ಅಮರರಾದಂತಹ ಕೆಲವು ವ್ಯಕ್ತಿಗಳಿದ್ದಾರೆ ಹಾಗೂ ಇನ್ನು ಕೆಲವರು ಅಮರತ್ವವನ್ನು ಪಡೆದರು ಎಂದು ಹಿಂದೂಗಳು ನಂಬುತ್ತಾರೆ. ಪತಂಜಲಿ ಹೇಳುವುದೇನೆಂದರೆ, ಭಗವಂತನು (ಈಶ್ವರ) ಪುರುಷ ವಿಶೇಷನಿದ್ದು, ಅವನು ಕರ್ಮ, ಕರ್ಮಫಲ ಹಾಗೂ ಆಸಕ್ತಿಯಿಂದ ಮುಕ್ತನಿದ್ದಾನೆ.
ಕ್ಲೇಶ ಕರ್ಮ ವಿಪಾಕಾಶಯೈರಪರಾಮೃಷ್ಟಃ ಪುರುಷ ವಿಶೇಷ ಈಶ್ವರಃ | [ಯೋ.ಸೂ 1-35]
ಪೂಜ್ಯ ಬಾಬೂಜಿ ಮಹಾರಾಜರು ತಮ್ಮ ಆತ್ಮ ಕಥೆಯಲ್ಲಿ, ನಿಸರ್ಗದ ವಿಶಾಲ ಕಾರ್ಯಾಗಾರದಲ್ಲಿ ಕೆಲವು ಋಷಿಗಳು, ಮುನಿಗಳು, ವಸುಗಳು, (ದೇವತೆಗಳು) ಕೆಲಸ ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಗತಕಾಲದ ಕೆಲವು ಮಹಾವ್ಯಕ್ತಿಗಳ ಜೊತೆಗಿನ ತಮ್ಮ ಸಂಪರ್ಕದ ಬಗ್ಗೆ ಕೂಡ ಅವರು ಪ್ರಸ್ತಾಪ ಮಾಡಿದ್ದಾರೆ.
ಮರಣ ಭಯದಿಂದ ಮುಕ್ತನಾಗಲು ಮನುಷ್ಯನಿಗೆ ಮರಣಕ್ಕೆ ಅತೀತನಾಗಿ ಹೋಗುವುದು ಅತ್ಯಂತ ಆವಶ್ಯಕವಾಗಿದೆ. ನಮ್ಮ ಗುರುಗಳು ವರ್ಣಿಸುವಂತೆ, ಒಬ್ಬನು ‘ಜೀವನ್ ಮೃತ’ನಾಗದ ಹೊರತು ಮರಣದ ರಹಸ್ಯವು ಒಂದು ಭಯಾನಕ ನರಭಕ್ಷಕ ದೈತ್ಯನಾಗಿ ಉಳಿದು ಅಂಧವಿಶ್ವಾಸಗಳನ್ನು ಹಾಗೂ ತಮ್ಮದೇ ಕಲಬೆರಕೆ ಸಿದ್ಧಾಂತಗಳನ್ನು ಮತ್ತು ಅಪಕ್ವ ಸಾಧನಾಭ್ಯಾಸ/ಅನುಷ್ಠಾನಗಳನ್ನು ಹೊಂದಿರುವ ಸ್ವಾರ್ಥಿ ಗುರುಗಳನ್ನು ಸೃಷ್ಟಿ ಮಾಡುವುದು, ಬಯಕೆಗಳು ಮತ್ತು ಅಸಾಮರ್ಥ್ಯದ ಭಾವನೆಗಳು ಮರಣದ (ಮೃತ್ಯುವಿನ) ಸೇವಕಿಯರು.
ರೋಗ, ವೃದ್ಧಾಪ್ಯ ಮತ್ತು ಮರಣದ ದೃಶ್ಯಗಳು ಬುದ್ಧನಿಗೆ ಮಾನವ ಜೀವನದ ಈ ಸಮಸ್ಯೆಗಳ ಪರಿಹಾರವನ್ನು ಹುಡುಕಲು ಪ್ರೇರೇಪಿಸಿದವು ಎಂಬುದು ಎಲ್ಲರಿಗೂ ಚೆನ್ನಾಗಿ ತಿಳಿದಿರುವ ಸಂಗತಿಯಾಗಿದೆ. ಇಲ್ಲಿ ಗಮನಿಸಬೇಕಾದುದೇನೆಂದರೆ, ಜ್ಞಾನೋದಯವಾದ ನಂತರವೂ ಬುದ್ಧನಿಗೆ ರೋಗ, ವೃದ್ಧಾಪ್ಯ ಹಾಗೂ ಮರಣದ ಸ್ಥಿತಿಗಳನ್ನು ಅನುಭವಿಸಬೇಕಾಯಿತು. ಆದರೆ ಅವನು ಅಮರ ವ್ಯಕ್ತಿಯ ಸ್ವರೂಪವನ್ನು ಪಡೆದನು.
