ನಾವೆಲ್ಲರೂ ಬೌದ್ಧಿಕವಾಗಿ, ನೈತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಸಂಬಂಧ ಹೊಂದಿದ ಸೋದರರು, – ಅದೇ ಮಾನವ ಜೀವನದ ಮುಖ್ಯ ಗುರಿಯಾಗಿದೆ. ಅದು, ಇದು, ಎಂಬುದೆಲ್ಲವೂ ಈಗ ಅಳಿದು ಹೋಗಿದೆ. ಅವನ (ಸರ್ವೇಶ್ವರನ) ಎಲ್ಲ ಕಾರ್ಯಗಳಲ್ಲಿ ಮತ್ತು ಪರಿಸರದಲ್ಲಿ ಈಗ ಫರಿಶುದ್ಧತೆಯೊಂದೇ ಉಳಿದಿದೆ. ಪರತತ್ತ್ವದೊಂದಿಗೆ ಮನುಷ್ಯನ ಆಧ್ಯಾತ್ಮಿಕ ಅದೃಷ್ಟವನ್ನು ಹೆಣೆಯುವ ಸಾಧನ ಅದೊಂದೇ..
ಗುರುಸ೦ದೇಶ.
ಮನುಷ್ಯನು ಒಂದು ಸಾಮಾಜಿಕ ಪ್ರಾಣಿ, ಮತ್ತು ಆಲೋಚನೆ ಮಾಡುವ ಜೀವಿಯೂ ಆಗಿದ್ದಾನೆ. ದೈವೀ ಸ್ಥಿತಿಯು ಮಾನವ ಅಸ್ತಿತ್ವದ ಬುನಾದಿಯಾಗಿದೆ. ಸಾಮಾಜಿಕ ಜೀವನಕ್ಕೆ ನೈತಿಕ ಜೀವನವು ಅವಶ್ಯವಾಗಿದೆ. ದೈವೀ ಬುನಾದಿಯು ಆಧ್ಯಾತ್ಮಿಕ ಜೀವನವನ್ನು ಅಗತ್ಯಗೊಳಿಸುತ್ತದೆ. ಬೌದ್ಧಿಕ ಚಟುವಟಿಕೆಯು ಮನುಷ್ಯನ ಪ್ರಮುಖ ಧ್ಯೇಯ ಪ್ರಾಪ್ತಿಗಾಗಿ ಮಾರ್ಗಗಳನ್ನು ಹಾಗೂ ಸಾಧನಗಳನ್ನು ಯೋಚಿಸುತ್ತದೆ.
ವೈಚಾರಿಕ ಚಟುವಟಿಕೆಯು ಅನಿಯಂತ್ರಿತವಾದಾಗ ಪ್ರತ್ಯೇಕತೆಯ ಹಾಗೂ ವಿಭಿನ್ನತೆಯ ಭಾವನೆಗಳು ಉಂಟಾಗುವುವು. ಯಾವಾಗ ವಿಚಾರ ಕ್ರಿಯೆ ನಿಯಂತ್ರಿತವಾಗುವುದೋ ಆಗ ಭೇದಗಳು ಅಳಿಯುವುವು. ಹಾಗೂ ಮೂಲಭೂತ ಐಕ್ಯವು ಸಿದ್ಧಿಸುವುದು. ಭೇದದ ಅಳಿವು ನೈಜ ಶುದ್ಧತೆಯನ್ನು ದೃಷ್ಟಿಪಥದಲ್ಲಿ ತರುವುದು, ಆ ಶುದ್ಧತೆಯಿಂದ ಎಲ್ಲರೂ ಅಂತಿಮ ತತ್ತ್ವದೊಂದಿಗೆ, ಬೇರ್ಪಡಿಸಲಾರದಂತೆ ಸಂಬಂಧಿತರಾಗಿದ್ದಾರೆ.
ಧ್ಯಾನದ ಅಭ್ಯಾಸದಿಂದ ವಿಚಾರ ಕ್ರಿಯೆಯನ್ನು ನಿಯಂತ್ರಿಸುವುದು ಸಾಧ್ಯ, ಹಾಗೂ ಅದು ಅನಿವಾರ್ಯವೂ ಆಗಿದೆ. ಗುರುವಿನ ಕೃಪೆಯ ಪ್ರಾಣಾಹುತಿಯ ಕ್ಷಾತ್ಕಾರವನ್ನು ಸುಲಭಗೊಳಿಸುವುದು.ಸಾಮಾನ್ಯವಾಗಿ ವಿಚಾರ ಕ್ರಿಯೆಗಳು ಇಚ್ಛೆಗಳಿಂದ ಪ್ರಕ್ಷುಬ್ಧಗೊಳ್ಳುವವು. ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಪ್ರಬಲ ಇಚ್ಛೆಯನ್ನು ಬುದ್ಧಿಯಲ್ಲಿ ಪ್ರೇರೇಪಿಸಿದರೆ, (ಅಥವಾ ನಾಟಿಸಿದರೆ) ಬೇರೆ ಎಲ್ಲ ಇಚ್ಛೆಗಳು ತುಚ್ಚವೆಂದೆನಿಸಿ, ತಮ್ಮ ಹಿಡಿತವನ್ನು, ಅಷ್ಟಲ್ಲದೆ ವಿಚಾರ ಕ್ರಿಯೆಯನ್ನು ಉದ್ರೇಕಿಸುವ ತಮ್ಮ ಸಾಮರ್ಥ್ಯವನ್ನು ಕೂಡ ಕಳೆದುಕೊಳ್ಳುವವು. ಧ್ಯಾನಾಭ್ಯಾಸದ ಸಮಯದಲ್ಲಿ ವಿಕ್ಷೇಪ ಉಂಟುಮಾಡುವ, ವಿಚಲನೆ ಉಂಟುಮಾಡುವ ವಿಚಾರಗಳು ಹೃದಯದಲ್ಲಿ ಮಲಿನತೆಯ ರೂಪದಲ್ಲಿ ಇನ್ನೂ ಉಳಿದಿರುವ ಇಚ್ಛೆಗಳ ಬೀಜಗಳಿಂದಾಗಿಯೇ ಉದ್ಭವಿಸುತ್ತವೆ.
