ನನ್ನ ಮಿತ್ರನೊಬ್ಬ ಈ ಕೆಳಗಿನ ಕಥೆ ಹೇಳಿದ : “ಒಮ್ಮೆ ಒಬ್ಬ ಮನುಷ್ಯ ಪ್ರಬಲ ಜಲಪ್ರವಾಹದಲ್ಲಿ ಸಿಕ್ಕಿಬಿದ್ದ. ಒಂದು ಕರಡಿ ಕೂಡ ಅದೇ ಪ್ರವಾಹದಲ್ಲಿ ಅದೇ ರೀತಿ ಸಿಕ್ಕಿಬಿದ್ದಿತು. ಅದು ಆ ಮನುಷ್ಯನನ್ನು ಸಮೀಪಿಸಿ ಅವನನ್ನು ಹಿಡಿಯಿತು. ಆ ಬಡಪಾಯಿ ವ್ಯಕ್ತಿ ಕರಡಿಯೊಂದಿಗೆ ಸೆಣಸಾಡಲು ಪ್ರಾರಂಭಿಸಿದ. ಅದನ್ನು ನೋಡುತ್ತಿದ್ದ ಯಾರಿಗಾದರೂ, ಅದು ಮುಳುಗುತ್ತಿರುವ ವ್ಯಕ್ತಿಯೊಬ್ಬ ಒಂದು ಉಣ್ಣೆಯ ಕಂಬಳಿಯೊಂದಿಗೆ ಹೋರಾಡುತ್ತಿರುವಂತೆ ಕಾಣುತ್ತಿತ್ತು. ಅಂತೆಯೇ, ದಂಡೆಯಿಂದ ಯಾವನೋ ಒಬ್ಬ ಅವನಿಗೆ “ಉಣ್ಣೆಯ ಕಂಬಳಿಯೊಂದಿಗೆ ಹೋರಾಡುವುದನ್ನು ಬಿಟ್ಟು ಬಿಡು” ಎಂದು ಕೂಗಿ ಹೇಳಿದ. ಆದರೆ ಆ ನಿಃಸಹಾಯಕ ಮನುಷ್ಯ ತನ್ನನ್ನು ಕಂಬಳಿ ಹಿಡಿದುಕೊಂಡಿದೆ, ಅದು ನನ್ನನ್ನು ಬಿಡಲೊಲ್ಲದು ಎಂದು ಕೂಗಿ ಹೇಳಿದ.”

ಪ್ರಪಂಚ ತ್ಯಾಗ ಮಾಡಿ ಅವರಂತಾಗಲು ನಮಗೆ ಉಪದೇಶ ಮಾಡುವ ನಮ್ಮ ದೇಶದ ಸ್ವಾಮೀಜಿಗಳನ್ನು ನಾನು ಕೇಳಿದಾಗಲೆಲ್ಲ ಈ ಕಥೆ ನನಗೆ ನೆನಪಾಗುವುದು. ಈ ಮಾನ್ಯ ಭಾಷಣಕಾರರನ್ನು, ನಮಗೆ ಹತ್ತಿರ ಬನ್ನಿರಿ ಮತ್ತು ನಮ್ಮ ತೊಡಕುಗಳಿಂದ ಪಾರಾಗಲು ನಮಗೆ ಸಹಾಯ ಮಾಡಿ ಎಂದು ಕೇಳಬೇಕೆಂದೆನಿಸುತ್ತದೆ. ಆದರೆ ನಾನು ಮೌನ ತಾಳುತ್ತೇನೆ. ಏಕೆಂದರೆ ನಾವು ಸಡಿಲಾದ ದಾರಗಳಲ್ಲಿ ಸಿಕ್ಕಿಬಿದ್ದರೆ, ಅವರು ಕಬ್ಬಿಣದ ಸರಪಳಿಗಳಿಂದ ಭದ್ರವಾಗಿ ಬಂಧಿಸಲ್ಪಟ್ಟಿದ್ದಾರೆ; ಹಾಗಾಗಿ ನನಗೆ ಅವರ ಬಗ್ಗೆ ಸಹಾನುಭೂತಿ ಉಂಟು.

