ಅತ್ಯಂತ ಉಚಿತ ರೀತಿಯಲ್ಲಿ, ನಮ್ಮ ಗುರುಗಳನ್ನು ನೆನಪಿಸಿಕೊಳ್ಳಲು ಹಾಗೂ ಸ್ಮರಿಸಲು ಈ ಶುಭ ಸಂದರ್ಭವು ನಮಗೆ ಒದಗಿ ಬಂದಿದೆ.

ಅವರು ಪ್ರಾಣಾಹುತಿಯ ಮೂಲಕ ಯೋಗಾಭ್ಯಾಸದ ಜೀವನವನ್ನು ನಮಗೆ ಪರಿಚಯಿಸಿದ್ದಾರೆ. ಇಂದು ಇಲ್ಲಿ ಸೇರಿದ ನಮ್ಮಲ್ಲಿ ಪ್ರತಿಯೊಬ್ಬನೂ ಅವರ ಪ್ರಾಣಾಹುತಿಯ ಅನುಭವ ಹೊಂದಿರುವುದಾಗಿ ಹೇಳಿಕೊಳ್ಳುತ್ತಾನೆ. ಅದೇ ಸಮಯದಲ್ಲಿ, ನಮ್ಮಲ್ಲಿ ಪ್ರತಿಯೊಬ್ಬನಿಗೂ ತಾನು ಗುರುಗಳ ನಿರೀಕ್ಷೆಯ ಮಟ್ಟಕ್ಕೆ ಬರುವುದರ ಅಗತ್ಯತೆ ಉಂಟೆಂಬ ಸುಪ್ತ ಅರಿವಿದೆ.

ಗುರುಗಳು ನಮಗೆ ಧ್ಯಾನ, ಶುದ್ಧಿಕರಣ ಹಾಗೂ ಪ್ರಾರ್ಥನೆಯ ಪದ್ಧತಿಯನ್ನು ಕೊಟ್ಟಿದ್ದಾರೆ. ಅದೇ ಕಾಲಕ್ಕೆ ನಮಗೆ ಹತ್ತು ನಿಯಮಗಳನ್ನೂ ಆದೇಶಿಸಿದ್ದಾರೆ. ನಾವು ಪೂಜೆ ಮಾಡುತ್ತಿದ್ದೇವೆ ಮತ್ತು ಅದರ ಬಗ್ಗೆ ಸಂತುಷ್ಟರಾಗಿದ್ದೇವೆ. ಆದರೆ ಬಹಳಷ್ಟು ಸಲ ಹತ್ತು ನಿಯಮಗಳನ್ನು ಮರೆತುಬಿಡುತ್ತೇವೆ, ಮತ್ತು ನಮ್ಮೊಳಗೇ ದುಃಖಿತರಾಗುತ್ತೇವೆ. ಅದು ಹಾಗಾಗಲಿಕ್ಕೆ ಬೇಕು; ಏಕೆಂದರೆ ನಮ್ಮ ದೃಷ್ಟಿಯ ದೈವಿಕತೆಯ ಮೇಲೆ ನೆಲೆಸಿದೆಯೇ ಹೊರತು ಸ್ವಾರ್ಥದ ಮೇಲಲ್ಲ; ಅನಂತತೆಯ ಮೇಲೆಯೇ ಹೊರತು, ನಮ್ಮ ಸೀಮಿತ ಅಹಂಕಾರದ ಮೇಲಲ್ಲ.

ನಮ್ಮ ಸ್ವಂತ ಮನೆಗಳನ್ನು ಕಾಪಾಡಿಕೊಂಡು ಹೋಗುವಂತೆ ಈ ಸಂಸ್ಥೆಯನ್ನೂ (ಮಿಷನ್) ನಮ್ಮ ಸ್ವಂತದ್ದೇ ಸಂಸ್ಥೆಯಂತೆ ಪರಿಗಣಿಸಬೇಕೆಂದು ನಮಗೆ ನಮ್ಮ ಗುರುಗಳು ಉಪದೇಶಿಸಿದ್ದಾರೆ. ವಾಸ್ತವವಾಗಿ, ಎಲ್ಲರನ್ನೂ ನಮ್ಮವರೆಂದು ಪರಿಗಣಿಸಿ ಪ್ರತಿಯೊಬ್ಬರಿಗೂ ಅವರವರ ಪಾಲನ್ನು ನೀಡಬೇಕೆಂದೂ ಅಪೇಕ್ಷಿಸಲಾಗಿದೆ. ಹಿರಿಯರಿಗೆ ಮರ್ಯಾದೆ, ನಮ್ಮ ಯುವಕರಿಗೆ ಸಹಾನುಭೂತಿ ನಮ್ಮ ಸಮಾನರಿಗೆ ಸ್ನೇಹ, ಇವೆಲ್ಲ ಶುದ್ಧ ಪ್ರೇಮದ ಸರಿಯಾದ ಪ್ರಕಟ ರೂಪಗಳು; ಇವು ಯೋಗದ ಫಲಸ್ವರೂಪವಾಗಿ ಬೆಳೆದು ಬರಬೇಕು. ನಮ್ಮಲ್ಲಿ ಶುದ್ಧ ಪ್ರೇಮ ಬೆಳೆದಿಲ್ಲ ಎಂದಾದರೆ, ನಮ್ಮ ಅತ್ಯಂತ ಆದರಣೀಯ ಮತ್ತು ಪ್ರಿಯರಾದ ನಮ್ಮ ಗುರುಗಳೊಂದಿಗೆ ನಮ್ಮ ಸಂಬಂಧದಲ್ಲಿ ಗಂಭೀರ ಲೋಪವಿದೆ ಎಂದು ನನ್ನ ನಂಬಿಕೆ. ಗುರುಗಳ ಹಾಗೂ ಕೇವಲ ಗುರುಗಳ ಚಿಂತನೆಯಿಂದಾಗಿಯೇ ನಾವೆಲ್ಲರೂ ಒಂದಾಗಿ ಜೋಡಿಸಲ್ಪಟ್ಟಿದ್ದೇವೆ ಎಂಬುದನ್ನು ನಾವು ಶೀಘ್ರವಾಗಿ ಮನಗಾಣಬೇಕು.