ಗುರುಗಳಿಂದ ಯೋಜಿಸಲ್ಪಟ್ಟಂತೆ, ಆಧ್ಯಾತ್ಮಿಕ ತರಬೇತಿಯ, ಸಹಜ ಮಾರ್ಗವೆಂದು ಕರೆಯಲಾದ ಈ ಪದ್ಧತಿಯಲ್ಲಿ, ಆಂತರಿಕ ಮಲಿನತೆಗಳು ಸ್ಥೂಲತೆ, ಜಡತೆ ಮುಂತಾದವುಗಳನ್ನು ನಿವಾರಿಸಲು ಸರಳ ಹಾಗೂ ಚೆನ್ನಾಗಿ ಪರೀಕ್ಷಿಸಲ್ಪಟ್ಟ ಅಭ್ಯಾಸ ಕ್ರಮಗಳನ್ನು ವಿಧಿಸುತ್ತದೆ. ದಯಾ-ದಾನ-ಧರ್ಮದ ಮನಃಪ್ರವೃತ್ತಿ ಮತ್ತು ನಿಃಸ್ವಾರ್ಥ ಕ್ರಿಯೆಗಳು ಆಂತರಿಕ ಶುದ್ಧತೆಯನ್ನು ಉಂಟುಮಾಡುವುದರಲ್ಲಿ ಬಹಳ ಸಹಾಯ ಮಾಡುತ್ತವೆ. ದ್ವೇಷ ಹಾಗೂ ಲೋಭಗಳಿಂದ ಸಂಪೂರ್ಣ ಮುಕ್ತರಾಗಿರದವರು ದೇವರ ರಾಜ್ಯದಲ್ಲಿ ಪ್ರವೇಶಿಸಲು ಎಂದೂ ಆಶಿಸಲಾರರು.ಸ್ಥೂಲತೆ ಹಾಗೂ ಜಡತೆಗಳಿಂದ ಬಿಡುಗಡೆಯಾಗಲಿಕ್ಕೆ, ಗುರುಗಳೊಂದಿಗೆ ಪ್ರೇಮಪೂರ್ವಕ ಸಂಬಂಧ ಹೊಂದಿರುವುದು ಬಹಳ ಸಹಾಯಕವಾಗುವುದು; ಏಕೆಂದರೆ, ಗುರುಗಳು ಬಂಧನ ಹಾಗೂ ಪರಿಮಿತಿಗಳಿಂದ ಸಂಪೂರ್ಣ ಮುಕ್ತನಾಗಿರುವರು ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಯಾವಾಗಲೂ ಎತ್ತರೆತ್ತರಕ್ಕೆ ಏರುತ್ತಲೇ ಇರುವರು.
ಗುರುವು ಎಲ್ಲ ಬಂಧನಗಳಿಂದ, ಪರಿಮಿತಿಗಳಿಂದ ಮುಕ್ತನಾದವನೆಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾದರೆ,ಒಬ್ಬನು ಗುರುವಿನೊಂದಿಗೆ ಸಾಹಚರ್ಯ-ಸಂಬಂಧ ಬೆಳೆಸಿಕೊಂಡು ಗುರುವನ್ನು ಅವಲೋಕಿಸಬೇಕು ಮತ್ತು ಪರಿಶೀಲಿಸಬೇಕು. ವಾಸ್ತವವೇನೆಂದರೆ ಗುರುವಿನ ಮೇಲೆ ಧ್ಯಾನ ಮಾಡುವುದು ಚಿಂತನ ಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುತ್ತದೆ. ಗುರುವು ಒಬ್ಬ ಸಾಮಾನ್ಯ ಮನುಷ್ಯನಂತೆ ತೋರಬಹುದು. ಆದರೆ ಅಭ್ಯಾಸಿಯ ಮಾನವ ಜೀವನದ ನಿಜವಾದ ಗುರಿಯನ್ನು ತನ್ನ ದೃಷ್ಟಿಯಲ್ಲಿ ಇರಿಸಿಕೊಂಡಿದ್ದಾದರೆ, ಗುರುವಿನ ಶಕ್ತಿಯು ಮಾನವ ಸ್ತರಗಳನ್ನು ಮೀರಿರುವುದೆಂಬುದನ್ನು ತೀವ್ರವಾಗಿ ಕಂಡುಕೊಳ್ಳುವನು. ಗುರುವು ಒಬ್ಬ ಅತಿಮಾನವ ವ್ಯಕ್ತಿಯಾಗಿ ತೋರಿಬರಲಾರಂಭಿಸುವುದು. ಅಭ್ಯಾಸಿಯು ಸೂಕ್ಷ್ಮ ಅನುಭವ ಶಕ್ತಿಯುಳ್ಳವನಾಗಿದ್ದರೆ, ಅವನ ಹೃದಯವು ಗುರುವಿನ ಮಹಾನತೆ ಮತ್ತು ಪರಮ ಪವಿತ್ರತೆಯ ಸಂಕೇತಗಳನ್ನು ಕೊಡುವುದು. ಈ ಸಂಬಂಧದಲ್ಲಿ ಪ್ರೇಮದ ಛಾಯೆಯಿದ್ದರೆ ಸಾಕ್ಷಾತ್ಕಾರವು ಶೀಘ್ರದಲ್ಲಿ ಆಗುವುದು.