ಬೇರೆಯವರಿಗೆ ಸಹಾಯ ಮಾಡುವವನು ಮೊದಲಿಗೆ ತನಗೆ ತಾನೇ ಸಹಾಯ ಮಾಡಿಕೊಳ್ಳಬೇಕು, ಮತ್ತು ಅನಂತರ, ಪ್ರಾಣಾಹುತಿಯ ಮೂಲಕ ಸಾಕಷ್ಟು ಶಕ್ತಿಯನ್ನು ಸಂಪಾದಿಸಬೇಕು. ಈ ಪ್ರಾಣಾಹುತಿ ಶಕ್ತಿಯು ಒಂದು ಅಪರೂಪದ ವರ (ಅನುಗ್ರಹ). ಅದನ್ನು ಸಂಪಾದಿಸುವುದು ಹೇಗೆಂದು ಹೇಳುವುದು ಕಷ್ಟ. ಕೇವಲ ಅತ್ಯುಚ್ಚ ಸಾಮರ್ಥ್ಯವುಳ್ಳ ವ್ಯಕ್ತಿಗೆ ಮಾತ್ರವೇ ಅದರ ಮೇಲೆ ಪ್ರಭುತ್ವವಿರುವುದು. ನಿಸರ್ಗದಲ್ಲಿ ಕೆಲವು ವಿಶಿಷ್ಟ ಕಾರ್ಯಗಳನ್ನು ನೆರವೇರಿಸುವುದು ಭಗವಂತನಿಗೆ ಬೇಕೆನಿಸಿದಾಗ ಒಬ್ಬ ವಿಭೂತಿ ಪುರುಷನಿಗೆ ಮಾತ್ರ ದಯಪಾಲಿಸಲ್ಪಡುವ ಉಚ್ಚಮಟ್ಟದ ಸಿದ್ಧಿ ಇದಾಗಿದೆ.

ಈ ಪ್ರಾಣಾಹುತಿಯಿಂದ ಅಭ್ಯಾಸಿಯ ಆಂತರಿಕ ತೊಡಕುಗಳು ಅಳಿದು ಹೋಗುವವು. ತುಲನಾತ್ಮಕವಾಗಿ ಅಲ್ಪ ಸಮಯದಲ್ಲಿಯೇ ಒಬ್ಬ – ಸಾಧಕನು ತಾನು ಬಹುತೇಕ ಎಲ್ಲ ತೊಡಕುಗಳಿಂದ ಮುಕ್ತವಾಗಿರುವುದನ್ನು ಕಾಣುವನು. ಯಾವಾಗ ಉಸಿರುಗಟ್ಟಿಸುವ ಒತ್ತಡಗಳಿಂದ ಬಿಡುಗಡೆ ಹೊಂದುವನೋ ಆಗ ತನ್ನ ತರಬೇತಿಯು ಸರಿಯಾದ ಮಾರ್ಗದಗುಂಟ ಸಾಗಿದೆಯೆಂದು ಒಬ್ಬನು ತಿಳಿಯಬೇಕು. ಏತದ್ವಿರುದ್ಧವಾಗಿ, ಒಬ್ಬ ಗುರುವೆಂದೆನಿಸಿಕೊಳ್ಳುವವನು ವಿಧಿಸಿದ ಒಂದು ಪದ್ಧತಿಯನ್ನು ಅಭ್ಯಾಸ ಮಾಡಿದ ನಂತರ ತಾನು ಹೆಚ್ಚು ಯಾಂತ್ರಿಕವಾಗಿ ಬೆಳೆಯುತ್ತಿರುವಂತೆ ಅಥವಾ ತಾನು ಅಂಧಶ್ರದ್ಧೆ, ಮತಾಂಧತೆ ಹಾಗೂ ಅನ್ಯರ ಬಗ್ಗೆ ಜುಗುಪ್ಪೆ ಬೆಳೆಸಿಕೊಳ್ಳುತ್ತಿರುವಂತೆ, ಅಥವಾ ತನ್ನಲ್ಲಿ ಸ್ಥೂಲತೆ, ಜಡತೆ ಹೆಚ್ಚುತ್ತಿರುವಂತೆ ಒಬ್ಬನಿಗೆ ಅನಿಸಿದರೆ, ಅವನು ಕೂಡಲೇ ಅದರ ವರದಿಯನ್ನು ತನ್ನ ಗುರುವಿಗೆ ಒಪ್ಪಿಸಬೇಕು ಹಾಗೂ ಅದರ ಸುಧಾರಣೆಗಾಗಿ ಬೇಡಿಕೊಳ್ಳಬೇಕು. ಒಂದು ವೇಳೆ ಅದನ್ನು ಸರಿಪಡಿಸಲು ಆ ಗುರುವು ಅಸಮರ್ಥನಾದರೆ ಅಥವಾ ಕಾಲ ವಿಳಂಬಗೈದರೆ, ತನ್ನದೇ ಹಿತದ ದೃಷ್ಟಿಯಿಂದ ಆ ಅಭ್ಯಾಸ ಹಾಗೂ ಗುರುವನ್ನು ಬಿಟ್ಟು ಬಿಡುವುದು ಮತ್ತು ಬೇರೊಬ್ಬ ಉತ್ತಮ ಗುರು ಹಾಗೂ ಪದ್ಧತಿಗಾಗಿ ಅರಸುವುದು ಅವನ ಕರ್ತವ್ಯವಾಗುವುದು. ತನ್ನ ಗುರುವು ಒಬ್ಬ ಠಕ್ಕ ಹಾಗೂ ಮೋಸಗಾರನೆಂದು ಕಂಡ ಮೇಲೂ ತನ್ನ ಆ ಗುರುವಿನೊಂದಿಗೆ ಸಂಬಂಧ ಕಡಿದುಕೊಳ್ಳಬಾರದೆನ್ನುವುದು ಮೂರ್ಖತನದ್ದು ಹಾಗೂ ಬಾಲಿಶ ಅಂಧಶ್ರದ್ಧೆಯಾಗಿದೆ.

