ರಾಜಯೋಗ ಸಾಧನೆಯ ಆಧ್ಯಾತ್ಮಿಕ ತರಬೇತಿಯನ್ನು ಸಹಜಮಾರ್ಗದಲ್ಲಿ ಪ್ರಾಣಾಹುತಿಯ ಮೂಲಕ ಕೊಡಲಾಗುವುದು. ಈಗ ಅನುಷ್ಠಾನದಲ್ಲಿರುವಂತೆ, ಪ್ರಾಣಾಹುತಿಯಲ್ಲಿ ಮಾನವ ಮನಸ್ಸು ಒಳಗೊಂಡಿದ್ದು, ಅದರ ಮೂಲಕ ದೈವೀ ಕೃಪೆಯು ಹರಿದು ಬರುವುದು ಮತ್ತು ಅಭ್ಯಾಸಿಯ ಹೃದಯದ ಮೇಲೆ ಕೇಂದ್ರಿತಗೊಳಿಸಲ್ಪಡುವುದು. ಹೀಗೆ, ಪ್ರಾಣಾಹುತಿಯು ಮೂಲತಃ ಒಂದು ದೈವೀ ಕ್ರಿಯೆ ಆಗಿದೆ. ದೈವೀ ಕಲ್ಪನೆಯ ಅಂಶವಿಲ್ಲದೆ ಹೋದರೆ, ಮಾನವ ಜೀವನದ ನಿಜವಾದ ಗುರಿಯ ಪ್ರಾಪ್ತಿಯನ್ನು ದೃಷ್ಟಿಯಲ್ಲಿರಿಸಿಕೊಂಡ ಸಹಜಮಾರ್ಗದ ಅಭ್ಯಾಸಿಗಳು ತಿಳಿದಿರುವ ಪ್ರಾಣಾಹುತಿಯು ಅದಾಗುವುದಿಲ್ಲ.

ಇತ್ತೀಚೆಗೆ, ದೈವೀ ಕೃಪೆಯನ್ನು ಸಂವಹನಗೊಳಿಸುವ ಸಾಮರ್ಥ್ಯ ಅಥವಾ ಅಧಿಕಾರವು ತಮಗೆ ಇರುವುದಾಗಿ ಹೇಳಿಕೊಳ್ಳುವ ಅನೇಕ ಜನರು ಎದ್ದು ಬಂದಿದ್ದಾರೆ. ಕೆಲವರಂತೂ ತಾನೊಬ್ಬನೇ ಪ್ರಾಣಾಹುತಿ ನೀಡುವ ಅಧಿಕಾರ ಪಡೆದವ, ಬೇರೆ ಯಾರೂ ಇಲ್ಲ ಎಂದು ತಮ್ಮ ಹಕ್ಕು ಪ್ರತಿಪಾದಿಸುತ್ತಾರೆ. ಅನ್ಯರಿಗೆ ನೀಡಲಾಗಿದ್ದ ಪ್ರಾಣಾಹುತಿ ಕೊಡುವ ಸಾಮರ್ಥ್ಯವನ್ನು ತಾನು ಹಿಂದಕ್ಕೆ ಸೆಳೆದಿದ್ದೇನೆ ಎಂದು ಕೂಡ ಒಬ್ಬ ವಿಕ್ಷಿಪ್ತ ವ್ಯಕ್ತಿಯು ತನ್ನ ಹಕ್ಕು ಸಾಧಿಸಬಹುದು. ಪ್ರಾಣಾಹುತಿಯನ್ನು ನೀಡುವ ಅಧಿಕಾರವನ್ನು ಪ್ರಯೋಗಿಸುವ ನೆಪದಲ್ಲಿ ಹೇಳಲಾಗುತ್ತಿರುವ ಯಾವುದೇ ಅವಿವೇಕದ ಮಾತುಗಳನ್ನು ನಂಬುವ ಮುಗ್ಧ ಜನರಿಗೇನೂ ಕೊರತೆ ಇಲ್ಲ. ದೇವರು ಅವರಿಗೆ ದಯ ತೋರಲಿ. “ಸಾಮಾನ್ಯವಾಗಿ, ಕನಿಷ್ಠ ಪಕ್ಷ ಬ್ರಹ್ಮಾಂಡ ಮಂಡಲದವರೆಗೆ ನಿಲುಕನ್ನು ಸಾಧಿಸಿರದ ಆಧ್ಯಾತ್ಮಿಕ ಶಿಕ್ಷಕನು ಬೇರೆಯವರಿಗೆ ತರಬೇತಿ ನೀಡಲು ತಾನು ಅರ್ಹನೆಂದು ಎಂದಿಗೂ ಯೋಚಿಸಬಾರದು………. ನಮ್ಮ ಸಂಸ್ಥೆಯಲ್ಲಿ ಈ ಹಂತದಲ್ಲಿ ಕೂಡ ಆಧ್ಯಾತ್ಮಿಕ ತರಬೇತಿ ಕೊಡಲು ಸಾಮಾನ್ಯವಾಗಿ ಅನುಮತಿ ನೀಡಲಾಗುವುದಿಲ್ಲ” ಎಂದು ನಮ್ಮ ಗುರುಗಳು ಹೇಳಿದ್ದಾರೆ. (‘ಸತ್ಯೋದಯ’ದಲ್ಲಿಯ ‘ಗುರು’ ಅಧ್ಯಾಯದ ಕೊನೆಯ ಪರಿಚ್ಛೇದ).