ಅಭ್ಯಾಸಿಯು ನಿಶ್ಚಿತಪಡಿಸಿಕೊಂಡ ಗುರಿಯು ಅತ್ಯುನ್ನತ ಸ್ಥಿತಿ ಅಥವಾ ಪರಮೋಚ್ಚ ತತ್ತ್ವವೇ ಆಗಿರಬೇಕು. ಒಂದು ವೇಳೆ, ನಮ್ಮ ಗುರಿಯು ಕ್ಷುದ್ರ ಆಶೆಗಳಿಂದ ದುರ್ಬಲಗೊಂಡರೆ ಗುರುಗಳು ಅದನ್ನು ಸರಿಪಡಿಸಲು ಪ್ರಯತ್ನಿಸುವರು, ಎಂಬುದು ಅನೇಕ ಸಲ ಕಂಡುಬರುತ್ತದೆ. ಆದರೆ ನಮ್ಮ ಸಂವೇದನಾಶೀಲತೆಯನ್ನು ಬೇಡವಾದಲ್ಲಿ ಉಪಯೋಗಿಸುವುದರ ಕಾರಣ, ನಾವು ಗುರುಗಳ ಮೇಲೆಯೇ ದೋಷಾರೋಪಣೆ ಮಾಡುವತ್ತ, ಪರಿಹಾಸಗೈಯುವತ್ತ ಅಥವಾ ಅವಮರ್ಯಾದೆ ಮಾಡುವತ್ತ ಜಾರುತ್ತೇವೆ ಹಾಗೂ ಅದರಿಂದಾಗಿ ನಮ್ಮ ಆಧ್ಯಾತ್ಮಿಕ ಪ್ರಗತಿಯನ್ನು ನಿಧಾನಗೊಳಿಸಿಕೊಳ್ಳುತ್ತೇವೆ. ಇದಾಗುವುದೇಕೆಂದರೆ, ಶುದ್ದೀಕರಣ ಕ್ರಿಯೆ ಅಭ್ಯಾಸಿಯ ಪ್ರಯತ್ನವನ್ನೊಳಗೊಂಡಿದ್ದು, ಅದನ್ನು ಅವನು ಸಾಮಾನ್ಯವಾಗಿ ತಪ್ಪಿಸುತ್ತಾನೆ ಮತ್ತು ಅದಕ್ಕಾಗಿ, “ತಾನು ಎಷ್ಟು ಪವಿತ್ರನಾಗಿರುವೆನೆಂದರೆ ತನಗೆ ಶುದ್ದೀಕರಣದ ಆವಶ್ಯಕತೆಯಿಲ್ಲ”. ಅಥವಾ, “ಅವಶ್ಯವಿದ್ದರೆ ಗುರುಗಳೇ ಶುದ್ದೀಕರಿಸುವರು”, ಅಥವಾ “ಶುದ್ದೀಕರಣದ ನಿಜವಾದ ಪದ್ಧತಿ ತನಗೆ ತಿಳಿಯದು”, ಅಥವಾ, “ಗುರುಗಳಿಗೇ ಅದರ ತಿಳಿವಳಿಕೆ ಅವಶ್ಯವಿದೆ”-ಮುಂತಾಗಿ ಒಂದಿಲ್ಲೊಂದು ನೆಪ ಒಡ್ಡಿ ಶುದ್ದೀಕರಣಕ್ಕೆ ತನಗೆ ತಾನೇ ರಿಯಾಯತಿ ಕೊಟ್ಟುಕೊಳ್ಳುತ್ತಾನೆ.
