(ಪ್ರಾಚೀನ ಧರ್ಮ ಮತ್ತು ಯೋಗದ ಪರಿಕಲ್ಪನೆಯಲ್ಲಿ ಪರಿಶೋಧಿಸಿ)

1. ನಾವು ಹೃದಯದ ಮೇಲೆ ಧ್ಯಾನ ಮಾಡುವುದರಿಂದ ಪ್ರಾರಂಭಿಸುತ್ತೇವೆ.

ಹೃದಯಸ್ಥನಾದ ಭಗವಂತನ ಪಾರಮ್ಯವನ್ನು ಜಗತ್ತಿನ ಎಲ್ಲ ಪವಿತ್ರ ಶಾಸ್ತ್ರ ಗ್ರಂಥಗಳೂ ಮಾನ್ಯ ಮಾಡಿವೆ. ಹೃದಯವೇ ಎಲ್ಲ ಜೀವಚೈತನ್ಯದ ಕೇಂದ್ರವೆಂಬುದನ್ನು ಸುಲಭವಾಗಿ ಊಹಿಸಬಹುದು. ಪ್ರತಿಯೊಬ್ಬನೂ ಹೃದಯ ಮತ್ತು ಅದರ ಮಹತ್ತ್ವವನ್ನು ಅರಿತಿರುವನು.

ಹೃದಯಸ್ಥನಾದ ‘ವಾಸುದೇವ’ – ಪರಮಾತ್ಮನ ಕಲ್ಪನೆಯ ಮೇಲೆ ಧ್ಯಾನ ಮಾಡಲು ಎಲ್ಲ ಪ್ರಾಚೀನ ಋಷಿಗಳೂ ವಿಧಿಸಿದ್ದಾರೆ. ಎಲ್ಲ ಸೂಫಿ ಪಂಥದವರೂ ಧ್ಯಾನಕ್ಕಾಗಿ ಹೃದಯವನ್ನು ತೆಗೆದುಕೊಳ್ಳುತ್ತಾರೆ.

2. ಭಗವಂತನ ‘ಸರ್ವವ್ಯಾಪೀ ಪ್ರಕಾಶ’ದ ಕಲ್ಪನೆಯನ್ನೇ ಧ್ಯಾನಕ್ಕಾಗಿ ಏಕೆ ಆಯ್ಕೆ ಮಾಡಿಕೊಳ್ಳಬೇಕು ? ಹಾಗೂ, ನಾವು ಬೇರೆ ಕಲ್ಪನೆಗಳ ಮೇಲೆ ಏಕೆ ಧ್ಯಾನ ಮಾಡಕೂಡದು ?

ಏಕೆಂದರೆ ಅಭ್ಯಾಸ ಮಾಡಲು ಇದು ಅತ್ಯಂತ ಸುರಕ್ಷಿತವೂ ಹಾಗೂ ಭಾವಿಸಲು ಸುಲಭವೂ ಆಗಿದೆ. ಇನ್ನೊಂದು ಕಾರಣವೆಂದರೆ, ಬೇರೆ ವಿಧಾನಗಳನ್ನು ಅನುಸರಿಸಿದ್ದಾದರೆ ದೋಷಯುಕ್ತ ಕಲ್ಪನೆಗಳಿಗೆ ಬರುವ ಸಾಧ್ಯತೆಯುಂಟು.

ಕೆಲವು ಸಂತರು, ಇಷ್ಟವಿಲ್ಲದಿದ್ದರೂ ಧ್ಯಾನದ ಬೇರೆ ವಿಧಾನಗಳನ್ನು ಅನುಸರಿಸಿದರು ಹಾಗೂ ಭ್ರಾಂತಿಯಲ್ಲಿ ಸಿಕ್ಕಿಬಿದ್ದರು. ಉದಾಹರಣೆಗಾಗಿ ಕೆಲವು ಸಂದರ್ಭಗಳಲ್ಲಿ ‘ಅಹಂ ಬ್ರಹ್ಮಾಸ್ಮಿ’ಯು ಆ ಶಬ್ದಗಳ ಪುನರುಚ್ಚಾರ ಮಾಡುವ ತಿಳಿವಳಿಕೆಯಿಲ್ಲದ ತೀರ್ಮಾನಕ್ಕೆ ಅಥವಾ ತಾನೇ ಬ್ರಹ್ಮ ಎಂಬ ಭ್ರಮೆಗೆ ಕಾರಣವಾದ ಅಹಂಕಾರ ಹಾಗೂ ಸ್ಥೂಲತೆಯಲ್ಲಿ ಪರ್ಯವಸಾನಗೊಂಡಿತು.

