ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್ | ತತ್ ತ್ವಂ ಪೂಷನ್ ಅಪಾವೃಣು ಸತ್ಯಧರ್ಮಾಯ ದೃಷ್ಟಯೇ ॥
[ಈಶಾವಾಸ್ಯ ಉಪನಿಷತ್]
ಪ್ರಾಚೀನ ಋಷಿಗಳು ನೋವಿನ ಅಂತಿಮ ಕಾರಣ ಒಂದು ಅವರಣ -ಅವಿದ್ಯೆಯ ಆವರಣ ಎಂದು ಘೋಷಿಸಿದರು. ವ್ಯಕ್ತಿಯು ತನ್ನನ್ನು ಇತರರಿಗಿಂತ ವಿಭಿನ್ನ ಎಂದು ತಿಳಿಯುತ್ತಾನೆ. ಈ ಪ್ರತ್ಯೇಕತೆ ಅಥವಾ ವಿಭಿನ್ನತೆಯ ಭಾವದ ಮೂಲವು ಈ ಮೇಲೆ ಹೇಳಿದ ಆವರಣವೇ ಆಗಿದೆ. ಇದರಿಂದಾಗಿ ಏಕತ್ವದ ನಿಜವಾದ ಮೌಲ್ಯ ಕಣ್ಮರೆಯಾಗಿದೆ. ಮತ್ತು ಮಿಥ್ಯಾ ಮೌಲ್ಯಗಳು ಅದರ ಸ್ಥಾನವನ್ನು ಆಕ್ರಮಿಸಿ, ತತ್ಪರಿಣಾಮವಾಗಿ ಇಷ್ಟ-ಅನಿಷ್ಟ; ಸುಖ-ದುಃಖ ಮತ್ತು ಅಂತಹುದೇ ದ್ವಂದ್ವಗಳನ್ನು ಉಂಟುಮಾಡಿವೆ.
ನೋವಿನ ಸತ್ಯತೆಯನ್ನೇ ಅಲ್ಲಗಳೆಯಲು ಮಹಾ ಧೈರ್ಯ ಬೇಕು. ನೋವು (ದುಃಖ) ಮಾತ್ರವೇ ಅತ್ಯಂತ ಸತ್ಯವಾದುದೆಂದು ತೋರುತ್ತದೆ. ಅದರ ನಿರಾಕರಣೆ ಮಾಡುವುದೆಂದರೆ ಇನ್ನೊಂದು ಮಿಥ್ಯತೆಯನ್ನು ಪೂರ್ವಾನುಮಾನವಾಗಿ ಊಹಿಸಿಕೊಂಡಂತಾಯಿತು. “ನೋವು ಎನ್ನುವುದು ಆನಂದಸಾಗರದ ರಭಸದ ಹಿನ್ನೀರು” ಎಂದು ಹೇಳಿದ ‘ಮಹಾಯೋಗಿ’ಯು ಧನ್ಯನಾಗಿರಲಿ. ‘ಆನಂದ’ವೇ ಏಕಮೇವ ಅಸ್ತಿತ್ವ ಎಂದಾಗ, ಮತ್ತು ಅದರ ಶಾಶ್ವತ ಪ್ರಜ್ಞೆ (Consciousness) ಮಾತ್ರವೇ ಏಕೈಕ ‘ಪುರುಷಾರ್ಥ’ ಅಥವಾ ಏಕಮೇವ ಗುರಿ ಮತ್ತು ಪರಿಪೂರ್ಣತೆ ಎಂದಾಗ, ನೋವನ್ನು ‘ಆನಂದ’ದ ಒಂದು ವಿಕೃತಿಯೆಂದೇ ಪರಿಗಣಿಸಬೇಕಾಗುತ್ತದೆ. ಒಂದು ವೇಳೆ ನಮ್ಮ ಪ್ರಜ್ಞೆಯು ನಮ್ಮ (ಈ) ಕಲ್ಪನೆಯ ಆಜ್ಞಾನುವರ್ತಿಯಾಗಿದ್ದರೆ ಅದು (ಈ) ಆವರಣವನ್ನು ಹರಿದು ಹಾಕಬಹುದಿತ್ತು.