ಪರಿಪೂರ್ಣನಾದ ಗುರು ಸಂಪೂರ್ಣ ಪರಿಶುದ್ಧನಾಗಿದ್ದು, ನಾವು ಅವನನ್ನು ಹೇಗೆ ಭಾವಿಸುವೆವೋ ಹಾಗೇ ಇರುವಂತೆ ತೋರುತ್ತಾನೆ, ಮತ್ತು ಅತ್ಯಂತ ದಯಾಳು ಹಾಗೂ ಸಹಾನುಭೂತಿ ಉಳ್ಳವನಾಗಿದ್ದು, ನಮಗೆ ಎಲ್ಲ ಸ್ವಾತಂತ್ರ್ಯ ಕೊಡುತ್ತಾನೆ. ಅಭ್ಯಾಸಿಯು ಯಾವಾಗಲೂ ಜಾಗರೂಕನಾಗಿ ಇರದಿದ್ದರೆ, ತನ್ನದೇ ಆದ ತಿಳಿಗೇಡಿತನದ ಹಾಗೂ ಮೂರ್ಖತನದ ಭಾವನೆ ಹಾಗೂ ಕಲ್ಪನೆಗಳಿಗೆ ಅದು ಗುರುಗಳು ಕೊಟ್ಟ ಒಪ್ಪಿಗೆ ಎಂದು ತಿಳಿದುಕೊಳ್ಳುವ ಸಂಭವವಿದೆ. ನಮ್ಮ ಕುದ್ರ, ಹುರುಳಿಲ್ಲದ, ಮೂರ್ಖತನದ ಕಲ್ಪನೆಗಳನ್ನು ಬದಿಗಿರಿಸಿ, ಅವನೊಂದಿಗಿನ ನಮ್ಮ ಐಕ್ಯದ ನಿಜ ಸ್ಥಿತಿಯನ್ನು ಕಂಡುಕೊಳ್ಳಲು ನಾವು ಯತ್ನಿಸಬೇಕು.
ಮಾನವ ರೂಪ ಧರಿಸಿದ ನಮ್ಮ ಗುರುಗಳು ಎಲ್ಲ ಮಾನವ ಸಹಜ ಗುಣಗಳನ್ನು ತೋರ್ಪಡಿಸುತ್ತಾರೆ. ಹಾಗಿರುವಾಗಲೇ, ಪರಿಪೂರ್ಣರಾದ ಅವರು ತಮ್ಮ ಲೌಕಿಕ ಅಸ್ತಿತ್ವದ ಧ್ಯೇಯ ಸಾಧನೆಗೋಸ್ಕರ ವಿಶೇಷ ರೀತಿಯಲ್ಲಿ ಹೊಂದಿರುವ ಮೂಲ ಸ್ಥಿತಿಯನ್ನು, ಅಥವಾ ಅತ್ಯಂತ ಸುಸಂಸ್ಕೃತವಾದ ಅಥವಾ ಮಾನವ ವ್ಯಕ್ತಿತ್ವದ ಆತ್ಯಂತಿಕ ರೂಪವನ್ನು ಸಾಕ್ಷಾತ್ಕರಿಸಿಕೊಳ್ಳಲು ನಮಗೆ ಮಾರ್ಗದರ್ಶನ ಮಾಡುತ್ತಿರುವರು. ಅವರ ಪ್ರೇಮಪೂರ್ಣ ವರ್ತನೆ ಅವರ ಹಾಸ್ಯಮಯ ಕಥಾನಕಗಳು, ಅವರ ವಿಚಾರಗಳ ಅಭಿವ್ಯಕ್ತಿ, ಎಲ್ಲವೂ ಅದೇ ಶಕ್ತಿ ಭಂಡಾರದಿಂದಲೇ ಸ್ಪುರಿಸುವುವು, ಮತ್ತು ನಮ್ಮ ಮಾರ್ಗದರ್ಶನ ಮತ್ತು ತಿಳಿವಳಿಕೆಗಾಗಿ ಅವರು ಬೇರೆ ಬೇರೆ ಬಾಹ್ಯ ವೇಷಗಳನ್ನು ಧರಿಸುತ್ತಾರೆ ಎಂಬುದನ್ನು ನಾವು ಅರಿತುಕೊಂಡರೆ, ಯೋಗ್ಯ ಮಾರ್ಗದ ಮೇಲೆ ಉಳಿಯಲು ನಮಗೆ ಸಾಧ್ಯವಾಗುವುದು. ನಾವು ಅವರ ಅತಿಮಾನುಷ ಅಥವಾ ವಿಶೇಷ ವ್ಯಕ್ತಿತ್ವವನ್ನು ಒಂದು ವೇಳೆ ಮರೆತರೆ, ಅವರ ವ್ಯಕ್ತಿತ್ವವನ್ನು ನಮ್ಮದೇ ಇಷ್ಟಾನಿಷ್ಟಗಳ ಪರಿಮಿತಿಯಲ್ಲಿರಿಸಿ, ಅವರ ವ್ಯಕ್ತಿತ್ವವನ್ನು ಕುರಿತಾದ ನಮ್ಮದೇ ಭ್ರಮಾತ್ಮಕ ತಿಳಿವಳಿಕೆಯ ಮನಃಸಂತೋಷದಲ್ಲಿ ಸಿಕ್ಕಿ ಬೀಳುತ್ತೇವೆ. ಆ ವಿಶಿಷ್ಟ ವ್ಯಕ್ತಿತ್ವದ ಪ್ರತಿಯೊಂದು ಮುಖವನ್ನೂ ಮೆಚ್ಚಿ, ಪ್ರೀತಿಸುವುದನ್ನು ಕಲಿಯಬೇಕು ಹಾಗೂ ಅವರ ಪ್ರತಿಯೊಂದು ಶಬ್ದ, ವಿಚಾರ ಮತ್ತು ಹಾವಭಾವದಿಂದ ಶಿಕ್ಷಣ ಪಡೆಯಲು ಸದಾ ಸಿದ್ಧರಿರಬೇಕು. ಆಗ ಮಾತ್ರವೇ ನಾವು ಅವರ ಯೋಜನೆಗೆ ಅನುಸಾರವಾಗಿ, ಅವರ ಪ್ರಾಣಾಹುತಿಯ ಮೂಲಕ ಅವರನ್ನು ಸಾಕ್ಷಾತ್ಕರಿಸಿಕೊಳ್ಳಲು ಆಶಿಸಲು ಸಾಧ್ಯ.