ಈಗ ನಾವು ಅಪಾಯಕಾರಿಯಾದ ಕರಡಿಯಿಂದ ಹಿಡಿಯಲ್ಪಟ್ಟು ಮುಳುಗುತ್ತಿರುವ ಮನುಷ್ಯನ ಕಥೆಗೆ ಹಿಂದಿರುಗೋಣ. ಇಂತಹ ವ್ಯಕ್ತಿಯ ಪ್ರಥಮ ಆವಶ್ಯಕತೆಯೆಂದರೆ ಕರಡಿಯ ಭಯಂಕರ ಹಿಡಿತದಿಂದ ಮುಕ್ತನಾಗುವುದು ಮತ್ತು ಎರಡನೆಯದಾಗಿ ಮುಳುಗುವುದರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದು. ಒಬ್ಬ ಸಹಾಯಕನಿಲ್ಲದೆ ಅವನು ತನ್ನನ್ನು ರಕ್ಷಿಸಿಕೊಳ್ಳುವುದು ಅಸಾಧ್ಯ. ಆದ ಕಾರಣ, ಸಹಾಯಕ್ಕಾಗಿ ಅಳುವುದು, ಜೋರಾಗಿ ಕೂಗುವುದು ಮತ್ತು ತನ್ನ ಸಂಕಟ ಮತ್ತು ನೋವಿನಿಂದ ನರಳುವುದು ಅವನಿಗೆ ಅತ್ಯಗತ್ಯದ್ದಾಗಿದೆ. ಒಂದು ವೇಳೆ ಇಂತಹ ವ್ಯಾಕುಲತೆ ಜಿಜ್ಞಾಸುವಿನಲ್ಲಿ ಬೆಳೆದರೆ, ದೇವರು ತನ್ನ ಅನಂತ ಕೃಪೆ ಮತ್ತು ಕರುಣೆಯಿಂದ ಒಬ್ಬ ಸಹಾಯಕನನ್ನು ಅವನ ಬಳಿಗೆ ಕಳುಹಿಸಿ ಕೊಡುತ್ತಾನೆ, ಅಲ್ಲಲ್ಲ, ತಾನೇ ಸ್ವತಃ ಒಬ್ಬ ಗುರುವಿನ ರೂಪದಲ್ಲಿ ಅವನ ಬಳಿಗೆ ಬರುತ್ತಾನೆ.