ದುರದೃಷ್ಟದಿಂದ, ಈ ಆವರಣವೇ ನಮ್ಮ ಇಚ್ಛಾನುವರ್ತಿ ಆಲೋಚನೆಗೆ ಕಾರಣವಾಗಿದೆ. ಮತ್ತು ಅದು ನಮ್ಮ ಪ್ರಜ್ಞೆಗೆ ಮೀರಿದ್ದಾಗಿದೆ. ಅತಿಮಾನಸ ಪ್ರಜ್ಞೆಗೆ ಈ ಆವರಣದ ಗ್ರಹಿಕೆ ಇರಬಲ್ಲುದೆಂದುವಾದಿಸಬಹುದು. ಆದರೆ ನಮ್ಮ ಪಾಲಿಗೆ, ಅತಿಮಾನಸ ಅಸ್ತಿತ್ವವನ್ನು ಗ್ರಹಿಸುವುದರಲ್ಲಿ ಅತಿಮಾನಸ ಆನಂದ (ಸಂತೋಷ) ವನ್ನು ಅನುಭವಿಸುವ ಅತಿಮಾನಸ ಪ್ರಜ್ಞೆ ಎಂದರೆ, ಹೆಚ್ಚಿನ ಕೆಲವು ಕೈಗಳು, ತಲೆಗಳು ಹಾಗೂ ದೊಡ್ಡ ಹೊಟ್ಟೆಗಳುಳ್ಳ ದೇವರುಗಳು ಎಂಬುದಕ್ಕಿಂತ ಹೆಚ್ಚಿನ ಅರ್ಥವನ್ನೇನೂ ಅದು ಹೊಂದಿಲ್ಲ. ಅಲೌಕಿಕವಾದರೂ ಭೌತಿಕಕ್ಕೆ ಸಮಾನಾಂತರ ಅಥವಾ ಸದೃಶವಾದ, ಅಭೌತಿಕವಾದುದೊಂದೇ ‘ಸತ್ಯ’ ಎಂಬುದಾಗಿದ್ದರೆ, ಇವೆರಡನ್ನೂ ಒಳಗೊಂಡಿರುವ ಮತ್ತೊಂದು ಪೂರ್ಣತೆಯ ಕಲ್ಪನೆ ಮಾಡುವುದು ಎಂದರೆ ಇನ್ನೂ ಹೆಚ್ಚಿನ ಕ್ಲಿಷ್ಟತೆಯನ್ನುಂಟುಮಾಡುವ ಇನ್ನೊಂದು ಅಗತ್ಯತೆಯಾಗುತ್ತದೆ. ಈ ಸಮಗ್ರ ಪೂರ್ಣವು, ಸರ್ವಾಂತರ್ಯಾಮಿತ್ವದ ಇನ್ನೊಂದು ಗುಣದಿಂದ ಕೂಡಿಕೊಂಡು ಒಬ್ಬನನ್ನು ಹುಚ್ಚನನ್ನಾಗಿಸಲು ಸಾಲದಿದ್ದರೆ, ದಿಗ್ದಮೆಗೊಳಿಸಲು, ‘ಅನಂತತೆ’ಯನ್ನು ಸೇರಿಸಿರಿ. ಮತ್ತು ಅಂತಿಮವಾಗಿ ಆಡಂಬರಕ್ಕಾಗಿ ಅದನ್ನು ‘ಅನಿರ್ವಚನೀಯ’ವೆಂದು ಕರೆಯಿರಿ.