ತಾನು ವಿಭೂತಿಪುರುಷನಾಗಿರುವುದರ ಕ್ರಿಯಾತ್ಮಕ ಪ್ರಮಾಣವನ್ನು ನಮಗೆ ನೀಡಿದಂತಹ ನಮ್ಮ ಗುರುಗಳಾದ ಶ್ರೀ ರಾಮಚಂದ್ರಜಿ ಮಹಾರಾಜರ ಸಹಚರರಾಗುವ ಭಾಗ್ಯ ನಮಗೆ ದೊರೆತಿದೆ. ಮೃತ್ಯುವನ್ನು ಮೀರಿ ಹೋಗುವ ಆಶೆಯನ್ನು ಅವರು ನಮ್ಮಲ್ಲಿ ಹೊತ್ತಿಸಿರುವುದು ಮಾತ್ರವಲ್ಲ, ಮಾನವ ಜೀವನದ ನಿಜವಾದ ಗುರಿಯ ಪ್ರಾಪ್ತಿಗಾಗಿ ಪ್ರಾಯೋಗಿಕ ಮಾರ್ಗಗಳನ್ನೂ, ಉಪಾಯಗಳನ್ನೂ ಅವರು ನಮಗೆ ಉಪದೇಶಿಸಿದರು. ತಮ್ಮನ್ನು ತಾವು ಪುರುಷ ವಿಶೇಷರೆಂದು ಹೇಳಿಕೊಳ್ಳುವ ಕೆಲವು ಜನರಿದ್ದಾರೆ; ಆದರೆ ಇಂತಹ ಜನರ ವಿಶೇಷತೆಗಳು ನಮ್ಮ ಪ್ರಿಯ ಬಾಬೂಜಿ ಮಹಾರಾಜರು ಪ್ರಾಣಾಹುತಿಯ ಮೂಲಕ ನಮಗೆ ಏನನ್ನು ನೀಡಬಯಸುತ್ತಾರೋ ಅದಕ್ಕಿಂತ ಭಿನ್ನವಾಗಿರುವಂತೆ ತೋರುತ್ತದೆ. ಶ್ರೀ ಬಾಬೂಜಿ ಮಹಾರಾಜರ ಅಪ್ಪಟ ಸರಳತೆ, ದಿವ್ಯ ಸಾಮಾನ್ಯತೆ ಮತ್ತು ನಿಗರ್ವಿ ಶೈಲಿಗಳು ಅವರ ಅನೇಕ ಅನುಯಾಯಿಗಳನ್ನು ತಾವು ತಮ್ಮ ಗುರುಗಳಿಗಿಂತಲೂ ಹೆಚ್ಚು ‘ವಿಶೇಷ’ರೆಂದು ತಪ್ಪಾಗಿ ನಂಬುವಂತೆ ಮಾಡಿ ದಾರಿ ತಪ್ಪಿಸಿವೆಯಷ್ಟೇ ಅಲ್ಲ, ಹಾಗೆ ಅವರೇ (ಗರ್ವದಿಂದ) ಹೇಳಿಕೊಳ್ಳುವಂತೆ ಕೂಡ ಮಾಡಿವೆ.