ಸಹಜಮಾರ್ಗದ ಪ್ರಭಾವದ ಅಡಿಯಲ್ಲಿ ಮಾನವ ಕುಲದ ಭವಿಷ್ಯದ ಬಗ್ಗೆ ನಮ್ಮ ಗುರುಗಳ ಆಶಯವನ್ನು ಅವರ ಅತ್ಯಂತ ಚಿಕ್ಕದಾದ ಒಂದು ಸಂದೇಶದ ಈ ಕೆಳಗಿನ ಶಬ್ದಗಳ ಮೇಲೆ ಚಿಂತನ ಮಾಡುವ ಮೂಲಕ ಸ್ಪಷ್ಟವಾಗಿ ಗ್ರಹಿಸಬಹುದು – “ಪವಿತ್ರತೆಯೊಂದೇ ಆತನ (ಪರಮಾತ್ಮನ) ಎಲ್ಲ ಕಾರ್ಯಗಳಲ್ಲಿ ಹಾಗೂ ಪರಿಸರದಲ್ಲಿ ಉಳಿಯುವುದು. ಅದುವೇ ಅಂತಿಮ ಸತ್ಯದೊಂದಿಗೆ ಜನರ ಆಧ್ಯಾತ್ಮಿಕ ಅದೃಷ್ಟವನ್ನು ಹೆಣೆಯುವುದು”. ಸಾಮಾನ್ಯವಾಗಿ ಸ್ವಾರ್ಥಪರತೆ, ಮದ, ಮತ್ಸರ ಮುಂತಾದವುಗಳಿಂದ ಉದ್ಭವಿಸುವ ಎಲ್ಲ ಸ್ಥೂಲತೆ, ಅಂಧಕಾರ ಹಾಗೂ ಜಟಿಲತೆಗಳಿಂದ ಬಿಡುಗಡೆಗೊಂಡು, ನಾವು ನಮ್ಮ ಹೃದಯವನ್ನು ಸಂಪೂರ್ಣವಾಗಿ ಶುದ್ಧಗೊಳಿಸಿದರೆ, ನಿಸರ್ಗದ ಪ್ರವೃತ್ತಿಗೆ ಅನುಗುಣವಾಗಿ ನಾವು ನಮ್ಮನ್ನು ರೂಪಿಸಿಕೊಳ್ಳಬಹುದು ಹಾಗೂ ಗುರುಗಳು ಯೋಜಿಸಿದಂತೆ ನಮ್ಮದೇ ಆಧ್ಯಾತ್ಮಿಕ ವಿಕಾಸವು ಶೀಘ್ರವಾಗಿ ಸಿದ್ಧಿಸುವಂತೆ ಮಾಡಿಕೊಳ್ಳಬಹುದು.