ಇದು ನಿಜಕ್ಕೂ ಇಷ್ಟೊಂದು ಕ್ಲಿಷ್ಟವಾಗಿದೆಯೇ? ಎಂದು ಒಬ್ಬನು ಚಕಿತಗೊಳ್ಳಲಾರಂಭಿಸುತ್ತಾನೆ. ವಿಶ್ವದ ಬಗ್ಗೆ ಎಲ್ಲ ಪಂಡಿತರ ವಿವರಣೆಗಳನ್ನಾಲಿಸಿದ ನಂತರ – “ದೇವರು ಒಂದು ವೇಳೆ ನನ್ನನ್ನು ಕೇಳಿದ್ದರೆ, ನಾನು ಒಂದು ಅತಿ ಸರಳ ಯೋಜನೆ (ನಕ್ಷೆ) ಯನ್ನು ಕೊಡುತ್ತಿದ್ದೆನೇನೋ !” – ಎಂದು ಈ ಕತೆಯಲ್ಲಿ ಬರುವ ಅರಸನು ಉದ್ಧರಿಸಿದರೆ ಅದರಲ್ಲಿ ನಿಜಕ್ಕೂ ಒಂದಿಷ್ಟು ಅರ್ಥವಿದೆ. ಇಲ್ಲೊಂದು ಸಂದಿಗ್ಧತೆ ಉಂಟು. ಅಂತಿಮ ಸತ್ಯವು ಬಹಳ ಸರಳವಾಗಿರುತ್ತದೆ ಎಂದು ಮನುಷ್ಯನು ತನ್ನ ಸಹಜ ಅಂತಃಸ್ಪುರಣದಿಂದಲೇ ಭಾವಿಸುತ್ತಾನೆ. ಆದರೂ, ಪ್ರತಿಯೊಂದು ಹೊಸ ಶೋಧವಾದಾಗ, ಹಾಗೆ ಶೋಧಿತವಾದ ಸಂಗತಿಯನ್ನು ವಿವರಿಸಲು ಇನ್ನೂ ಹೆಚ್ಚು ಜಟಿಲವಾದ ಸಿದ್ಧಾಂತವನ್ನು ಕಲ್ಪಿಸಲು ವಿವಶನಾಗುತ್ತಾನೆ. ಈ ರೀತಿಯಾಗಿ ವಿಜ್ಞಾನದ ಆಧುನಿಕ ಸಿದ್ಧಾಂತಗಳು ಪುರಾತನ ರಸವಾದಿ ಸಿದ್ದಾಂತಗಳಿಗಿಂತಲೂ ಕಡಿಮೆ ದಿಗ್ಧಮೆಗೊಳಿಸುವುವಾಗಿಲ್ಲ. ಸಾಪೇಕ್ಷತಾ ಸಿದ್ಧಾಂತವು ಅಗ್ನಿಮೂಲ (Flogiston) ಸಿದ್ಧಾಂತದಷ್ಟೇ ನಂಬಲರ್ಹವಾದದ್ದು. [Flogiston theory – ಯಾವುದೇ ದಹನಶೀಲ ವಸ್ತುವಿನಲ್ಲಿ ಒಳಗೊಂಡಿದ್ದು ದಹನವಾಗುವಾಗ ಉಷ್ಣವಾಗಿ (ಅಗ್ನಿಯಾಗಿ) ಹೊರಹೊಮ್ಮುವುದು ಎಂಬ ಸಿದ್ಧಾಂತ. ಈ ಸಿದ್ದಾಂತ ಈಗ ಅಲ್ಲಗಳೆಯಲ್ಪಟ್ಟಿದೆ]. ಯಾವುದೇ ಗ್ರಹೀತ ನಿರ್ಣಾಯಕ ಆಧಾರವು, ಅವಲೋಕಿಸಲಾದ ದೃಶ್ಯ/ ಘಟನೆಗಳನ್ನು (phenomena) ವಿವರಿಸಲು ಮತ್ತು ಅದರ ಉಪಯುಕ್ತತೆಯನ್ನು ವಿವರಿಸಲು ಸಮರ್ಥವಿದ್ದರೆ, ಅದು ಒಂದು ಸಿದ್ಧಾಂತದ ಸತ್ಯತೆಯ ಪ್ರಮಾಣವಾಗುವುದೆಂದಾದರೆ, ಇದುವರೆಗೆ ಪ್ರತಿಪಾದಿಸಲಾದ ಯಾವ ಸಿದ್ದಾಂತವೂ ತೃಪ್ತಿಕರವಲ್ಲವೆಂದೆನಿಸುವುದು. ಪರಿಶೀಲಿಸಲಾದ ದತ್ತಾಂಶಗಳ(data)ನ್ನು ಆಧರಿಸಿ ಅಂತಿಮ ಸತ್ಯವನ್ನು ಸೂತ್ರೀಕರಿಸಲು ಪ್ರಯತ್ನಿಸುವ ಮನೋಭಾವವು, ತಾನೇ ಒಂದು ಬಾಧಕವಾಗುವುದು ಹಾಗೂ ಅವಿದ್ಯೆಯ ಆವರಣವನ್ನು ಮತ್ತೂ ದಟ್ಟಗೊಳಿಸುವುದು. ಅದು ಕುದುರೆಯ ಮುಂದೆ ಬಂಡಿಯನ್ನು ಇಟ್ಟಂತೆ ಆಗುವುದು.
