ಪುರಾತನ ಕಾಲದಲ್ಲಿ ರಾಜಾ ವಿಶ್ವಾಮಿತ್ರ ತಪಸ್ಸನ್ನಾಚರಿಸಿ ರಾಜರ್ಷಿಯಾದನು. ಅವನು ಅನೇಕ ಸೃಷ್ಟಿಕಾರಕ ಹಾಗೂ ವಿನಾಶಕ ಶಕ್ತಿಗಳನ್ನು ಸಂಪಾದಿಸಿದನು. ತನಗೆ ಬೇಕಾದುದನ್ನು ಅವನು ಪಡೆಯಬಲ್ಲವನಾಗಿದ್ದನು. ಆದರೂ ತನ್ನಲ್ಲಿ ಏನೋ ಕೊರತೆಯಿದೆಯೆಂದು ಅವನಿಗೆ ಅನಿಸಿತು. ಇದು ಅವನನ್ನು ಬಹಳ ಅಶಾಂತಗೊಳಿಸಿತು. ವಸಿಷ್ಠ ಋಷಿಯಿಂದ ಬ್ರಹ್ಮರ್ಷಿ ಎಂದು ಕರೆಸಿಕೊಳ್ಳಬೇಕೆಂಬ ಅವನ ಬಹುಕಾಲದಿಂದ ಹಂಬಲಿಸುತ್ತಿದ್ದ ರಹಸ್ಯ ಬಯಕೆ ಇನ್ನೂ ಸಫಲವಾಗಿರಲಿಲ್ಲ. ವಸಿಷ್ಠ ಮಹರ್ಷಿಯನ್ನು, ತನಗೆ ಆ ಗೂಢ ರಹಸ್ಯವನ್ನು ಹೇಳಬೇಕೆಂದು ಮತ್ತೆ ಮತ್ತೆ ಒತ್ತಾಯಿಸಿದನು. ಆದರೆ ವಸಿಷ್ಠ ಶಾಂತನಾಗಿ ಸುಮ್ಮನಿದ್ದನು ಮತ್ತು ರಾಜರ್ಷಿಗೆ ತಾನೇ ಅದನ್ನು ಹುಡುಕಿಕೊಳ್ಳಲು ಹೇಳಿದನು.

ಒಂದು ದಿನ ಒಮ್ಮಿಂದೊಮ್ಮೆಲೆ, ತಾನು ನೋಡಲು ಹಂಬಲಿಸುತ್ತಿದ್ದ ಏನೋ ಒಂದನ್ನು ಆ ಮಹರ್ಷಿಯಲ್ಲಿ ಕಂಡನು. ಕ್ಷಣ ಮಾತ್ರದಲ್ಲಿ ಅವನ ಸಂದೇಹಗಳು ಅಳಿದು ಹೋದವು. ಮನಸ್ಸಿನ ಪ್ರಕ್ಷುಬ್ಧ ಸರೋವರವು ಶಾಂತವೂ, ನಿಶ್ಚಲವೂ ಆಯಿತು. ಆಗ ಅವನಿಗೆ ತರಂಗೋಪಾದಿಯಲ್ಲಿ ಒಂದು ತರಹದ ಚಲನೆಯ ಅನುಭೂತಿಯಾಯಿತು. ಅದರ ಸ್ಪಂದನಗಳು ಶಬ್ದಗಳ ರೂಪ ತಾಳಿದವು ಹಾಗೂ ಛಂದಸ್ಸಿನ ರೂಪದಲ್ಲಿ ಉಕ್ಕಿ ಹರಿದವು.

ಅವನು ಅದನ್ನು ಹಾಡಲು ಪ್ರಾರಂಭಿಸಿದನು :

ಓಂ ಭೂರ್ಭುವಸ್ಸುವಃ ।
ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋಯೋನಃ ಪ್ರಚೋದಯಾತ್

ಈ ಪ್ರಾರ್ಥನೆಯು ವಸಿಷ್ಠನಿಂದ “ನನ್ನ ಬ್ರಹ್ಮರ್ಷಿ, ನನ್ನ ವಿಶ್ವಾಮಿತ್ರ” ಎಂಬ ಸ್ವಯಂ ಪ್ರೇರಿತ ಉದ್ಧಾರವನ್ನು ಹೊರಹೊಮ್ಮಿಸಿತು. ವೈದಿಕ ನಾಗರಿಕತೆಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆಯುವ ಮೂಲಕ ಮನುಷ್ಯ ಕುಲದಲ್ಲಿ ಕ್ರಾಂತಿಯನ್ನು ಉಂಟುಮಾಡಿದ ಪ್ರಾರ್ಥನೆ ಇದಾಗಿತ್ತು.

ಸಾವಿರಾರು ವರ್ಷಗಳು ಉರುಳಿ ಹೋದವು. ಬ್ರಹ್ಮರ್ಷಿ ವಿಶ್ವಾಮಿತ್ರನ ಗಾಯತ್ರಿ ಪ್ರಾರ್ಥನೆಯು ಕ್ರಮೇಣ ತನ್ನ ಮೂಲ ಅರ್ಥವನ್ನು, ಉದ್ದೇಶವನ್ನೂ ಮತ್ತು ತಾರ್ಕಿಕತೆ ಮತ್ತು ವಿಜ್ಞಾನ ಯುಗದ ಎಲ್ಲ ಜನರ ಮನಸ್ಸಿಗೆ ಮುಟ್ಟುವಂತಹುದನ್ನು ಕಳೆದುಕೊಂಡಿತು. ಆ ಪ್ರಾರ್ಥನೆಯು ನಿಗೂಢ ರೂಪಗಳನ್ನು ತಳೆಯಿತು. ಗಾಯತ್ರಿಯ ರೂಪಗಳು ಸಿದ್ಧವಾದವು. ಮತ್ತು ಪ್ರಾರ್ಥನೆಯನ್ನು (ಮಂತ್ರವನ್ನು ವಿವಿಧ ಬಗೆಯ ಕೆಳಮಟ್ಟದ ಉದ್ದೇಶಗಳಿಗೆ ಬಳಸಲಾಯಿತು ಮತ್ತು ನಿಜವಾದ ಗುರಿಯು ಕಣ್ಮರೆಯಾಯಿತು.

