ಸಹಜ ಮಾರ್ಗ ಪದ್ಧತಿಯ ಪ್ರಕಾರ ಒಬ್ಬ ವ್ಯಕ್ತಿಯು ಧ್ಯಾನದ ಅಭ್ಯಾಸವನ್ನು ಕೈಗೊಳ್ಳಬಯಸಿದಾಗ, ಅಭ್ಯಾಸ ಪ್ರಾರಂಭಿಸುವುದಕ್ಕೆ ಮೊದಲು ಅವನು ತನ್ನ ಗುರಿಯನ್ನು ನಿರ್ಧರಿಸಿಕೊಳ್ಳುವುದು ಆವಶ್ಯಕವಾಗಿದೆ. ಇಲ್ಲವಾದರೆ, ತನ್ನದೇ ಆದ ತಪ್ಪು ಕಲ್ಪನೆಗಳಿಂದ ಮತ್ತು ದೋಷಯುಕ್ತ ಅವಲೋಕನಗಳಿಂದ ಅವನು ದಾರಿತಪ್ಪುವ ಸಂಭವವಿದೆ. ಅವನ ಗುರಿಯು ಭಗವಂತನೊಂದಿಗೆ ಸಂಪೂರ್ಣ ಒಂದಾಗುವುದಿರಬೇಕು ಅಥವಾ ತನ್ನ ವಿಕಾಸದ ಅತ್ಯುಚ್ಚ ಸ್ಥಿತಿಯಾಗಿರಬೇಕು; ಅದು ಇಂದ್ರಿಯಾತೀತವಾಗಿದೆ ಮತ್ತು ಮಾನಸಿಕವಾಗಿ ರಮ್ಯವೆನಿಸುವ ಎಲ್ಲದರಿಂದ ಹಾಗೂ ತನ್ನದೇ ‘ಅಹಂ’ತೆಯ ಭಾವವನ್ನೂ ಮೀರಿದ್ದಾಗಿದೆ. ಆದುದರಿಂದ, (ಧ್ಯಾನಾಭ್ಯಾಸ ಕೈಗೊಳ್ಳುವ) ಅಭ್ಯಾಸಿಯು ತನ್ನ ಇಂದ್ರಿಯಗಳ ಅಥವಾ ಮಾನಸಿಕ ಅಥವಾ ತನ್ನ ಅಹಂಕಾರ (ego) ದ ರಂಜನೆಗಳ ಬಗ್ಗೆ ತನಗೆ ಯಾವ ಸಂಬಂಧವೂ ಇಲ್ಲದಂತಿರಲು ನಿರ್ಧರಿಸಬೇಕು. ಆಗ ಮಾತ್ರವೇ ಗುರುಗಳ ಪ್ರಾಣಾಹುತಿಯ ನಿಜವಾದ ಪ್ರಯೋಜನವನ್ನು ಪಡೆಯಲು ಆಶಿಸಬಲ್ಲ.
ಮಾನವನಿಗೆ ಸಾಧ್ಯವಿರುವ ಅತ್ಯುನ್ನತ ಸ್ಥಿತಿಯ ಪ್ರಾಪ್ತಿಯನ್ನು ತನ್ನ ಧೈಯವನ್ನಾಗಿ ನಿಶ್ಚಿತಗೊಳಿಸಿಕೊಂಡು, ಪ್ರಾಣಾಹುತಿಯನ್ನು ‘ಬೈಠಕ್’ಗಳ ಮೂಲಕ ಪಡೆಯಲು ಶ್ರೀರಾಮಚಂದ್ರ ಮಿಷನ್ನಿನ ಪ್ರಶಿಕ್ಷಕರ ಬಳಿಗೆ ಹೋಗಬೇಕು. ಹಾಗಿದ್ದರೂ, ಪ್ರಶಿಕ್ಷಕನು ಒಬ್ಬ ಗುರು ಅಲ್ಲ. ಆದರೆ ಅವನೂ ಕೂಡ ಪ್ರಾಣಾಹುತಿ ಮೂಲಕ ಅಭ್ಯಾಸಿ ಬಂಧುಗಳಿಗೆ ಸಹಾಯ ಮಾಡಲು ಗುರುಗಳಿಂದ ಅನುಮತಿ ಪಡೆದ ಒಬ್ಬ ಅಭ್ಯಾಸಿ ಎಂಬುದನ್ನು ಸ್ಪಷ್ಟವಾಗಿ ಅರಿತಿರಬೇಕು. ಅಭ್ಯಾಸಿಯಾದವನು ಪ್ರಶಿಕ್ಷಕನನ್ನು ಅನುಕರಿಸುವುದಕ್ಕಾಗಲಿ ಅಥವಾ ಅವನಲ್ಲಿ ತಪ್ಪು ಕಂಡು ಹಿಡಿಯುವುದಕ್ಕಾಗಲಿ ಪ್ರಯತ್ನಿಸದೆ, ಕೇವಲ ತನ್ನ ವಿಕಾಸಕ್ಕಾಗಿ, ಗುರುಗಳ ಪ್ರಾಣಾಹುತಿಯ ಪರಿಣಾಮಗಳನ್ನು ಪ್ರತೀಕ್ಷಿಸುತ್ತಿರಬೇಕು.