ಈಗ, ಮುಂದೆ, ಆ ಕರಡಿಯನ್ನು ಕೊಲ್ಲುವುದು ಅಥವಾ ಸದ್ಯದ ಆತಂಕವನ್ನು ನಿವಾರಿಸುವುದು ಸಹಾಯಕನ ಪ್ರಥಮ ಕರ್ತವ್ಯವಾಗುವುದು. ಅದನ್ನು ಮಾಡಲು ಆ ಸಹಾಯಕನು ಅಸಮರ್ಥನಾದರೆ, ಅವನು ಸಹಾಯ ಮಾಡಲಾರ. ಅವನು (ಸಹಾಯಕ) ಸಾಕಷ್ಟು ಶಕ್ತಿಯನ್ನು ಹೊಂದಿರಬೇಕು. ಗುರುವು ಪ್ರಾಣಾಹುತಿ ಶಕ್ತಿಯನ್ನು ತನ್ನ ಅಳವಿನಲ್ಲಿ ಪಡೆದಿದ್ದರೆ, ಆಗ ತನ್ನ ಸಂಕಲ್ಪ ಶಕ್ತಿಯಿಂದ ಆತಂಕವನ್ನು ನಿವಾರಿಸಬಹುದು. ಸಾಮಾನ್ಯವಾಗಿ, ಅದರ ಪರಿಣಾಮದಿಂದ ಮನಸ್ಸಿನ ಅಧೋಮುಖಿಯಾದ ಪ್ರವೃತ್ತಿಗಳು ದುರ್ಬಲಗೊಳ್ಳುವವು ಹಾಗೂ ಯಾವುದನ್ನು ಅವನಿಗೆ ಶಾಶ್ವತವಾಗಿ ಪಡೆಯಬೇಕಾಗಿದೆಯೋ ಅದರೆಡೆಗೆ ಅವನ ಲಕ್ಷ್ಯವು ಊರ್ಧ್ವಮುಖಿಯಾಗುವುದು. ಈಯೆರಡನ್ನೂ ಸರಿಯಾಗಿ ಸಾಧಿಸಿದಾಗ, ಮುಳುಗುತ್ತಿರುವ ಮನುಷ್ಯನಿಗೆ ಈಜುವ (ತೇಲುವ) ಕಲೆಯನ್ನು ವಶಪಡಿಸಿಕೊಳ್ಳುವ ಮೂಲಕ ನದಿಯನ್ನು ದಾಟುವ ಅವನ ಪ್ರಯತ್ನಕ್ಕೆ ಒಂದು ಅವಕಾಶ ಸಿಗುತ್ತದೆ. ಆದರೆ, ಮುಳುಗುತ್ತಿರುವ ಮನುಷ್ಯನು ಈಗಾಗಲೇ ಬಹಳ ದಣಿದಿರುವುದರಿಂದ ಮತ್ತು ಸಹಾಯಕನ ಮೇಲೆ ಸಂಪೂರ್ಣ ಅವಲಂಬಿಸಿರುವುದರಿಂದ, ಹೇಗೆ ತೇಲಬೇಕೆಂದು ಅವನಿಗೆ ಕಲಿಸುವುದು ಅಥವಾ ತಾನೇ ಅವನನ್ನು ತೇಲಿಸಿಕೊಂಡು ಹೋಗುವವನಾಗುವುದು ಸಹಾಯಕನ ಕರ್ತವ್ಯವಾಗುವುದು.

ಒಬ್ಬ ಮುಳುಗುವ ಮನುಷ್ಯನಿಗೆ ಇನ್ನೊಬ್ಬನು ತನ್ನ ನೆರವನ್ನೊದಗಿಸಲು ತಾನೇ ‘ತೇಲುತೆಪ್ಪ’ವಾಗಿ ಅವನನ್ನು ತೇಲಿಸುವುದು ಬೇರೆ ವಿಷಯವೇ ಆಗಿದೆ; ಅದಕ್ಕೆ ಅಗತ್ಯ ಸಾಮರ್ಥ್ಯ ಮತ್ತು ಲಘುತ್ವದ ಆವಶ್ಯಕತೆಯಿದೆ. ಸೂಕ್ಷ್ಮಾತಿ ಸೂಕ್ಷ್ಮದಲ್ಲಿ ದೃಢವಾಗಿ ನೆಲೆಗೊಂಡಿರುವ ಅತ್ಯುಚ್ಚ ಸಿದ್ಧಿ ಹೊಂದಿದ ಗುರುವು ಮಾತ್ರ ತಾನೇ ತೇಲುತೆಪ್ಪವಾಗಿ ಸಹಾಯ ನೀಡಬಲ್ಲನು. ಮಹಾ ಉದ್ಧಾರಕರಾದ ಗೌತಮ ಬುದ್ಧ, ಜೀಸಸ್ ಕ್ರೈಸ್ಟ್ ಹಾಗೂ ಪ್ರವಾದಿ ಮೊಹಮ್ಮದರಂಥವರು ಅಂಥ ‘ತೇಲಿಸುವವರ’ ದೃಷ್ಟಾಂತವಾಗಬಹುದು. ಈಗಿನ ದಿನಗಳಲ್ಲಿ ಕೂಡ ಒಬ್ಬನು ಇಂತಹ ತೇಲಿಸುವವನ ಸಂಪರ್ಕದಲ್ಲಿ ಬರಬಹುದು, ಆದರೆ ಅವನನ್ನು ಗುರುತಿಸುವುದು ಬಹಳ ಕಠಿಣ.

