ಅನುಸರಿಸಲು ನಾವು ಸಿದ್ಧರಾಗಿರುವೆವೇ ? ನಾವು ನಮ್ಮ ಹಳೆಯ ಯಾಂತ್ರಿಕ ವಿಚಾರ ಮಾಡುವುದನ್ನು ಬಿಟ್ಟುಬಿಡಲು ಸಿದ್ಧರಾಗಿರುವೆವೇ ?
ಇರಲಿ !ಶ್ರೀಯುತರೆ, ಸಹಜಮಾರ್ಗವು ಹೇಡಿಗಳಿಗಾಗಿ ಅಲ್ಲ. ಅದಿರುವುದು ಸಿಂಹ ಹೃದಯದವರಿಗೆ ಅಧ್ಯಾತ್ಮದ ಇತಿಹಾಸದಲ್ಲಿ ಒಂದು ಮಹಾ ಕ್ರಾಂತಿ ಬರುತ್ತಿದೆ. ಒಂದು ಸಂಪೂರ್ಣವಾಗಿ ಹೊಸದಾದ ಕ್ರಾಂತಿಕಾರಿ ಪದ್ಧತಿಯನ್ನು ನಿಮಗೆ ಕೊಡಲಾಗುತ್ತಿದೆ. ಅದಕ್ಕೆ ನೀವು ಸಿದ್ಧಗೊಳ್ಳಿರಿ. ಈಯೆಲ್ಲ ಸ್ಥೂಲತೆಯನ್ನು ಇಟ್ಟುಕೊಳ್ಳ ಬಯಸಿದರೆ, ಇದು ನಿಮಗಾಗಿ ಅಲ್ಲ.
ಪ್ರಿಯ ಬಂಧು, ಅಧ್ಯಾತ್ಮ ಕ್ಷೇತ್ರದಲ್ಲಿ ನೀವು ಶೀಘ್ರಗತಿಯಲ್ಲಿ ಪ್ರಗತಿ ಹೊಂದಲು, ನಾವು ಅಂತಿಮವಾಗಿ ನಿರ್ಧರಿಸಬೇಕು; ಅದನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮಎಲ್ಲ ಪೂರ್ವಗ್ರಹೀತ ಕಲ್ಪನೆಗಳನ್ನು ನಿಮ್ಮೊಳಗಿನ ಎಲ್ಲ ಜಡತೆಯನ್ನು, ಮತ್ತು ತಥಾಕಥಿತ ಗುರುಗಳ ನಿರಂತರ ಸಂಮೋಹನಗೊಳಿಸುವ ಸೂಚನೆಗಳಿಂದ ನೀವು ಬೆಳೆಯಿಸಿಕೊಂಡ ತಾತ್ವಿಕ ನಂಬಿಕೆಗಳನ್ನು ತ್ಯಜಿಸಬೇಕು. ಸಂಮೋಹನಗೊಂಡ ಸ್ಥಿತಿಯಿಂದ ನಿಮ್ಮನ್ನು ಬಿಡಿಸಿಕೊಳ್ಳಬೇಕು. ಕೇವಲ ಅಂತಿಮ ಸತ್ಯವೊಂದನ್ನೇ ಹೊಂದಲು ಬಯಸಬೇಕು. ನಮ್ಮ ಕಲ್ಪನೆಯ ಅಂತಿಮ ಸತ್ಯದ ಮೇಲೆ ನೆಟ್ಟಿರಬೇಕು. ಗುರಿಯನ್ನು ನಿಮ್ಮೆದುರು ಇಟ್ಟುಕೊಳ್ಳಬೇಕು, ಗುರಿಯನ್ನಿಟ್ಟುಕೊಳ್ಳಿರಿ. ನಮ್ಮ ಎಲ್ಲ ಇಚ್ಛೆಗಳು ನಮ್ಮ ಪ್ರಗತಿಗೆ ತಡೆಗಳಾಗಿವೆ. ನಮ್ಮನ್ನು ಅಂತಿಮ ಗುರಿ(ಸತ್ಯ)ಗೆ ಕರೆದೊಯ್ಯಲು ಇರುವ ಸಹಾಯಕನೆಂದರೆ ಅವನು ಮಾತ್ರ.