ಪ್ರಶಿಕ್ಷಕನು ತನ್ನ ಕಡೆಯಿಂದ ಬೇರೆ ಅಭ್ಯಾಸಿಗಳಲ್ಲಿ ಮಾತ್ರವಲ್ಲದೆ ತನ್ನ ಸಂಪರ್ಕದಲ್ಲಿ ಬರುವ ಎಲ್ಲ ವ್ಯಕ್ತಿಗಳಲ್ಲಿಯೂ ಆತ್ಮವಿಶ್ವಾಸ ಮತ್ತು ಸದಿಚ್ಛೆಗಳನ್ನು ಉಂಟುಮಾಡುವಂತೆ ತನ್ನನ್ನು ತಾನು ರೂಪಿಸಿಕೊಳ್ಳಬೇಕು. ಅವನ ವರ್ತನೆ ಹಾಗೂ ಚಟುವಟಿಕೆಗಳು ಬೇರೆಯವರಲ್ಲಿ ಪ್ರೇಮ ಹಾಗೂ ಪವಿತ್ರತೆಯ ಭಾವನೆಯನ್ನು ಉಂಟುಮಾಡಬೇಕು. ಸಹಜಮಾರ್ಗದ ಬೋಧನೆಗಳು ಹಾಗೂ ಆದರ್ಶಕ್ಕೆ ಅನುಗುಣವಾಗಿ ಒಬ್ಬ ಪ್ರಶಿಕ್ಷಕನು ತನ್ನ ಚಾರಿತ್ರ್ಯವನ್ನು ರೂಪಿಸಿಕೊಳ್ಳದಿದ್ದರೆ ಅವನು ಸಂಸ್ಥೆಗೂ ಗುರುಗಳಿಗೂ ಅಪಚಾರ ಮಾಡುವನು. ಅಭ್ಯಾಸಿಗಳು (ಸಂಗಾತಿಗಳು) ಆತ್ಮವಿಶ್ವಾಸ ಮತ್ತು ಭರವಸೆಯಿಂದ ಅಭ್ಯಾಸ ಮಾಡುವಂತಾಗಲು, ಪ್ರಶಿಕ್ಷಕನು ಸ್ವತಃ ಧ್ಯಾನ, ಶುದ್ದೀಕರಣ ಹಾಗೂ ಪ್ರಾರ್ಥನೆಯ ಅಭ್ಯಾಸಗಳನ್ನು ಮಾಡಬೇಕು. ಪ್ರಶಿಕ್ಷಕನು ಒಬ್ಬ ಅಭ್ಯಾಸಿಯ ಸಾಧನೆಯನ್ನು ಸರಳ ಹಾಗೂ ಸುಲಭಗೊಳಿಸುವ ಕಾರ್ಯ ಮಾಡಬೇಕು.
ಅಭ್ಯಾಸಿಗಳ ಮನಸ್ಸಿನಲ್ಲಿ ಗೊಂದಲ ಹಾಗೂ ಕ್ಲಿಷ್ಟತೆಗಳನ್ನು ಉಂಟುಮಾಡುವ ಅಭ್ಯಾಸದ ಬಹಳಷ್ಟು ವಿಧಾನಗಳನ್ನು ವಿಧಿಸುವುದು ಪ್ರಶಿಕ್ಷಕನ ಕೆಟ್ಟ ಕಾರ್ಯನೀತಿಯಾಗುವುದು. ಅಂತಹ ಪ್ರಶಿಕ್ಷಕನು ಅಭ್ಯಾಸಿಗಳಿಗೆ ಕೆಡುಕನ್ನು ಉಂಟುಮಾಡುವನಲ್ಲದೆ ಸಾಕ್ಷಾತ್ಕಾರದ ಅತಿ ಸರಳವೂ ಸ್ವಾಭಾವಿಕವೂ ಆದ ಸಹಜಮಾರ್ಗ ಪದ್ಧತಿಗೂ ಕೆಟ್ಟ ಹೆಸರು ತರುತ್ತಾನೆ.