ತನ್ನ ಸುಖಾನ್ವೇಷಣೆಯ ಪ್ರವೃತ್ತಿಗಳು ತನಗೂ ಹಾಗೂ ಇತರರಿಗೂ ನಿಜವಾದ ದುಃಖವನ್ನು ಉಂಟುಮಾಡುವಷ್ಟು ಮೂರ್ಖತನ ಹಾಗೂ ಜಟಿಲತೆಯಿಂದ ಕೂಡಿವೆಯೆಂಬುದನ್ನು ಒಬ್ಬ ಅಭ್ಯಾಸಿಯು ಶೀಘ್ರವಾಗಿ ಮನವರಿಕೆ ಮಾಡಿಕೊಳ್ಳಬೇಕು. ಆಗ ಮಾತ್ರವೇ ಅವನ ತನ್ನದೇ ಇಚ್ಛೆಗಳ ದಾಸ್ಯದಿಂದ ಬಿಡುಗಡೆಗೊಳ್ಳುವ ಆಶೆ ಮಾಡಬಹುದು, ಗುರುಗಳಿಂದ ರೂಪುಗೊಳ್ಳಲು ಮುಕ್ತವಾಗಿ ಅನುವು ಮಾಡಿಕೊಟ್ಟರೆ,ಒಬ್ಬಅಭ್ಯಾಸಿಯ ಗುರು-ಪ್ರೇಮವು ಸುಧಾರಿತಗೊಳ್ಳುವ, ಶುದ್ಧಗೊಳ್ಳುವ ವಿವಿಧ ಹಂತಗಳ ಮೂಲಕ ಸಾಗುತ್ತದೆ. ಗುರುವಿನ ಪರವಾಗಿರುವ ಅವನ ಆಸಕ್ತಿಯು ಸಂತೋಷ ಹಾಗೂ ಸುಖಗಳಿಂದ ಹಿಡಿದು, ಅವನ ಸುಖಾನ್ವೇಷಣೆಯ, ಸೂಕ್ತವಲ್ಲದ ಅಭ್ಯಾಸಗಳನ್ನೂ ತೊಡೆದು ಹಾಕಿ ಶುದ್ಧಗೊಳ್ಳಬೇಕು; ಅದಿಲ್ಲವಾದರೆ, ಅವನು ಮಾಡುವ ಗುರುವಿನ ಅವಲೋಕನ ಹಾಗೂ ಅನುಕರಣೆಗಳಿಂದ ದೊರೆಯುವ ಅತಿ ಸಂತೋಷಗಳು ಒಟ್ಟುಗೂಡಿ ಸಂಚಯವಾಗಿ ಅಭ್ಯಾಸಿಯಲ್ಲಿ ಸ್ಥೂಲತೆ ಮತ್ತು ಇನ್ನೂ ಹೆಚ್ಚಿನ ವಿಪರೀತ ವರ್ತನೆಯಾಗಿ ಪರಿಣಮಿಸಬಹುದು.