ಪ್ರತಿದಿನವೂ ನಾವು ಈ ಪ್ರಾರ್ಥನೆಯನ್ನು ಪುನರುಚ್ಚರಿಸಬೇಕು. “ಓ ನಾಥ ! ನೀನೇ ನಮ್ಮ ಮಾನವ ಜೀವನದ ಗುರಿ. ನಮ್ಮ ಇಚ್ಛೆಗಳು ನಮ್ಮ ಆತೋನ್ನತಿಯಲ್ಲಿ ಬಾಧಕಗಳಾಗಿವೆ. ನೀನೇ ನಮ್ಮ ಏಕಮಾತ್ರ ಸ್ವಾಮಿ ಹಾಗೂ ಇಷ್ಟದೈವ. ನಿನ್ನ ಸಹಾಯವಿಲ್ಲದೆ ನಿನ್ನ ಪ್ರಾಪ್ತಿಯು ಅಸಂಭವ !” ಅವನ ಸಹಾಯವಿಲ್ಲದೆ ನಾವು ಒಂದು ಹೆಜ್ಜೆಯಷ್ಟು ಪ್ರಗತಿಯನ್ನೂ ಹೊಂದಲಾರೆವು. ನಾವು ಅದನ್ನು ಹಾರೈಸುತ್ತಿರಬೇಕು.ಯಾವುದೇ ಸಂಕೋಚವಿಲ್ಲದೆ, ಅದಕ್ಕಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು.ನಾವೇ ಸೃಷ್ಟಿಸಿಕೊಂಡ ನಮ್ಮ ಆಲೋಚನೆ (ವಿಚಾರ) ಗಳಿಂದ ಬಿಡುಗಡೆ ಹೊಂದಲು ನಮ್ಮಿಂದ ಏನೆಲ್ಲ ಸಾಧ್ಯವೋ ಅದನ್ನು ಮಾಡುವುದರ ಮಟ್ಟಿಗೆ ನಾವು ಪ್ರತಿಸ್ಪಂದಿಸಬೇಕು.
ನಮ್ಮ ಶಕ್ತಿಮೀರಿ ಮಾಡಲು ಸಾಧ್ಯವಿರುವುದನ್ನು ಮಾಡಿ, ನಾವು ಗುರುಗಳ ಶ್ರಮವನ್ನು ಕಡಿಮೆ ಮಾಡಬೇಕು. ನಾವೇ ನಿರ್ಧರಿಸಲು ಸಾಧ್ಯವಿರುವ ಎಷ್ಟೋ ವಿಷಯಗಳನ್ನು, ಕ್ಷುಲ್ಲಕ ಸಂಗತಿಗಳನ್ನು ಹಾಗೆನ್ನುವುದಾದರೆ ನಾವು ಕೋಟು ಧರಿಸಬೇಕೋ, ಅಂಗಿಯನ್ನೋ; ಪ್ಯಾಂಟು ಧರಿಸಬೇಕೋ, ಧೋತಿಯನ್ನೋ – ಇತ್ಯಾದಿಗಳ ಬಗ್ಗೆ ಹೇಳುತ್ತ ಹೋಗುವುದು ಶ್ರಮದಾಯಕವಾಗುವುದು. ಆಗಲಿ, ಅವರು ಇಲ್ಲಿರುವುದು ಈ ವಿಷಯಗಳಲ್ಲಿ ನಮಗೆ ಮಾರ್ಗದರ್ಶನ ಮಾಡಲಿಕ್ಕಲ್ಲ. ಅನ್ಯರಿಗೆ ಅನನುಕೂಲವಾಗದಂತೆ ನೋಡಿಕೊಂಡು, ನಿಮಗೆ ಅನುಕೂಲವಾಗುವಂತೆ ನೀವೇ ಸ್ವತಃ ನಿರ್ಧರಿಸಬೇಕು. “ನಿಮ್ಮ ವಿವೇಕವನ್ನು ಬೆಳೆಸಿಕೊಳ್ಳಿ” ಎಂದಿರುವುದು ಇದಕ್ಕಾಗಿಯೇ ನೀವು ಸರಿಯಾಗಿ ಅಭ್ಯಾಸ ಮಾಡುತ್ತಿದ್ದರೆ, ನಿಮ್ಮ ವಿವೇಕವು ನಿಮಗೆ ಸಹಾಯ ಮಾಡಬೇಕು.ನಿಮಗೆ ಆವಶ್ಯಕವಾಗಿರಬೇಕಾಗಿರುವುವೆಂದರೆ ಈ ಎರಡು ವಿಷಯಗಳೇ. ವಿಧಾನವು ಯೋಗ್ಯವಾದುದಿರಬೇಕು; ನೀವು ಅದನ್ನು ಸಮರ್ಪಕವಾಗಿ ಅನುಸರಿಸಬೇಕು. ಸಹಜಮಾರ್ಗವು ಅತ್ಯುತ್ತಮ ಪದ್ಧತಿ. ಇದನ್ನು ಎಲ್ಲ ಅಭ್ಯಾಸಿಗಳೂ ಪರೀಕ್ಷಿಸಿ ನೋಡಿದ್ದಾರೆ ಮತ್ತು ಅರ್ಥ ಮಾಡಿಕೊಂಡಿದ್ದಾರೆ. ಇದು ಅವರಿಗೆ ಅತ್ಯುತ್ತಮ- ವಾದುದೆಂಬುದನ್ನು ಅವರು ಅರಿತಿದ್ದಾರೆ.