ನಮ್ಮ ಗುರುಗಳ ಚಿಂತನೆಯಲ್ಲಿ ಕೇವಲ ಒಂದೆಡೆಯಲ್ಲಿ ಸೇರುವುದೇ ಅದರಲ್ಲಿ ಭಾಗಿಗಳಾದವರಿಗೆ ಮಾತ್ರವಲ್ಲದೆ ಸಮಸ್ತ ಮಾನವ ಕುಲಕ್ಕೆ ಕೂಡ ಆಧ್ಯಾತ್ಮಿಕ ಲಾಭವನ್ನುಂಟುಮಾಡುವುದು. ಇದಕ್ಕೆ ವ್ಯತಿರಿಕ್ತವಾಗಿ ಯಾವುದೇ ಕೆಳಮಟ್ಟದ ಅಥವಾ ಸ್ಥೂಲ ಉದ್ದೇಶ ಅಥವಾ ಗುರಿಯ ಮೇಲೆ ಈ ಸಮಾರಂಭವು ಆಧರಿಸಿದ್ದಾದರೆ ಅದು ಗುಂಪುಗಾರಿಕೆ, ಸ್ಥೂಲತೆಯ ಸಂಚಯ ಮತ್ತು ಪೂರ್ವಗ್ರಹದ ಬೆಳವಣಿಗೆಯಲ್ಲಿ ಪರಿಣಮಿಸಿ ತನ್ನ ಉದ್ದೇಶ ಮತ್ತು ಧ್ಯೇಯಗಳನ್ನೇ ಕೆಡಿಸಿ, ಆ ಮೂಲಕ ಸ್ವಯಂಘಾತಕವಾಗುವುದು. ಆದುದರಿಂದ ಪ್ರಿಯ ಸೋದರ ಸೋದರಿಯರೆ, ಈ ಸಮಾರಂಭದ ಸಂಪೂರ್ಣ ಅವಧಿಯಲ್ಲಿ ನಮ್ಮ ಗುರುಗಳ ಚಿಂತನೆಯಲ್ಲಿ ಮುಳುಗಿರಲು ನಾವೆಲ್ಲರೂ ಪ್ರಯತ್ನಿಸೋಣ ಮತ್ತು ನಮ್ಮ ಪ್ರಿಯ ಗುರುಗಳ ಆದರ್ಶಕ್ಕೆ ಅನುರೂಪವಾಗಿ ನಮ್ಮನ್ನು ಮತ್ತು ನಮ್ಮ ಜೀವನವನ್ನು ರೂಪಿಸಿಕೊಳ್ಳುವ ಸಂಕಲ್ಪ ಮಾಡೋಣ.

ನಮ್ಮ ಗುರುಗಳ ಅಪಾರ ಪ್ರೇಮ ಹಾಗೂ ಪರಿಶ್ರಮದಿಂದ ನಿರ್ಮಿತವಾದ ಈ ಬೃಹತ್ ಮಂದಿರವನ್ನು ಸಂರಕ್ಷಿಸಿಕೊಂಡು ಹೋಗಲು ನಮ್ಮಲ್ಲಿ ಪ್ರತಿಯೊಬ್ಬನೂ ಕರ್ತವ್ಯ ಬದ್ಧರಾಗಿದ್ದಾನೆ ಮತ್ತು ಹಾಗಿರುವುದರ ಅನುಭೂತಿ ಹೊಂದಬೇಕೆಂಬ ವಿಷಯವನ್ನು ಒತ್ತಿ ಹೇಳಲು ನಾನು ಈ ಅವಕಾಶವನ್ನು ಮತ್ತೊಮ್ಮೆ ಬಳಸಿಕೊಳ್ಳಲು ಬಯಸುತ್ತೇನೆ. ಏಕೆಂದರೆ, ಇದು ಸಹಜಮಾರ್ಗದ ಜನ್ಮಸ್ಥಳ ಮತ್ತು ಈ ಅತ್ಯಂತ ಮಹತ್ತ್ವದ ವಿಶ್ವವ್ಯಾಪಿಯಾದ ಆಧ್ಯಾತ್ಮಿಕ ಸಂಸ್ಥೆಯ ಕೇಂದ್ರ ಕಾರ್ಯಸ್ಥಾನವೂ ಆಗಿದೆಯೆಂಬುದರಿಂದಾಗಿ, ಇದು ಇನ್ನೂ ಹೆಚ್ಚು ಪ್ರಸ್ತುತವಾಗಿದೆ. ಈ ಉದ್ದೇಶಕ್ಕಾಗಿಯೇ ಶ್ರೀರಾಮಚಂದ್ರ ಸಮಾರಂಭ ಆಚರಣಾ ಸಮಿತಿಯನ್ನು ರಚಿಸಲಾಗಿದೆ. ಆದುದರಿಂದ ನಮ್ಮ ಪರಮ ಪ್ರಿಯ ಗುರುಗಳ ಸ್ಮರಣೆಯಲ್ಲಿ ಆಗಾಗ ನಾವೆಲ್ಲರೂ ಇಲ್ಲಿ ಸೇರುವಂತಾಗಲು, ಹಾಗೂ ಅವರ ಅಸಂದಿಗ್ಧ ಹಾಗೂ ಅಧಿಕೃತ ಬರವಣಿಗೆಗಳಲ್ಲಿ ಮತ್ತು ಪ್ರಕಟಣೆಗಳಲ್ಲಿ ನಮಗೆ ನೀಡಲಾದ ಅವರ ಕಾರ್ಯ ಯೋಜನೆಗಳನ್ನು ನಿರ್ವಹಿಸಲು ಎಲ್ಲ ಸಮಾನ ಮನಸ್ಕರಾದ ಜನರು ಈ ಸಮಿತಿಗೆ ಸಹಾಯ ಹಾಗೂ ಸಹಕಾರ ನೀಡಬೇಕು.

[ಪೂಜ್ಯ ಗುರುಗಳ 86ನೆಯ ಹುಟ್ಟುಹಬ್ಬದ ಶುಭ ಸಂದರ್ಭ
ಎಪ್ರಿಲ್ 30, 1985 ರಂದು ಪ್ರಸ್ತುತ ಪಡಿಸಿದ ಲೇಖನ]