ವಿಜ್ಞಾನಿಯು ಹೊಸ ಶಕ್ತಿಮೂಲಗಳನ್ನು ಕಂಡು ಹಿಡಿಯುವುದರಲ್ಲಿ ಆಸಕ್ತನಾಗಿದ್ದರೆ, ಯೋಗಿಯೂ ಕೂಡ ನಿಸರ್ಗದ ಶಕ್ತಿಯ ಮೇಲೆ ಪ್ರಭುತ್ವ ಹೊಂದಲು ಅಷ್ಟೇ ಆಸಕ್ತನಾಗಿದ್ದಾನೆ. ಆದರೆ ತನ್ನ ಸಂಶೋಧನೆಗಳನ್ನು ನಡೆಸಲು ಯಾರ ಸಹಾಯವು ಅತ್ಯಾವಶ್ಯಕವಾಗಿರುವುದೋ ಅಂತಹ ಅವೈಜ್ಞಾನಿಕನಾದ ಹಾಗೂ ಅನೇಕ ಸಾರೆ ಅಜ್ಞಾನಿಯಾದ ತನ್ನ ಒಡೆಯನ ಅಗತ್ಯಗಳಿಗೆ ತಕ್ಕಂತೆ ಹೊಂದಿಕೊಳ್ಳಲು ವಿಜ್ಞಾನಿಯು ವಿವಶನಾಗುತ್ತಾನೆ. ಉದಾಹರಣೆಗೆ, ಒಬ್ಬ ವಿಜ್ಞಾನಿಯು ಕಾಲವನ್ನು ಶಕ್ತಿಯಾಗಿ ಪರಿವರ್ತಿಸಬಹುದು ಎಂಬುದನ್ನು ಕಂಡುಹಿಡಿದನೆಂದರೆ ಮತ್ತು ಅವನಿಗೆ ಕೆಲಸ ಕೊಟ್ಟ ಯಜಮಾನನ ಕಲ್ಪನೆಗಳಿಗೆ ಹಾಗೂ ಭ್ರಮಾತ್ಮಕ ಅಭಿರುಚಿಗೆ ಅದು ವಿರುದ್ಧವಾಗಿದ್ದರೆ, ಆ ವಿಜ್ಞಾನಿಯು ಕೆಲಸ ಕಳೆದುಕೊಂಡು, ಕಾಲಕ್ಕೆ ತುತ್ತಾಗುತ್ತಾನೆ.
ಇದಕ್ಕೆ ವ್ಯತಿರಿಕ್ತವಾಗಿ, ಒಬ್ಬ ಯೋಗಿಯು ಪೂರ್ಣ ಸ್ವತಂತ್ರನಾಗಿದ್ದಾನೆ, ಹಾಗೂ ತನ್ನ ಮನಸ್ಸಿಗೆ ಒಪ್ಪುವಂತೆ ತನ್ನ ಸಂಶೋಧನೆಯನ್ನು ನಡೆಸುತ್ತಾನೆ. ಆದರೆ ಅವನ ಸಂದರ್ಭದಲ್ಲಿಯೂ ಬೇರೆ ಬಗೆಯ ಅಪಾಯಗಳುಂಟು, ಅವು ಇನ್ನೂ ಗಂಭೀರವಾಗಿವೆ. ಉದಾಹರಣೆಗೆ ಒಂದು ವೇಳೆ ಒಬ್ಬ ಯೋಗಿಯು ‘ಕಾಲ’ದ ಶಕ್ತಿಯ ಮೇಲೆ ಪ್ರಭುತ್ವವನ್ನು ಪಡೆದರೆ ಮತ್ತು ಅದನ್ನು ತನ್ನ ಭೌತಿಕ ಶರೀರದಲ್ಲಿ ಜೀವವನ್ನು ಸಾವಿರಾರು ವರ್ಷಗಳವರೆಗೆ ಕಾಯ್ದಿಟ್ಟುಕೊಳ್ಳಲು ಉಪಯೋಗಿಸಿದರೆ, ಅವನು ಒಂದು ಗ್ರಾನೈಟ್ ಬಂಡೆ ಅಥವಾ ಒಂದು ಆಲದ ಮರಕ್ಕಿಂತ ಹೆಚ್ಚೇನೂ ಉತ್ತಮನಾಗಲಾರ. ಆದ್ದರಿಂದ ಸಿದ್ಧಿಗಳನ್ನು ಪಡೆಯುವ ವಿಷಯದಲ್ಲಿ ಮತ್ತು ಈ ಅವಿದ್ಯೆಯ ತೆರೆಯು ಪ್ರತಿಕ್ರಿಯಾತ್ಮಕ ಆಘಾತವನ್ನು ಉಂಟುಮಾಡಲು ಸನ್ನದ್ಧವಾಗಿರುತ್ತದೆ. ಆದ ಕಾರಣ, ಒಬ್ಬನು, ಒಂದೋ, ಈ ಅವಿದ್ಯೆಯ ತೆರೆಯನ್ನು ಹರಿದು ಹಾಕಬೇಕು, ಅಥವಾ ಪ್ರಕೃತಿಯ ಶಕ್ತಿಗಳ ಮೇಲೆ ಪ್ರಭುತ್ವ ಸಂಪಾದಿಸಲು ಹಾಗೂ ಯೋಗ್ಯ ರೀತಿಯಲ್ಲಿ ಉಪಯೋಗಿಸಲು ಪ್ರಕೃತಿಯೊಂದಿಗೆ ಪೂರ್ಣ ಅನುರೂಪವಾಗಿ ತನ್ನನ್ನು ತಾನು ರೂಪಿಸಿಕೊಳ್ಳಬೇಕು.