ನಮ್ಮ ಗುರುಗಳು ಅತಿ ಸರಳವೂ ಅತ್ಯಂತ ಪರಿಣಾಮಕಾರಿಯೂ ಆದ ಆಧ್ಯಾತ್ಮಿಕ ತರಬೇತಿಯ ಅದ್ಭುತ ಮಾರ್ಗವನ್ನಿತ್ತಿದ್ದಾರೆ. ಮನುಷ್ಯನ ಅಸ್ತಿತ್ವದ ಹಾಗೂ ನಡವಳಿಕೆಯ ಮೂಲಕಾರಣವನ್ನು ಅವರು ಕಂಡು ಹಿಡಿದರು. ಮನುಷ್ಯನ ಹಟಮಾರಿ ಮನಸ್ಸಿನ ಕಾರ್ಯರೀತಿಯು ಜಟಿಲತೆಗಳನ್ನೂ, ಸ್ಥೂಲತೆಯನ್ನೂ ಉಂಟುಮಾಡುವುದು, ಮತ್ತು ಮನುಷ್ಯನು ತನ್ನದೇ ಸೃಷ್ಟಿಯ ದಾಸನಾಗಿ ಕೊನೆಯಿಲ್ಲದ ಹೆಣಗಾಟದಲ್ಲಿರುತ್ತಾನೆ, ಹಾಗೂ ಅದರಿಂದಾಗಿ ಇನ್ನೂ ಹೆಚ್ಚಿನ ಕ್ಲಿಷ್ಟತೆಗಳನ್ನೂ, ಬಂಧನಗಳನ್ನೂ ಸೃಷ್ಟಿಸಿಕೊಳ್ಳುವನು ಎಂಬುದನ್ನು ಗುರುಗಳು ವಿವರಿಸಿದ್ದಾರೆ. ತಾನು ಕಳೆದುಕೊಂಡ ಸ್ವಾತಂತ್ರ್ಯವನ್ನು ಮರಳಿ ಪಡೆಯಲು ಇರುವ ಏಕೈಕ ಉಪಾಯವೆಂದರೆ ತನ್ನ ಸಂಕಲ್ಪ ಶಕ್ತಿ (ವಿಚಾರ ಶಕ್ತಿ)ಯನ್ನುಪಯೋಗಿಸಿ ತಾನೇ ನಿರ್ಮಿಸಿಕೊಂಡ ಬಲೆಯನ್ನು ವಿಚ್ಛಿನ್ನಗೊಳಿಸಲು ಪ್ರಯತ್ನಿಸುವುದೇ ಆಗಿದೆ. ಯಾವನು ತನ್ನ ಬಲೆಯನ್ನು ತುಂಡರಿಸಿರುವನೋ ಮತ್ತು ಎಲ್ಲ ತರಹದ ಬಂಧನಗಳಿಂದ ಪರಿಮಿತಿಗಳಿಂದ ಸಂಪೂರ್ಣ ಮುಕ್ತನಾಗಿರುವನೋ ಅವನ ಸಹಾಯವು ಸಾಧಕನಿಗೆ ಅಪಾರ ಪ್ರಯೋಜನವುಳ್ಳದ್ದಾಗುವುದು. ಸಹಜಮಾರ್ಗದಲ್ಲಿ ಅಂತಹ ಸಹಾಯವು ಗುರುವಿನ ಪ್ರಾಣಾಹುತಿಯ ಮೂಲಕ ನೀಡಲಾಗುವುದು. ಧ್ಯೇಯವಸ್ತುವಿನ ನಿರಂತರ ಸ್ಮರಣೆಯು ಅಭ್ಯಾಸಿಯನ್ನು ಪ್ರಾಣಾಹುತಿಯನ್ನು ಹೆಚ್ಚು ಹೆಚ್ಚು ಗ್ರಹಿಸಲು ಶಕ್ತಗೊಳಿಸುತ್ತದೆ.
[ಸಹಜಮಾರ್ಗ ಪತ್ರಿಕೆ, ನವೆಂಬರ್ 1979]
ಮತೀಯ ಕಟ್ಟರತೆ ಆಧ್ಯಾತ್ಮಿಕ ಪ್ರಗತಿಗೆ ಬಹು ದೊಡ್ಡ ಪ್ರತಿಬಂಧಕವಾಗಿದೆ.
ಶ್ರೀ ಬಾಬೂಜಿ
(ನು.ಮು.39)