ಪ್ರಾಣಾಹುತಿಯು ಒಂದು ವೈಜ್ಞಾನಿಕ ತತ್ತ್ವವಾಗಿದೆ. ಇತರ ವೈಜ್ಞಾನಿಕ ಸಂಶೋಧನೆಗಳು ಮತ್ತು ಆವಿಷ್ಕಾರಗಳ ವಿಷಯದಲ್ಲಿ ಆಗಿರುವಂತೆಯೇ ಪ್ರಾಣಾಹುತಿಯಲ್ಲಿ (ಶಕ್ತಿ ಸಂವಹನದಲ್ಲಿ) ದೈವೀ ವಿಚಾರವನ್ನು ನಿರ್ಲಕ್ಷಿಸಿದ್ದರಿಂದ ವಿನಾಶವೇ ಉಂಟಾಗಿದೆ. ಧರ್ಮಾಂಧತೆ, ಅಂಧಶ್ರದ್ಧೆ, ಸಂಕುಚಿತ ವಿಚಾರ ಪ್ರಣಾಲಿ, ಮತ್ಸರ, ದ್ವೇಷ ಹಾಗೂ ಅಂತಹ ಆಸುರೀ ಮತ್ತು ಅಸಂಸ್ಕೃತ ಸ್ಥೂಲ ವಿಷಯಗಳನ್ನು ಜನರ ಹೃದಯದಿಂದ ಸಮರ್ಥ ವ್ಯಕ್ತಿಗಳು ತೆಗೆದು ಹಾಕಲೂಬಹುದು. ಅಥವಾ ಕುಟಿಲ ವ್ಯಕ್ತಿಗಳು ತಮ್ಮ ಸಹಚರರಲ್ಲಿ ಸಂಪರ್ಕದಲ್ಲಿ ಬಂದವರಲ್ಲಿ ಸೇರಿಸಲೂಬಹುದು. ಪ್ರಾಣಾಹುತಿ (ಶಕ್ತಿ ಸಂವಹನ) ತಂತ್ರವನ್ನು, ಅದರ ದುರುಪಯೋಗ ಹಾಗೂ ಅಧಃಪತನಗಳಾಗದಂತೆ ರಕ್ಷಿಸಬೇಕು. ಸುದೈವದಿಂದ, ಸಹಜಮಾರ್ಗ ಪದ್ಧತಿಯ ಸಂಸ್ಥಾಪಕರು ಅವರು ಇಚ್ಛಿಸಿದ ರೀತಿಯಲ್ಲಿಯೇ ಕೆಲಸ ಮಾಡಬೇಕು, ಅದಿಲ್ಲವಾದರೆ, ಅದು ಕೆಲಸ ಮಾಡಲೇ ಕೂಡದು ಎಂಬಂತೆ ಸಹಜಮಾರ್ಗ ಪದ್ಧತಿಯ ಪ್ರವರ್ತಕರು ರೂಪಿಸಿದ್ದಾರೆ. ಕಪಟಿಯೊಬ್ಬನು ಒಂದು ವೇಳೆ ಬಲವಂತವಾಗಿ ಪ್ರಾಣಾಹುತಿಯನ್ನು ತಪ್ಪಾದ ದಿಶೆಯಲ್ಲಿ ಪ್ರಯೋಗಿಸಿದ್ದಾದರೆ, ಅದು ಪ್ರಾಣಾಹುತಿ ನೀಡುವವನ ಮೇಲೆಯೇ ತಿರುಗಿ ಅಪ್ಪಳಿಸುವುದು.ಏಕೆಂದರೆ ಪ್ರಕೃತಿಯ ಚಕೀಯ ತತ್ತ್ವದ ನಿಯಮವೇ ಹಾಗಿದೆ.