ಒಬ್ಬ ವ್ಯಕ್ತಿಯ ಪೂರ್ಣ ಸ್ವಾತಂತ್ರ್ಯವು, ವ್ಯಕ್ತಿಗಳಿಂದಾದ ಸಮಾಜದ ಕಲ್ಯಾಣಕ್ಕಿಂತಲೂ ಆವಶ್ಯಕವೋ ಅಥವಾ ಹೆಚ್ಚು ಮಹತ್ತ್ವದ್ದೋ ಎಂಬ ಪ್ರಶ್ನೆಯ ಬಗ್ಗೆ ದೊಡ್ಡ ವಿವಾದವುಂಟು. ಒಂದು ವೇಳೆ ಎಲ್ಲ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಿದ್ಧಾಂತಗಳು ಒಂದು ಆದರ್ಶ ಸಮಾಜವನ್ನು ನಿರ್ಮಿಸುವ ಗುರಿ ಹೊಂದಿದ್ದರೆ, ಒಂದು ಕಲ್ಯಾಣಕಾರಿ ಸಮಾಜದಲ್ಲಿ, ಎಲ್ಲ ಶುದ್ಧ ವಿಜ್ಞಾನಗಳಿಗೂ ಒಬ್ಬ ಪರಿಪೂರ್ಣ ವಿಜ್ಞಾನಿಯ ಅಗತ್ಯತೆಯಿದೆ. ಯೋಗ ಹಾಗೂ ಗೂಢ ಅಧ್ಯಾತ್ಮಪಂಥಗಳು ‘ವ್ಯಕ್ತಿ’ಯನ್ನು ಪರಿಪೂರ್ಣನನ್ನಾಗಿ ಮಾಡುವ ಗುರಿ ಹೊಂದಿವೆ. ಪರಿಪೂರ್ಣ ಸಮಾಜ ಎಂಬುದರ ಅರ್ಥವು ಪರಿಪೂರ್ಣ ವ್ಯಕ್ತಿಗಳ ಸಮುದಾಯ ಎಂದಾದರೆ, ಸಮಾಜ ವಿಜ್ಞಾನಿಗಳ, ರಾಜಕಾರಣಿಗಳ, ಅರ್ಥಶಾಸ್ತ್ರಜ್ಞರ, ವಿಜ್ಞಾನಿಗಳ ಹಾಗೂ ತತ್ತ್ವಶಾಸ್ತ್ರಜ್ಞರ ಕನಸುಗಳನ್ನು ಸಾಕಾರಗೊಳಿಸಲು ಯೋಗ ಮತ್ತು ಗೂಢ ಅಧ್ಯಾತ್ಮ ವಿದ್ಯೆಗಳೇ (Mysticism) ಏಕೈಕ ಮಾರ್ಗವೆಂದು ತೋರುತ್ತದೆ. ಆದರೆ ಆದರ್ಶ ಎಂಬುದು ಎಷ್ಟೆಂದರೂ ಒಂದು ಆದರ್ಶ ಮಾತ್ರ ಹಾಗೂ ಸತ್ಯವು ಅನೇಕ ಸಾರೆ ನಮ್ಮ ಇಚ್ಛೆಗಳಿಗೆ ಅನುರೂಪವಾಗಿರುವುದಿಲ್ಲ. ಮರಣ ಹಾಗೂ ರೋಗಗಳು ಸೃಷ್ಟಿ ಮತ್ತು ಸ್ಥಿತಿಗಳಷ್ಟೇ ಅಲ್ಲ, ಅವುಗಳಿಗಿಂತ ಹೆಚ್ಚು ಕಠೋರ ಸತ್ಯಗಳಾಗಿವೆ. ಸತ್ಯದ ಮಾನಸಿಕ ಪ್ರಕ್ಷೇಪವು ಅವಿದ್ಯೆಯ ಮೂಲಭೂತ ಘಟಕಾಂಶವಾಗಿದೆ; ಅದು ಅಂತಿಮ ತತ್ತ್ವವನ್ನು ಹೊಂದುವ ಮನುಷ್ಯನ ಅಂತಃಪ್ರೇರಣೆಯನ್ನು ಕುಂಠಿತಗೊಳಿಸುತ್ತದೆ.