ವೈಜ್ಞಾನಿಕ ಪ್ರಯೋಗಗಳ ಹಾಗೂ ತಾತ್ವಿಕ ಗ್ರಹಿಕೆಗಳ ಆಳವಾದ ಅಧ್ಯಯನವು ಸಿದ್ದ ಮಾಡುವುದೇನೆಂದರೆ, ಭೌತಿಕ ಜಗತ್ತಿನಲ್ಲಿಯ, ನಮಗೆ ಇಂದ್ರಿಯವೇದ್ಯವಾಗಿರುವಂತಹ ಅನೇಕ ಘಟನೆಗಳು ಭೌತಾತೀತವಾದ (ಅತಿಭೌತಿಕ) ಕೆಲವು ತತ್ತ್ವಗಳಿಂದ ನಿಯಂತ್ರಿಸಲ್ಪಡುತ್ತವೆ ಎಂಬುದು. ಅವು (ಈ ತತ್ತ್ವಗಳು) ಆಧ್ಯಾತ್ಮಿಕ ಕಾರಣಗಳಾಗಿರುವುದರ ಕಲ್ಪನೆಯ ಸೂಚನೆ ಕೊಡುತ್ತವೆ. ಈ ಆಧ್ಯಾತ್ಮಿಕ ಕಾರಣಗಳು ಇಂದ್ರಿಯಗಳ ಗ್ರಹಿಕೆಗೆ ಮೀರಿದುವಾಗಿರುವಂತೆ ಕಂಡು ಬರುತ್ತವೆ; ಹಾಗಿದ್ದರೂ, ಮಾನವನ ಚಿಂತನೆಯು ಭೌತಿಕ, ಅಭೌತಿಕ ಅಥವಾ ಅತಿಭೌತಿಕ ಜ್ಞಾನಗ್ರಹಣಗಳ ನಡುವಣ ಸಾಮ್ಯಗಳನ್ನು ಕಂಡುಕೊಳ್ಳಲು ಪಟ್ಟು ಬಿಡದೆ ಪರಿಶ್ರಮಿಸುತ್ತಿದೆ. ಮಾನವ ಜೀವನದ ನಿಜವಾದ ಗುರಿಯನ್ನು ತಲುಪಲು ಭೌತಿಕ ರೂಪಗಳಿಂದಾಚೆಗೆ ಆಧ್ಯಾತ್ಮಿಕ ಸತ್ಯದ ಕಡೆಗೆ ಹೋಗಬೇಕೆಂದು ಯೋಗಿಗಳು ಹಾಗೂ ಅನುಭಾವಿಗಳು ಮಾನವನಿಗೆ ಪ್ರೇರಿಸುತ್ತಿರುವರಾದರೆ, ಬಹಳಷ್ಟು ವಿಜ್ಞಾನಿಗಳು ಸತ್ಯದ ಲಕ್ಷಣಗಳು ಹಾಗೂ ನಿಯಮಗಳನ್ನು ಮಾನವನ ಆವಶ್ಯಕತೆಗಳ ಹಾಗೂ ಅವನ ಬಯಕೆಗಳ ಪೂರ್ತಿಗೋಸ್ಕರ ಬಳಸಿಕೊಳ್ಳುವುದಕ್ಕಾಗಿ ಕಂಡುಹಿಡಿಯಲು ಯತ್ನಿಸುವರು. ಯೋಗಿಗಳು ಮತ್ತು ಅನುಭಾವಿಗಳು ಆತ್ಮದ ಅಮರತ್ವದಲ್ಲಿ ನಂಬುಗೆಯುಳ್ಳವರಾದರೆ, ವಿಜ್ಞಾನಿಗಳು ಭೌತಿಕ ಶರೀರದ ಮರ್ತ್ಯತ್ವದ ಬಗ್ಗೆ ಬಹಳ ಚಿಂತಿತರಾದಂತೆ ಮತ್ತು ಭೀತರಾಗಿರುವಂತೆ ಬಹಳಷ್ಟು ಸಾರೆ ಕಂಡು ಬರುತ್ತದೆ.
ಈಗ, ನಾವು ನಮ್ಮ ಚಿತ್ತ-ಸರೋವರದಲ್ಲಿ ಧುಮುಕಿ ನಮ್ಮ ವಿಚಾರಗಳನ್ನು ನಮ್ಮ ಗುರುಗಳೊಂದಿಗೆ ಜೋಡಿಸಿಕೊಂಡರೆ, ‘ಪರಮ ಸತ್ಯ’ವೇ ‘ಅಮರ ವ್ಯಕ್ತಿತ್ವ’ ಆಗಿದೆಯೆಂಬ ನಿರ್ಣಯಕ್ಕೆ ಬರಬಲ್ಲೆವು. ಅದರ ನಿಯಮಗಳನ್ನು ಹಾಗೂ ಗುಣಧರ್ಮಗಳನ್ನು ಯಾವನು ಮಾನವ ಕುಲದ ಮುಂದಿನ ವಿಕಾಸಕ್ಕಾಗಿ ದೈವಿಕತೆಯ ಪ್ರಾಣಾಹುತಿ ನೀಡುವ ಹಾಗೂ ಪ್ರಾಮಾಣಿಕ ಜಿಜ್ಞಾಸುಗಳ ಜ್ಞಾನಪ್ರಾಪ್ತಿಯ ಉದ್ದೇಶವನ್ನು ಈಡೇರಿಸಲು ಉದ್ಭವಿಸಿ ಬಂದ, ಅಂತಹ ‘ವಿಭೂತಿ ಪುರುಷ’ನ ಮೇಲೆ ಧ್ಯಾನ ಮಾಡುವುದರಿಂದ, ಏಕಾಗ್ರತೆಯನ್ನುಂಟು ಮಾಡಿಕೊಳ್ಳುವ ಮೂಲಕ, ಕಂಡುಕೊಳ್ಳಬಹುದು.