ಮತ್ತೊಮ್ಮೆ, ಅತ್ಯುಚ್ಚ ಸಾಮರ್ಥ್ಯವುಳ್ಳ ಒಬ್ಬ ಯೋಗಿಯು ಮಾನವ ಕುಲದ ಕಲ್ಯಾಣದ ಬಗ್ಗೆ ಬಹಳ ಚಿಂತಿತನಾದನು. ಪ್ರಾರ್ಥನೆಯ ಸರಿಯಾದ ಅರ್ಥ, ಸ್ವರೂಪ ಮತ್ತು ವಿಧಾನದ ಬಗ್ಗೆ ಅವನು ಬಹಳ ವಿಚಾರಶೀಲನಾದನು; ಹಾಗೂ ಅವನು ಅತ್ಯುಚ್ಚ ಅತಿಮಾನಸ ಪ್ರಜ್ಞೆಯ ಸ್ಥಿತಿಯಲ್ಲಿ ಮುಳುಗಿದಾಗ ಅವನ ಮಾನಸ ಸರೋವರದಲ್ಲಿ ಸ್ಪಂದನಗಳು ಶಬ್ದ ರೂಪದಲ್ಲಿ, ತರಂಗೋಪಾದಿಯಲ್ಲಿ ಹೊಮ್ಮಿ ಬಂದವು :

“ಓ ನಾಥ, ನೀನೇ ಮಾನವ ಜೀವನದ ನಿಜವಾದ ಗುರಿ. ನಮ್ಮ ಇಚ್ಛೆಗಳು ನಮ್ಮ ಆನ್ನೋನ್ನತಿಯಲ್ಲಿ ಬಾಧಕಗಳಾಗಿವೆ. ನೀನೇ ನಮ್ಮ ಏಕಮಾತ್ರ ಸ್ವಾಮಿ ಹಾಗೂ ಇಷ್ಟದೈವ. ನಿನ್ನ ಸಹಾಯವಿಲ್ಲದೆ ನಿನ್ನ ಪ್ರಾಪ್ತಿಯು ಅಸಂಭವ.”

ಹಾಗೂ, ಪ್ರಾರ್ಥನೆಯ ವಿಧಾನವು ಅನುಸರಿಸಿ ಬಂದಿತು :

“ಮಲಗುವ ಮೊದಲು, ವಿನೀತ ಭಾವದ ಕುಳಿತು, ಪ್ರಾರ್ಥನೆಗಾಗಿ ಸ್ವಲ್ಪ ಸಮಯವನ್ನು ಮೀಸಲಾಗಿಡಿ. ನಿಮ್ಮ ಮನಸ್ಸಿನಲ್ಲಿ ಪ್ರಾರ್ಥನೆಯ : ಒಂದೆರಡು ಸಲ ಪುನರುಚ್ಚರಿಸಿರಿ. ನಂತರ, ಪ್ರಾರ್ಥನೆಯ ನೈಜ ಅರ್ಥದ ಮೇಲೆ ಧ್ಯಾನ ಮಾಡಲು ಪ್ರಾರಂಭಿಸಿರಿ; ಮತ್ತು ಅದರಲ್ಲಿ ಮುಳುಗಿ ಹೋಗಲು ಯತ್ನಿಸಿರಿ.”

ಆಧುನಿಕ ವೈಜ್ಞಾನಿಕ ಸಂಸ್ಕೃತಿಯು, ಮಾನವ ಜೀವನದಲ್ಲಿ ಗುರಿಯಿಲ್ಲದಿರುವುದು, ಮತ್ತು ಕೊನೆಯಿಲ್ಲದ ವ್ಯಕ್ತಿಯ ಬಯಕೆಗಳು -ಇವುಗಳ ಮೇಲೆ ಒತ್ತು ನೀಡಿ, ಮನುಷ್ಯನನ್ನು ಸ್ವಾರ್ಥ ಪೂರ್ಣ ಅಹಂಕಾರದಿಂದ ಕಂಠಮಟ್ಟಕ್ಕೆ ತುಂಬಿದೆ. ಬಹುಕಾಲ ನೆಲೆ ನಿಲ್ಲಲು ಬಿಟ್ಟರೆ ಮಾನವ ಕುಲದ ಅಸ್ತಿತ್ವವನ್ನೇ ಅಪಾಯಕ್ಕೊಡ್ಡುವಂತಹ, ನಮ್ಮ ನಾಗರಿಕತೆಯ ವಿಷಮತೆಯನ್ನು ನಿವಾರಿಸಲು ಬೇಕಾದ ಅಗತ್ಯತೆಗಳಿಗೆ ತಕ್ಕ ಸಿದ್ಧತೆಗಳನ್ನು ಈ ಪ್ರಾರ್ಥನೆಯು ಒದಗುತ್ತದೆ.

ಆನಂದಸಾಗರವನ್ನು ತಲುಪಲು ದೃಢ ನಿರ್ಧಾರ ಮಾಡು ಅದನ್ನು ಮುಟ್ಟುವದರಲ್ಲಿ ವಿಫಲನಾದ ಒಬ್ಬನನ್ನೂ ನಾನು ನೋಡಿಲ್ಲ.

– ಶ್ರೀ ಬಾಬೂಜಿ