ಮನುಷ್ಯನ ಚಿಂತನ ಶಕ್ತಿಯ ವಿಕಾಸದ ವಿಭಿನ್ನ ಮಟ್ಟಗಳ ವರ್ಣನೆಗಳಲ್ಲಿ ಈ ಅವಿದ್ಯೆಯ ಆವರಣವನ್ನು ಗ್ರಹಿಸಿಕೊಳ್ಳಲಾಗಿದೆ. ಮಾನವನಲ್ಲಿಯ ದೈವೀ ಕಿರಣವು ತನ್ನ ದಾರಿ ತಪ್ಪಿಸಿಕೊಂಡಿತು ಮತ್ತು ಸ್ಥೂಲವಾದ ಭೌತ ವಸ್ತುವಿನ ಜಟಿಲತೆಯ ಅಂಧಕಾರದಲ್ಲಿ ಸಿಕ್ಕಿಹಾಕಿಕೊಂಡಿತೆಂದು ಊಹಿಸಲಾಗಿದೆ. ಅವಿದ್ಯೆಯ ಆವರಣ ಎಂಬ ಹೆಸರಿಗೆ ಪ್ರಥಮತಃ ಬಲಿಯಾದವುಗಳೆಂದರೆ ರಕ್ತ-ಮಾಂಸಗಳೇ. ತರುವಾಯ ಬಂದವುಗಳೆಂದರೆ, ಆಲೋಚನೆಗಳು, ಕಲ್ಪನೆಗಳು, ಇಚ್ಛೆಗಳು ಮತ್ತು ತೃಷ್ಣಗಳನ್ನೊಳಗೊಂಡ ಸೂಕ್ಷ್ಮ ಶರೀರಗಳು ಸಂತರು ಈ ಅಡೆ-ತಡೆಗಳನ್ನು ದಾಟಿದಾಗ, ಅವಿದ್ಯೆಯ ಆವರಣದ ಬೆಳವಣಿಗೆಯಲ್ಲಿ ಮೂಲ ಘಟಕವಾದ ಅಹಂಕಾರವೊಂದೇ ಆವರಣವಾಗಿದ್ದುದನ್ನು ಅವರು ಕಂಡುಕೊಂಡರು; ಹಾಗೂ, ಯಾವಾಗ ಅವಿದ್ಯಾವರಣದಲ್ಲಿಯ ಅಹಂಕಾರವನ್ನು ತೊಳೆದು ಹಾಕಿದ್ದಾದರೆ ಕೇವಲ ‘ಆವರಣ’ ಉಳಿಯಿತು ಎಂದು ಅವರು ಆಲೋಚಿಸಿದರು. ಮನುಷ್ಯನಿಗೆ, ಅವನು ಶರೀರದಲ್ಲಿರುವವರೆಗೆ ಮುಂದಿನ ದಾರಿ ಲಭ್ಯವಿಲ್ಲವೆಂದೂ ಅವರು ತಿಳಿದರು. ಅಲ್ಲದೆ, ಈ ಹಂತದಲ್ಲಿ ಯೋಗ ಮತ್ತು ಗೂಢ ಅಧ್ಯಾತ್ಮ (ಅನುಭಾವ) ವಿದ್ಯೆ ಕೂಡ ಸ್ಥಗಿತವಾಗಿದೆಯೆಂಬಂತೆ ಕಂಡುಬಂದಿತು. ‘ಅವಿದ್ಯೆ’ ಉಳಿಯದಿದ್ದರೂ ಆವರಣ ಮಾತ್ರ ಇನ್ನೂ ರಹಸ್ಯವಾಗಿ ಉಳಿಯಿತು.