ಸಹಜಮಾರ್ಗದಲ್ಲಿ ಪ್ರಯೋಗಿಸಲಾಗುತ್ತಿರುವಂತೆ ಒಬ್ಬನು ಪ್ರಾಣಾಹುತಿಯ ಕಲೆಯಲ್ಲಿ ಪರಿಣತಿ ಹೊಂದಲು ಬಯಸಿದರೆ ಅವನು ವಿಶೇಷ ತರಬೇತಿಯನ್ನು ಪಡೆಯಬೇಕಾಗುವುದು. ಪ್ರಾಣಾಹುತಿಯ ಮೂಲಕ ತರಬೇತಿ ನೀಡಲು ಒಬ್ಬ ಸಮರ್ಥ ಅಧಿಕಾರಿಯಾದವನಿಂದ ಅನುಮತಿ ಪಡೆದ ನಂತರವೂ, ತರಬೇತಿ ಕೊಡುವವನು ತನ್ನನ್ನು ತಾನು ಒಬ್ಬ ಅಭ್ಯಾಸಿಯೆಂದು ತಿಳಿಯಬೇಕು ಹಾಗೂ ಎಲ್ಲ ಸಾಫಲ್ಯ- ವೈಫಲ್ಯಗಳಿಗೆ ತಾನೇ ಕಾರಣನೆಂದು ಭಾವಿಸದೆ, ಅದಕ್ಕೆಲ್ಲ ದೈವೀ ನಿಯೋಗಿಯೇ (agency) ಕಾರಣವೆಂದು ತಿಳಿಯಬೇಕು, ಮತ್ತು ತನ್ನ ಅಭ್ಯಾಸ ಮುಂದುವರಿಸುತ್ತಿರಬೇಕು. ನಮ್ಮಪೂಜ್ಯಗುರುಗಳಾದ ಶ್ರೀ ಬಾಬೂಜಿ ಮಹಾರಾಜರು ಆಧ್ಯಾತ್ಮಿಕ ತರಬೇತಿಯ ಪೂರ್ಣ ವ್ಯಾಪ್ತಿ, ಮಾನವ ಜೀವನದ ಗುರಿ, ಮತ್ತು ನಿಜವಾದ ಯೋಗಿಗೆ ಸಾಧ್ಯವಿರುವ ನಿಲುಕುಗಳ ಬಗ್ಗೆ ತಮ್ಮ ಅನೇಕ ಗ್ರಂಥಗಳಲ್ಲಿ ಸ್ಪಷ್ಟವಾಗಿ ನಿರೂಪಿಸಿದ್ದಾರೆ.

ಪ್ರಾಣಾಹುತಿಯು ಲಘುವಾಗಿದ್ದಷ್ಟೂ ಫಲಿತಾಂಶವು ಅಷ್ಟೇ ಹೆಚ್ಚು ಪರಿಣಾಮಕಾರಿಯಾಗುವುದು. ತತ್ಪರತೆ ಮತ್ತು ಗ್ರಹಣಶಕ್ತಿಗಳು (ಸ್ವೀಕರಿಸುವ ಸಾಮರ್ಥ್ಯ) ಗಳು ಪ್ರಾಣಾಹುತಿಯ ಕಾರ್ಯಕಾರಿತ್ವದಲ್ಲಿ ಮಹತ್ತ್ವದ ಪಾತ್ರ ವಹಿಸುವವು. ಒಂದು ವೇಳೆ ದೈವೀ ಚಿಂತನ ಅಥವಾ ದೈವೀ ಭಾವ ಇಲ್ಲದೆ ಹೋದರೆ ಅಥವಾ, ಗಮನದ ಅಥವಾ ಸ್ವೀಕೃತಿಯ ಉದ್ದಿಷ್ಟ ವಸ್ತುವಾಗಿರದಿದ್ದರೆ ಫಲಿತಾಂಶವು ದುರದೃಷ್ಟಕರವಾಗುವುದು. ಇಂತಹ ಪ್ರಸಂಗಗಳಲ್ಲಿ ಅದೈವೀ ಅಂಶಗಳ ಪರಸ್ಪರ ಅದಲು-ಬದಲಾಗುವಿಕೆಯಾಗುವುದು, ಹಾಗೂ ಪ್ರಶಿಕ್ಷಕನು ಬಹಳಷ್ಟು ಹಾನಿಗೊಳಗಾಗುವನು. ಏಕೆಂದರೆ, ಆಂತರಿಕ ವ್ಯವಸ್ಥೆಯನ್ನು ಶುದ್ಧಗೊಳಿಸುವ ಪ್ರಕ್ರಿಯೆಯು ಕಲ್ಮಷಗಳು ಹಾಗೂ ಸ್ಥೂಲತೆ ಮುಂತಾದವುಗಳನ್ನು ಸ್ವೀಕರಿಸುವ ಕಾಲುವೆಯಾಗುವುದು. ಅಂತಿಮ ಸ್ಥಿತಿಯು ಎಷ್ಟು ಸೂಕ್ಷ್ಮ ಹಾಗೂ ಸರಳವಾಗಿದೆ ಎಂದರೆ ಅದನ್ನು ಬಿಟ್ಟು ಬೇರೇನಾದರೂ ಅದನ್ನು ಆವರಿಸಿದರೆ, ಅದು ಒಬ್ಬನ ದೃಷ್ಟಿಯಿಂದ ಶೀಘ್ರವಾಗಿ ಮರೆಯಾಗುವುದು. ಎಷ್ಟೋ ಸಲ ಬಹಳಷ್ಟು ಮುಂದುವರಿದ ವ್ಯಕ್ತಿಗಳೂ ಕೂಡ ಕೆಳಗಿನ ಸ್ತರಗಳಿಗೆ ಜಾರುವುದು ಒಂದಿಲ್ಲೊಂದು ಹಂತದಲ್ಲಿ ಸ್ಥಗಿತಗೊಳ್ಳುವುದು ಈ ಕಾರಣಕ್ಕಾಗಿಯೇ ಕೇವಲ ಒಬ್ಬ ಶ್ರೇಷ್ಠ ಗುರುವಿನ ಸಹಾಯ ಮಾತ್ರ ಅವರನ್ನು ರಕ್ಷಿಸಬಲ್ಲುದು. ಮತ್ತು ನಿಜಕ್ಕೂ, ಉಚ್ಚಸ್ತರಗಳಲ್ಲಿ ಮುಂದುವರಿಯಲು ಆ ಸಹಾಯವು ಅನಿವಾರ್ಯವಾಗುವುದು.ಯೌಗಿಕ ಪ್ರಾಣಾಹುತಿಯ ಮೂಲಕ ಮಾತ್ರವೇ ಇಂತಹ ಸಹಾಯ ಪಡೆಯುವುದು ಸಾಧ್ಯ.