ಗುರುಗಳು ತೋರಿಸುವ ಸರ್ವಾವೃತ ಪ್ರೇಮವು ಅಭ್ಯಾಸಿಗಳ ಸ್ವಪ್ರತಿಷ್ಠೆಯನ್ನು ಹೆಚ್ಚಿಸುವ ಸಾಧ್ಯತೆಯಿದ್ದು, ಎಲ್ಲರಿಗಾಗಿ ಪ್ರೇಮ ಮತ್ತು ಎಲ್ಲರಿಗಾಗಿ ಪ್ರೇಮ ಎಂಬುದರ ಬದಲಿಗೆ ಸ್ವ-ಪ್ರೇಮ ಮತ್ತು ಸಂಕುಚಿತ ಮನೋಭಾವಗಳಲ್ಲಿ ಪರಿಣಮಿಸಬಹುದು. ಸಾಮರಸ್ಯಕ್ಕೆ ಬದಲಾಗಿ ಪ್ರತ್ಯೇಕತೆ, ಐಕ್ಯಕ್ಕೆ ಬದಲಾಗಿ ಏಕಾಕಿತನ, ಸ್ಪಷ್ಟತೆಯ ಬದಲಾಗಿ ಅಬೋಧ ಖಾಲಿತನ, ಶೂನ್ಯತೆ, ಆತ್ಮಸಮರ್ಪಣದ ಬದಲಿಗೆ ಅಸಹಾಯಕತೆ, ಚಿಕಿತ್ಸಕ ದೃಷ್ಟಿಯ ಬದಲಿಗೆ ಸ್ವಪಕ್ಷ ಪ್ರತಿಪಾದನೆ ಆತ್ಮನಿರಸನಕ್ಕೆ ಬದಲಾಗಿ ಅಹಂಭಾವ ಇಂತಹ ಅವಾಂಛಿತ ಪರಿಣಾಮಗಳಾಗಬಹುದು. ಕೆಲವು ಸಲ ಇಂತಹ ಒಬ್ಬ ಅಭ್ಯಾಸಿಯು ಭ್ರಾಂತಚಿತ್ತನಾಗಿ, ಅಂತಃಶುದ್ಧಿಗೆ ತನ್ನನ್ನು ಒಗ್ಗಿಸಿಕೊಳ್ಳಲು ನಿರಾಕರಿಸುವ ಮೂಲಕ, ತಾನು ಅಧ್ಯಾತ್ಮದಲ್ಲಿ ಪರಿಣತನೆಂದೋ, ಪರಿಪೂರ್ಣ ಗುರು ಎಂದೋ ಅಥವಾ ತಾನೇ ದೇವರು ಎಂದೋ, ತನ್ನ ಕುರಿತಾಗಿ ಭ್ರಮೆಗಳನ್ನು ಹುಟ್ಟಿಸಿಕೊಂಡರೂ ಆಶ್ಚರ್ಯವಿಲ್ಲ.
ಏಕತೆಯ ಅವಸ್ಥೆಯು ಬೆಳೆಯಲಿಕ್ಕೆ ಇರುವ ಅಡ್ಡಿಗಳನ್ನು ಪರಿಶೀಲನೆ ಮಾಡಿದ ತರುವಾಯ ನಾವು ಈಗ ಏಕತೆಯ ಅವಸ್ಥೆ ಮತ್ತು ಅದರ ಪ್ರಾದುರ್ಭಾವದ ಮೇಲೆ ನಮ್ಮ ಚಿತ್ರವನ್ನು ನೆಲೆಗೊಳಿಸೋಣ. ಮಕ್ಕಳು ತಮ್ಮ ತಂದೆ-ತಾಯಿಗಳ ಪ್ರತಿಯೊಂದು ವಸ್ತುವೂ ತಮ್ಮದೆಂದೇ ಸ್ಥೂಲವಾಗಿ ತಿಳಿಯದಂತೆಯೇ, ನಾವು ಗುರುವನ್ನು ನಮ್ಮವನೆಂದು ಪರಿಗಣಿಸಿದ ಮೇಲೆ, ಕಾಲಕ್ರಮದಲ್ಲಿ, ಅದರ ಸಹಜ ಫಲವಾಗಿ, ನಾವು ಅವನದೆಲ್ಲವೂ ನಮ್ಮದೆಂದು ಭಾವಿಸಲು ಪ್ರಾರಂಭಿಸುತ್ತೇವೆ. ಆ ಘಟ್ಟದಲ್ಲಿ, ಆ ಏಕತೆಯ ಭಾವನೆಯು ಸಾರತತ್ತ್ವಕ್ಕೆ ಸಂಬಂಧಿಸಿದೆ ಮತ್ತು ಅದರ (all-persuasiveness) ಸರ್ವಸಮನ್ವಿತತೆಯ ಗುಣ-ಲಕ್ಷಣವನ್ನುಳ್ಳದ್ದೆಂಬ ಬಗ್ಗೆ ಜಾಗರೂಕನಾಗಿರತಕ್ಕದ್ದು. ವಾಸ್ತವವಾಗಿ, ಒಬ್ಬ ಸಮರ್ಥ ಗುರುವು ಅಂತಿಮ ಚೈತನ್ಯವನ್ನು ಪ್ರಾಣಾಹುತಿಯ ಮೂಲಕ ನೀಡುತ್ತಾನೆ ಹಾಗೂ ಅದನ್ನು ಅಭ್ಯಾಸಿಯು ತನ್ನ ವಿವೇಕ ಶಕ್ತಿಯನ್ನು ಮತ್ತು ಪ್ರಜ್ಞಾಶಕ್ತಿಯನ್ನು ಉಜ್ವಲಗೊಳಿಸಲು ಉಪಯೋಗಿಸಬೇಕು. ಬೇರೆಯವರನ್ನು ಕುರಿತಾದ ಅನಾದರ ಅಥವಾ ತಾತ್ಸಾರದ ರೂಪದಲ್ಲಾಗಲಿ, ಅಥವಾ ತನ್ನ ಸ್ವ-ಪ್ರತಿಷ್ಠೆಯ ರೂಪದಲ್ಲಾಗಲಿ ಅತ್ಯಲ್ಪವೇ ಕಲ್ಮಷವಿದ್ದರೂ ಕೂಡ, ಅದಕ್ಕೆ ಚಿಚ್ಛಕ್ತಿಯು ದೊರೆಯಲು ಅನುವುಂಟಾದರೆ, ಆಗ ಅದು ಏಕತೆಯ ಸೂತ್ರವನ್ನು ವಿಚ್ಛಿನ್ನಗೊಳಿಸಬಹುದು ಮತ್ತು ಅಭ್ಯಾಸಿಯು ಏಕತೆಯ ನೈಜ ಆನಂದದಿಂದ ವಂಚಿತನಾಗಿ ಉಳಿಯಬಹುದು.