ಆವಶ್ಯಕತೆ ಉಂಟಾದಾಗಲೆಲ್ಲ ಪ್ರಕೃತಿಯು ಮಾನವ ಕುಲದ ಸಹಾಯಕ್ಕೆ ಮಹಾಪುರುಷನೊಬ್ಬನನ್ನು ಕಳುಹಿಸಿಕೊಡುವುದು. ಯೋಗ ಮತ್ತು ಗೂಢ ಅಧ್ಯಾತ್ಮ ವಿದ್ಯೆಗಳ ಕ್ಷೇತ್ರದಲ್ಲಿ ಕಪ್ಪು ಅಡ್ಡಗೋಡೆಯು ಹತ್ತಿರ ಹತ್ತಿರ ಬರುತ್ತಿತ್ತು. ಎಲ್ಲ ಸಾಧನಾನುಷ್ಠಾನಗಳು ಏಕಪ್ರಕಾರದವೂ, ಯಾಂತ್ರಿಕವೂ ಮತ್ತು ಸ್ಥೂಲವೂ ಆಗಿಬಿಟ್ಟಿದ್ದವು. ಆಗ, ಮಾನವ ಇತಿಹಾಸದಲ್ಲಿ ನಮ್ಮನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯಲು ಒಬ್ಬ ಹೊಸ ಸೂರ್ಯನು ಉದಯಿಸಿದನು. ಅಧ್ಯಾತ್ಮದ ಒಂದು ಮಹಾಪೂರದ ತೆರೆಯು, ಅದನ್ನು ನೋಡುವಂತಹ ದೃಷ್ಟಿಯುಳ್ಳವರಿಗೆ ಗೋಚರಿಸಿದೆ. ನಮ್ಮ ಗುರುಗಳ ಸಂಶೋಧನೆಗಳಿಂದಾಗಿ ಆ ಆವರಣದ ನೈಜ ಸ್ವರೂಪವು ಈಗ ಪ್ರಕಟಗೊಂಡಿದೆ.
ಸೂಕ್ಷ್ಮತಮ ಸತ್ತೆಯ ಸುತ್ತಲೂ ಸ್ಥೂಲತೆಯು ಬೆಳೆಯುವುದು ಆವರಣವುಂಟಾಗಲು ಕಾರಣವಾಗಿದೆ. ಈ ಸೂಕ್ಷ್ಮತಮ ಸತ್ತೆಯು ಕೇವಲವಾದ ಪರಮ ತತ್ತ್ವ’ದೊಂದಿಗೆ ಅವಿಚ್ಛೇದ್ಯ ಏಕತೆಯನ್ನು ಹೊಂದಿದೆ. ‘ಅಹಂ’ಕಾರವು ಒಂದು ಆವರಣವಾಗಿದೆ ಎಂಬ ವಿಷಯವನ್ನು ಪುರಾತನ ಋಷಿಗಳು ಕಂಡುಹಿಡಿದರೆಂಬುದರಲ್ಲಿ ಸಂದೇಹವಿಲ್ಲ; ಆದರೆ ಅವರು, ಅದನ್ನು ಮಾನವನ ನಿಲುಕಿನ ಆತ್ಯಂತಿಕ ಮಿತಿ ಎಂದು ಭಾವಿಸಿದ್ದರಾದರೆ, ಬಹುಶಃ ಒಂದೋ, ಅವರ ದೃಷ್ಟಿಯು ಆವರಣದ ಸ್ಥೂಲತೆಯ ಮೇಲೆ ಕೇಂದ್ರಿತವಾಗಿತ್ತು ಮತ್ತು ಅದಕ್ಕೂ ಮೇಲಿನ ಸ್ತರಗಳು (ಅವಸ್ಥೆಗಳು) ಆವರಣಗಳೆಂದು ಅವರು ಗಣಿಸಿರಲಿಲ್ಲ; ಅಥವಾ, ಇನ್ನೂ ಉನ್ನತತರವಾದ ನಿಲುಕನ್ನು ತಲುಪಲು ಅವರು ಪ್ರಾಣಾಹುತಿ-ಶಕ್ತಿಯನ್ನು ಉಪಯೋಗಿಸಲು ಶಕ್ತರಾಗಿರಲಿಲ್ಲ ಅಥವಾ ಅದನ್ನು ಅವರು ಬಳಸಲಿಲ್ಲ; ಅದಕ್ಕೆ ಭಯ ಅಥವಾ ಬೇರೆ ಕಾರಣವಿದ್ದಿರಬಹುದು, ಅಥವಾ, ಅದಿಲ್ಲವಾದರೆ ಅದರ ಆವಶ್ಯಕತೆ ಕಂಡುಬರಲಿಲ್ಲ. ಸಶರೀರಿಯಾಗಿ ಬದುಕಿರುವಾಗಲೇ ಅಹಂಕಾರದ ಸ್ಥೂಲತೆಯನ್ನು ಮಾನವನು ಮೀರಿ ಹೋಗುವ ಸಾಧ್ಯತೆಯನ್ನು ‘ಸಹಜ ಮಾರ್ಗ’ದ ಸಂಸ್ಥಾಪಕರು ಪ್ರತ್ಯಕ್ಷ ನಿದರ್ಶಿಸಿದ್ದಾರೆ. ಅತ್ಯಂತ ನವುರಾದ ಮತ್ತು ವಿರಲಸ್ವರೂಪದ ಅಹಂಕಾರದ ಆವರಣವು ದೃಷ್ಟಿಗೆ ಗೋಚರವಾಗದಷ್ಟು ಸೂಕ್ಷ್ಮವಾಗಿರುವುದು ನಿಃಸಂಶಯ. ಆದರೂ ಮಾನವನ ಉನ್ನತತರವಾದ ಪ್ರಕಾಶದ ಅವಸ್ಥೆಗಳಿಗೆ ಹೋಲಿಸಿದರೆ ಅದು ಬಹಳ ಸ್ಥೂಲವಾಗಿದೆ. ಈ ಪ್ರಕಾಶಮಯ ಸ್ಥಿತಿಗಳನ್ನು ಕೂಡ ಆವರಣಗಳೆಂದು ಕರೆಯಬಹುದು.
ನಮ್ಮ ಗುರುಗಳ ಸಂಶೋಧನೆಯು ಕೇಂದ್ರದ ಸುತ್ತಲೂ ಏಳು ಪ್ರಕಾಶಮಯವಾದ ಪ್ರತ್ಯೇಕ ವೃತ್ತಗಳನ್ನು ಗುರುತಿಸಿದೆ. ಈ ಪ್ರಕಾಶಮಯವಾದ ಸಮಗ್ರ ಕ್ಷೇತ್ರವನ್ನು ನಮ್ಮ ಗುರುಗಳು (‘ಜ್ಯೋತಿರ್ಮಯ’ ವೃತ್ತಗಳ ಕ್ಷೇತ್ರವನ್ನು ಕೇಂದ್ರ ಮಂಡಲ ಎಂದು ಕರೆದಿದ್ದಾರೆ. ಇದೊಂದು ವಿಶಾಲ ಮಂಡಲವಾಗಿದ್ದು, ಅನಂತ ಸಾಗರವೇನೋ ಎಂಬಂತೆ ಇದೆ. ಈಗ, ಅಂತೂ ಕೊನೆಯಲ್ಲಿ, ಈ ಆವರಣವು ಒಂದು ಗೂಢ ರಹಸ್ಯವಾಗಿ ಉಳಿದಿಲ್ಲ; ಹಾಗೂ, ಅವಿದ್ಯೆಯ ಆವರಣವು ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುವುದು.
[ಸಹಜಮಾರ್ಗ ಪತ್ರಿಕೆ, ನಂ. 2, 1966]
ಯಾವುದು ಸಕಲ ವ್ಯಕ್ತಸೃಷ್ಟಿಯ ಮೂಲ ಕಾರಣವಾಗಿದೆಯೋ, ಮಹಾಪ್ರಳಯದ ಅನಂತರ ಎಲ್ಲವೂ ಕೊನೆಗೆ ಯಾವುದರಲ್ಲಿ ಅನವಾಗುವುದೋ ಆ ಕ್ರಿಯಾತೀತ ಕೇಂದ್ರಕ್ಕೆ ಅಥವಾ ಮೂಲಕ್ಕೆ ತೀರ ಸಮೀಪವರ್ತಿಯಾಗಿರುವ ನಮ್ಮ ಕೊನೆಯ ಸ್ಥಿತಿಯೇ ನಮ್ಮ ದ
ಜೀವನದ ಚರಮಗುಲಯಾಗಿದೆ.
– ಶ್ರೀ ಬಾಬೂಜಿ (ಸತ್ಯೋದಯ, 21)