ನಿರಂತರ ಸ್ಮರಣೆಯ ಮೂಲಕ, ಅಭ್ಯಾಸಿಯು ಅಂತಿಮ ಸ್ಥಿತಿಯೊಂದಿಗೆ ಎಡೆಬಿಡದೆ ಸಂಪರ್ಕ ಇಟ್ಟುಕೊಳ್ಳಲು ನಮ್ಮ ಗುರುಗಳಾದ ಪೂಜ್ಯ ಬಾಬೂಜಿ ಮಹಾರಾಜರು ಕೆಲವು ಸರಳ ಮಾನಸಿಕ ಅಭ್ಯಾಸಗಳನ್ನು ವಿಧಿಸಿದ್ದಾರೆ. ಈ ಸಂಪರ್ಕದ ಕೊಂಡಿಯನ್ನು ಪ್ರಾಣಾಹುತಿಯ ಸಹಾಯದಿಂದ ಸುಲಭವಾಗಿ ಮತ್ತು ಶೀಘ್ರವಾಗಿ ಸ್ಥಾಪಿಸಬಹುದು. ಆದರೆ ಈ ಹಿಂದೆ ಎಚ್ಚರಿಕೆ ಕೊಟ್ಟಂತೆ ದೈವೀ ಮಾರ್ಗದರ್ಶನ ಮಾತ್ರವೇ ಪ್ರಾಣಾಹುತಿಯು ದೈವೀ ಉದ್ದೇಶವನ್ನು ಪೂರ್ತಿಗೊಳಿಸುವಂತೆ ಮಾಡಬಲ್ಲುದು. “ಹಳೆಯ ವ್ಯವಸ್ಥೆಯು ಬದಲಾವಣೆಗೊಂಡು ಹೊಸ ವ್ಯವಸ್ಥೆಗೆ ದಾರಿ ಮಾಡಿಕೊಡುವುದು” ಮತ್ತು ಭಗವಂತನು ತನ್ನ ಉದ್ದೇಶವನ್ನು ಅನೇಕ ವಿಧಗಳಲ್ಲಿ ಈಡೇರಿಸಬಲ್ಲನು.
ಸಹಜಮಾರ್ಗ ಪದ್ಧತಿಯ ನೈಜ ತತ್ತ್ವವನ್ನು ಅನುಸರಿಸಲು ಗುರು ಮಹಾರಾಜರು ನಮಗೆ ವಿವೇಕ ಮತ್ತು ಜ್ಞಾನವನ್ನು ದಯಪಾಲಿಸಲಿ.

[ಸಹಜಮಾರ್ಗ ಪತ್ರಿಕೆ, ನಂ. 2, ಮಾರ್ಚ್ 1991]

ಪ್ರಾಣಾಹುತಿಯ ಶಕ್ತಿಯು ಅತ್ಯುಚ್ಚ ತರಗತಿಯ ಒಂದು ಯೌಗಿಕ ಸಿದ್ಧಿಯಾಗಿದ್ದು ಅದರಿಂದ ಯೋಗಿಯು ತನ್ನ ಇಚ್ಛಾಶಕ್ತಿಯ ಮೂಲಕ ಯಾರಲ್ಲಿ ಬೇಕಾದರೂ ಯೌಗಿಕ ” ಶಕ್ತಿಯನ್ನಾಗಲಿ, ದೈವೀಪ್ರಭೆಯನ್ನಾಗಲಿ ತುಂಬಬಲ್ಲನು., ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಭಾಧಕವಾದ ಯಾವುದೇ ಅನಿಷ್ಟ ಸಂಗತಿಯನ್ನು ತೊಲಗಿಸಬಲ್ಲನು.

-ಶ್ರೀ ಬಾಬೂಜಿ

(ಸತ್ಯೋದಯ, ಪುಟ 50)