“ಗುರುವಿನೊಂದಿಗೆ ಸಂಬಂಧ ಹೊಂದಿದ ಹಾಗೂ ಸಾಹಚರ್ಯ ಹೊಂದಿದ ಎಲ್ಲರ ಜೊತೆಗಿನ ನಮ್ಮ ಸಂಬಂಧ ಹಾಗೂ ಏಕತೆಗೆ ಗುರು ಮಾತ್ರವೇ ನಿಜವಾದ ಮೂಲವಾಗಿದ್ದಾನೆ”, ಎಂಬುದರ ಸಾಕ್ಷಾತ್ಕಾರವೇ ಗುರುವಿನ ನಿರಂತರ ಹಾಗೂ ನಿತಾಂತ ಸ್ಮರಣೆಯ ಅಭ್ಯಾಸದ ಮುಂದಿನ ಫಲಿತಾಂಶವಾಗಿದೆ. ಈ ಸಾಕ್ಷಾತ್ಕಾರವೇ ಅಭ್ಯಾಸಿಯ ಸ್ವಾರ್ಥಕೇಂದ್ರಿತವಾದ ಜಟಿಲತೆಗಳನ್ನು ತನ್ನಿಂದ ತಾನೇ ಕರಗಿಸುತ್ತದೆ ಮತ್ತು ತನ್ನನ್ನೂ ಒಳಗೊಂಡು ಎಲ್ಲರ ಆತ್ಮವೂ ಗುರುವೇ, ಎಂಬುದರ ಸಾಕ್ಷಾತ್ ಅರಿವು ಉಂಟಾಗುವುದು. ಅಂತಹ ಅಭ್ಯಾಸಿಯ ವರ್ತನೆಯು ನೈತಿಕ ತತ್ತ್ವದ ಏಕತೆಯ ಮೇಲೆ ಆಧರಿತವಾಗಿರುವುದು.
ಮುಂದುವರಿಸಿದ ಸಾಧನೆಯು ಅಭ್ಯಾಸಿಯನ್ನು, ಎಲ್ಲರೂ ಗುರು ಎಂಬ ಅರಿವಿಗೆ ಕರೆದೊಯ್ಯುವುದು. ನೀತಿ-ತತ್ತ್ವವು ಎಲ್ಲರ ವಿಷಯದಲ್ಲಿ ಪೂಜ್ಯ ಹಾಗೂ ಗೌರವ ಭಾವದ ರೂಪದಲ್ಲಿ ಅಭ್ಯಾಸಿಯ ಮೂಲಕ ವ್ಯಕ್ತಗೊಳ್ಳುವುದು. ಇದು, ಸಮರ್ಪಕ ಜ್ಞಾನಸಾಮರ್ಥ್ಯವನ್ನು ತೆರೆಯುತ್ತದೆ ಮತ್ತು ಮಾನವ-ಕುಲದ ಬೌದ್ಧಿಕ ಏಕತೆಯ ಅರಿವು ಉದಯಿಸಲು ಪ್ರಾರಂಭಿಸುವುದು, ಈ ಘಟ್ಟದಲ್ಲಿ ಅಭ್ಯಾಸಿಯ ಎಲ್ಲ ಚಟುವಟಿಕೆಗಳೂ ಗುರುವಿಗೋಸ್ಕರ ತಾನು ಮಾಡಬೇಕಾದ ಕರ್ತವ್ಯದ ರೂಪ ತಾಳುವುವು ಮತ್ತು ಅವನ ವೈಯಕ್ತಿಕತೆಯು ಕರಗಲಾರಂಭಿಸುವುದು.