ನೋಡಿ, ಪ್ರಿಯ ಸೋದರರೆ, ನಾನು ವಿಶೇಷತಃ ಅಭ್ಯಾಸಿಗಳನ್ನುದ್ದೇಶಿಸಿ ಹೇಳುತ್ತಿದ್ದೇನೆ. ತಮ್ಮ ಶೀಘ್ರ ಪ್ರಗತಿಗಾಗಿ ಅವರು ದೀರ್ಘ ಸಮಯದಿಂದ ಅಭ್ಯಾಸ ಮಾಡುತ್ತಿದ್ದಾರೆ. ಈ ‘ಶೀಘ್ರ ಪ್ರಗತಿ’ ಅಂದರೇನು ? ನಾವು ಎಷ್ಟು ಪ್ರಗತಿ ಸಾಧಿಸಿದ್ದೇವೆ ? ನೀವು ಯೋಚಿಸಬೇಕು. ನೀವು ಚಿಂತನ ಮಾಡಬೇಕು, ಮತ್ತು ಸರಿಯಾಗಿ ಚಿಂತನ ಮಾಡಬೇಕು; ಮತ್ತು ಪ್ರಶಿಕ್ಷಕರ ಎದುರು ವ್ಯಕ್ತಗೊಳಿಸಿ ಅದನ್ನು ಪರೀಕ್ಷಿಸಿಕೊಳ್ಳಬೇಕು. ಮತ್ತೆ, ನಿಮ್ಮ ಚಿಂತನೆ ನಿಮ್ಮ ವರ್ತನೆಯಲ್ಲಿ ಪ್ರತಿಫಲಿಸಬೇಕು. ನಿಮ್ಮ ವರ್ತನೆ ಸರಿಯಾಗಿಲ್ಲ ಅಂದರೆ, ಅದನ್ನು ಸರಿಪಡಿಸದಿದ್ದರೆ, ಮತ್ತು ಅದು ನೇರ್ಪಡದಿದ್ದರೆ (ಸುಧಾರಣೆಗೊಳ್ಳದಿದ್ದರೆ) ಆಗ ನಮ್ಮ ಧ್ಯಾನಾಭ್ಯಾಸದಲ್ಲಿ ಏನೋ ಕುಂದುಂಟು ಎಂದು ಅರ್ಥ, ಇಚ್ಛೆಗಳು ಕ್ಷೀಣಿಸಬೇಕು. ಅಥವಾ ಕಡಿಮೆಯಾಗುತ್ತ ಹೋಗಬೇಕು. ನಾವು ಗುರಿಯೆಡೆಗೆ ಹೋಗಲೇ ಬೇಕಿದೆ, ನಾವು ಧೈಯದ ಹತ್ತಿರಕ್ಕೆ ಮೇಲೇರಬೇಕು, ಮತ್ತು ಅದರ ಹತ್ತಿರಕ್ಕೆ, ಇನ್ನೂ ಹತ್ತಿರಕ್ಕೆ ಹೋಗಬೇಕು. ಗುರಿಯನ್ನು ನಿಮ್ಮ ದೃಷ್ಟಿಯಲ್ಲಿರಿಸಿಕೊಳ್ಳಿರಿ, ಹೃದಯದಲ್ಲಿರುವ ಅಡ್ಡಿ-ಆತಂಕಗಳನ್ನು ತೆಗೆದು ಹಾಕಿರಿ. ಪ್ರಶಿಕ್ಷಕರಲ್ಲಿ, ಸಮರ್ಪಣೆಯ ಭಾವವನ್ನು ಬೆಳೆಸಿಕೊಳ್ಳಲು ಹಾಗೂ ಆ ಮಹಾ ಪ್ರಶಿಕ್ಷಕರಾದ ಗುರುವಿನಲ್ಲಿ ಪರಿಪೂರ್ಣ ಆತ್ಮಸಮರ್ಪಣೆಯನ್ನು ಬೆಳೆಸಿಕೊಳ್ಳುವುದಕ್ಕೋಸ್ಕರ, ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಳ್ಳಿರಿ, ಅಧ್ಯಾತ್ಮದಲ್ಲಿ ಉನ್ನತ ಹಂತಗಳನ್ನು ತಲುಪಲು ಇದೊಂದೇ ನಿಮಗೆ ಸಹಾಯಕವಾಗಬಲ್ಲುದು.
ಈ ಶಬ್ದಗಳೊಂದಿಗೆ ನಾನು ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ.
[ಪೂಜ್ಯ ಗುರು ಶ್ರೀ ರಾಮಚಂದ್ರಜಿ ಮಹಾರಾಜರು ಹೈದರಾಬಾದ ಕೇಂದ್ರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಮಾಡಿದ ಭಾಷಣ, ಜೂನ್ 14, 1971].