ಅನಂತರ ಬರುವುದು, ತೇಲುವ ಕಲೆಯನ್ನು ಕಲಿಯುವ ಹಾಗೂ ಕಲಿಸುವ ಪ್ರಶ್ನೆ. ಎರಡು ಸಂಗತಿಗಳು ನಿತಾಂತ ಆವಶ್ಯಕಗಳಾಗಿವೆ. ಪ್ರಥಮ ಆವಶ್ಯಕತೆಯೆಂದರೆ ಸಹಾಯ ಮಾಡುವವನು ತೇಲುವ ಕಲೆಯಲ್ಲಿ ನಿಷ್ಣಾತನಾಗಿರಬೇಕು; ಮತ್ತು ಎರಡನೆಯದೆಂದರೆ, ಸಹಾಯಕನು, ನಿರಂತರ ಸಹಾಯ ನೀಡುವ ಮೂಲಕ ಮುಳುಗುತ್ತಿರುವ ಮನುಷ್ಯನ ಬಳಲಿಕೆ ಹಾಗೂ ಅಶಕ್ತತೆಯನ್ನು ನಿವಾರಿಸಲು ಶಕ್ತನಾಗಿರಬೇಕು. ಇದಕ್ಕೆ ಕೂಡ, ತಾನು ಸ್ವತಃ ಮುಕ್ತನಾದ ಹಾಗೂ ಸಾಕ್ಷಾತ್ಕಾರ ಹೊಂದಿದ ಹಾಗೂ ಆಧ್ಯಾತ್ಮಿಕ ಮಾರ್ಗದಗುಂಟ ನಡೆಯಲು ಅಭ್ಯಾಸಿಗಳಿಗೆ ತರಬೇತಿ ನೀಡುವ ಕಲೆಯಲ್ಲಿ ನಿಷ್ಣಾತನಾದ ಗುರುವನ್ನು ಅವಲಂಬಿಸಬೇಕೇ ಹೊರತು ಬೇರೆ ಯಾರನ್ನೂ ಅಲ್ಲ.

ಅಂತಿಮವಾಗಿ, ತೇಲುವ ಕಲೆಯ ಬಗ್ಗೆ, ಅಂದರೆ, ಸಾಧನೆಯ ಪದ್ಧತಿಯ ಬಗ್ಗೆ ಆಲೋಚಿಸೋಣ, ಬೋಧನೆಯ ಯಾವುದೇ – ವಿಧಾನವು, ಧ್ಯೇಯವಾಗಿರಿಕೊಂಡ ಗುರಿಯ ಪ್ರಾಪ್ತಿಗಾಗಿ ಅತ್ಯಂತ ಸೂಕ್ತವಾಗಿರಲು, ಅದು ಸರಳವೂ, ಸುಲಭವೂ ಮತ್ತು ಸ್ವಾಭಾವಿಕವೂ (ನೈಸರ್ಗಿಕವಾದುದೂ) ಇರಬೇಕು. ಈ ಅಗತ್ಯತೆಗಳಿಗೆ ಸಲ್ಲಲು ಸೂಕ್ತವಾಗಿರುವುದೆಂದರೆ ‘ಸಹಜಮಾರ್ಗ’ ಅಥವಾ ‘ನೈಸರ್ಗಿಕ’ ವಿಧಾನವೊಂದೇ ಆಗಿದೆ. ಈ ಪದ್ಧತಿಯ ಸುಲಭತೆ, ಸರಳತೆ ಮತ್ತು ಸಹಜತೆಗಳು ನಿಚ್ಚಳವಾಗಿವೆ. ಅದರ ಕಾರ್ಯ ಸಾಮರ್ಥ್ಯವನ್ನು, ಅದನ್ನು ಅನುಸರಿಸಿ ಅಭ್ಯಾಸ ಮಾಡುವುದರಿಂದ ಮಾತ್ರವೇ ಅರಿಯಬಹುದು. ಕಡುಬನ್ನು ತಿಂದಾಗಲೇ ಅದರ ರುಚಿ ತಿಳಿಯುವುದು.