ಬೇರೆ ಬೇರೆ ಆಧ್ಯಾತ್ಮಿಕ ಸ್ಥಿತಿಗಳ ಅನುಭವವು, ಅದರ ವಿಭಿನ್ನ ಸೂಕ್ಷ್ಮ ಹಂತಗಳ ಸಾಕ್ಷಾತ್ ಅನುಭೂತಿಗಳಿಗೆ ಕರೆದೊಯ್ಯುವುದು. ಅತಿ ಸಾಮಾನ್ಯ ದಿನನಿತ್ಯದ ಅನುಭವಗಳು ಸೂಕ್ಷ್ಮತೆ ಹಾಗೂ ಪರಿಶುದ್ಧತೆಗಳ ವಿಭಿನ್ನ ವರ್ಣಗಳ ರೂಪ ತಾಳುವುವು ಮತ್ತು ಅಭ್ಯಾಸಿಯನ್ನು ಅನುಭವಶಕ್ತಿಗಳ ಮೂಲಕ್ಕೆ ಅಭ್ಯಾಸಿಯನ್ನು ಕರೆದೊಯ್ಯುವುದು. ಈ ಹಂತದಲ್ಲಿ, ಅಭ್ಯಾಸಿಯ ಸ್ಥಿತಿಯು ಅವನ ಚಿಚ್ಛಕ್ತಿಯ ಸುಪ್ತ ಸಾಮರ್ಥ್ಯಗಳ ಮೇಲೆ ಅವನಿಗೆ ನಿಯಂತ್ರಣ
ಹಾಗೂ ಪ್ರಭುತ್ವವನ್ನು ನೀಡಲಾರಂಭಿಸುವುದು. ಸಮರ್ಥ ಗುರುವಿನ ಮಾರ್ಗದರ್ಶನವು ಈ ಹಂತದಲ್ಲಿ ಅಪರಿಹಾರ್ಯವಾಗುತ್ತದೆ, ಅಷ್ಟೇ ಅಲ್ಲ, ಅತ್ಯಗತ್ಯವಾಗುವುದು. ಗುರುವು ಹೇಗೆ ಮಾರ್ಗದರ್ಶನ ದಯಪಾಲಿಸುವನು ಮತ್ತು ಅಭ್ಯಾಸಿಯು ಅದನ್ನು ಹೇಗೆ ಸ್ವೀಕರಿಸುವನು ಮತ್ತು ಈ ಹಂತದಲ್ಲಿ ಹಾಗೂ ಅದರಾಚೆಗೆ ತನ್ನ ಚಿಚ್ಛಕ್ತಿಯೊಂದಿಗೆ ಅಭ್ಯಾಸಿಯು ಹೇಗೆ ಕಾರ್ಯ ನಿರ್ವಹಿಸುವನು ಮುಂತಾದ ವಿಷಯಗಳು, ಏಕತೆಯ ಸ್ಥಿತಿಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸಲಾದ ಪ್ರಸ್ತುತ ಪ್ರಬಂಧದ ವ್ಯಾಪ್ತಿಗೆ ಮೀರಿದ್ದಾಗಿವೆ.
ಸಂಗ್ರಹಿಸಿ ಹೇಳುವುದಾದರೆ, ಏಕತೆಯ ಸ್ಥಿತಿಯು ಕೆಲವು ಸಲ ಒಂದು ರೀತಿಯ ಸಾಮರಸ್ಯದ, ಇನ್ನು ಕೆಲವು ಸಲ ಒಂದು ತರಹದ ಗಾಢ ತನ್ಮಯತೆ, ಹಾಗೂ ಇನ್ನೂ ಬೇರೆ ಸಮಯಗಳಲ್ಲಿ ಸಮಗ್ರ ಅಸ್ತಿತ್ವದ ಏಕತೆಯ ಒಂದು ರೀತಿಯ ಸಾಕ್ಷಾತ್ಕಾರವೆಂಬುದನ್ನು ಧ್ವನಿಸುತ್ತದೆ ಎಂದು ಹೇಳಿದರೆ ಸಾಕು. ಒಮ್ಮೆ ಗುರುಗಳು ಹಾಸ್ಯಮಯವಾಗಿ “ನೀವು ಹತ್ತು ಕತ್ತೆಗಳ ಜೊತೆಗೆ ಸೇರಿದರೆ ಹನ್ನೊಂದನೆಯ ಕತ್ತೆಯಾಗುವಿರಿ” ಎಂದು ಹೇಳಿದ್ದರು.
ಎಲ್ಲ ಮಾನವ ಪ್ರಯತ್ನಗಳ ಗುರಿಯಾದ ಏಕತೆಯ ಸ್ಥಿತಿಯ ಸಾಕ್ಷಾತ್ಕಾರವನ್ನು ಎಲ್ಲ ಸಹಬಾಂಧವರಿಗೆ ಗುರುಗಳು ಅನುಗ್ರಹಿಸಲಿ. ಗುರುವಿನೊಂದಿಗೆ ಬೇರ್ಪಡಿಸಲಾರದಂತೆ ಜೋಡಿಸಲ್ಪಡಲು ನಮ್ಮನ್ನು ಯೋಗ್ಯರಾಗುವಂತೆ ಮಾಡುವ ಮಟ್ಟದ ಪವಿತ್ರತೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳುವಂತಾಗಲಿ.
[ಸಹಜಮಾರ್ಗ ಪತ್ರಿಕೆ, ಮೇ 1984]
ವಾಸ್ತವಿಕವಾಗಿ, ಸಾಕ್ಷಾತ್ಕಾರವೆಂದರೆ ನರಗಳು ಹಾಗೂ ಸ್ನಾಯುಗಳೊಂದಿಗೆ ಹೆಣಗಾಡುವ ಆಟವೂ ಅಲ್ಲ, ಅಥವಾ ಕಠೋರ, ದೇಹ ದಂಡನೆಯನ್ನು ಒಳಗೊಂಡ, ತಪಸ್ಸಿನ ದೈಹಿಕ ಪರಿಶ್ರಮವೂ ಅಲ್ಲ. ಅದು, ಕೇವಲ ಅಂತರಿಕ ಅಸ್ತಿತ್ವವನ್ನು ಅದರ ನೈಜ ಸ್ವರೂಪಕ್ಕೆ ಪಲವರ್ತಿಸುವುದಾಗಿದೆ.