ಈ ಮೇಲೆ ವಿವರಿಸಿದುದನ್ನು ಗಮನದಲ್ಲಿರಿಸಿಕೊಂಡಾಗ, ವಿಭೂತಿಪುರುಷನು ಒಬ್ಬ ಮೃತ ವ್ಯಕ್ತಿಯೇ? ಅಥವಾ, ಅಮರ ಅಸ್ತಿತ್ವದ ಸಾಕ್ಷಾತ್ಕಾರ ಹೊಂದಲು ನಮಗೆ ಮಾರ್ಗದರ್ಶನ ನೀಡಲು, ನಮ್ಮ ಇಂದ್ರಿಯಗಳಿಂದ ಗ್ರಹಿಸಬಹುದಾದ ಒಬ್ಬ ಜೀವಂತ ವ್ಯಕ್ತಿಯ ಆವಶ್ಯಕತೆ ನಮಗಿದೆಯೇ ? ಅಥವಾ, ಮೃತ ವ್ಯಕ್ತಿಯಿಂದ ಮಾರ್ಗದರ್ಶನ ಹೇಗೆ ಪಡೆಯುವುದು ? – ಇಂತಹ ಪ್ರಶ್ನೆಗಳು, ಒಬ್ಬನ ತನ್ನದೇ ಗೊಂದಲ ಮತ್ತು ಇಚ್ಛೆಗಳಿಗೆ ದಾಸರಾಗಿರುವುದರಿಂದ ಸತ್ಯವನ್ನು ಕಾಣಲು ನಿರಾಕರಿಸುವುದನ್ನು ಹಾಗೂ ಅದರ ಪರಿಣಾಮದಿಂದಾಗಿ ಅವನ ಪ್ರಗತಿಯು ಕುಂಠಿತವಾಗುವುದನ್ನು ಬಯಲಿಗೆಳೆಯುತ್ತವೆ.
ನಮ್ಮ ಗುರುಗಳ ಅಪ್ಪಟ ಸರಳತೆ ಹಾಗೂ ಶಿಶುಸದೃಶ ಮುಗ್ಧತೆಗಳನ್ನು ಕಂಡಾಗ, ‘ಸತ್ಯ’ವು ಕೂಡ ಸರಳ ಹಾಗೂ ಶುದ್ಧ ಎಂದು ನಿರಾತಂಕವಾಗಿ ನಿರ್ಣಯಿಸಬಹುದು; ಅಥವಾ ಸಂಪೂರ್ಣ ಸರಳತೆ ಹಾಗೂ ಶುದ್ಧತೆಗಳು ಸತ್ಯದ ಲಕ್ಷಣಗಳಾಗಿ ನಾವು ಎಂದೂ ಊಹಿಸಬಹುದು. ಸತ್ಯವು ಸ್ವತಃ ಅವುಗಳನ್ನು ಮೀರಿರುವುದಾದರೂ, ಅವು ನಮ್ಮ ಗುರುಗಳಲ್ಲಿ ಪ್ರಕಟವಾಗಿರುವವು; ಅವರು ಮಾತ್ರವೇ ಆತ್ಯಂತಿಕ ಚೈತನ್ಯವನ್ನು ಪ್ರಾಣಾಹುತಿಯ ಮೂಲಕ ಧಾರೆಯೆರೆಯುವವರಾಗಿದ್ದಾರೆ. ಅವರಿಂದ ಮಾತ್ರವೇ ನಾವು ಅಮರ ವ್ಯಕ್ತಿತ್ವದ ಸ್ಪರ್ಶವನ್ನು ಪಡೆಯಬಹುದು.
ಆತನನ್ನು ಸಾಕ್ಷಾತ್ಕರಿಸಿಕೊಳ್ಳಲು ಹಾಗೂ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಲು ಗುರುಗಳು ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡಲಿ.
[ಸಹಜಮಾರ್ಗ ಪತ್ರಿಕೆ, ನಂ. 2, ಎಪ್ರಿಲ್ 1990]