ಇನ್ನು ಕೆಲವು ಪ್ರಸಂಗಗಳಲ್ಲಿ ಸತ್-ಚಿತ್-ಆನಂದ ಸ್ವರೂಪವನ್ನು ‘ಅತಿಮಾನಸ’ವೆಂದು ತಿಳಿಯಲಾಯಿತು, ಮತ್ತು ಭೌತಿಕ ಸ್ತರಕ್ಕೆ ತಂದಾಗ ಅದು ಶರೀರದ ಅಮರತ್ವದ ವ್ಯರ್ಥ ಕಲ್ಪನೆಯಲ್ಲಿ ಕೊನೆಗೊಂಡಿತು.

ಮತ್ತೆ ಇನ್ನು ಕೆಲವು ಪ್ರಸಂಗಗಳಲ್ಲಿ ಅನಂತ ಏಕ’ದ ಕಲ್ಪನೆಯು ಬಹಳ ಗೊಂದಲವನ್ನುಂಟುಮಾಡಿತು ಹಾಗೂ ‘ಭಗವಂತನ ಮಾಯೆ’ಯ ಬಲೆಯಲ್ಲಿ ಸಿಕ್ಕಿ ಬೀಳುವುದರಲ್ಲಿ ಪರಿಣಮಿಸಿತು. ಅಲ್ಲದೆ, ‘ಅವ್ಯಕ್ತ’ ಮತ್ತಿತರ ಕಲ್ಪನೆಗಳ ಸ್ಥಿತಿಯೂ ಅದೇ ಆಯಿತು.

ಅದೇನೇ ಇದ್ದರೂ, ಈ ಎಲ್ಲ ಸ್ವರೂಪಗಳು ಒಂದೇ ಬಗೆಯಾಗಿವೆ. ವೈಯಕ್ತಿಕ ಮನಸ್ಸಿನ ಸೀಮಿತತೆಯೇ ಎಲ್ಲ ವ್ಯತ್ಯಾಸಗಳಿಗೆ ಕಾರಣ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ಹೃದಯದಲ್ಲಿರುವ ಸರ್ವವ್ಯಾಪಿಯಾದ ದೈವೀ ಪ್ರಕಾಶದ ಮೇಲೆ ಧ್ಯಾನ ಮಾಡುವವರು ನಿಶ್ಚಿತವಾಗಿಯೂ ಇತರ ವಿಧಾನಗಳ ಸ್ಥಿತಿಗಳ ಅನುಭವವನ್ನು ಕೂಡ ಹೊಂದುವರು ಹಾಗೂ ‘ಪರತತ್ವ’ದ ಸಮಗ್ರ ಅನುಭವವನ್ನೂ ಕೊನೆಯಲ್ಲಿ ಹೊಂದುವರು. ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ಸರಿಯಾದ ಮಾರ್ಗವನ್ನು ಆಯ್ದುಕೊಂಡಾಗ ಹಾಗೂ ಆಯ್ದುಕೊಂಡ ಮಾರ್ಗವು ಸ್ವಾಭಾವಿಕ ಅಥವಾ ಸಹಜವಾದ ಮಾರ್ಗವಿದ್ದಾಗಲೇ ಈ ಮೇಲೆ ಹೇಳಿದುದು ಸಾಧ್ಯವಾಗುವುದು.

3. ಧ್ಯಾನವು ‘ಶಿವ’ ರೂಪದಲ್ಲಿರುವುದು ಏಕೆಂದರೆ ಅದು ನಿಃಶಬ್ದ ಮತ್ತು ಶಾಂತವಾಗಿರುವುದು. ಅದು ‘ರುದ್ರ’ನ ಸ್ವರೂಪದಲ್ಲಿರುವುದು, ಏಕೆಂದರೆ, ಅದು ಪ್ರಲಯದ ಸ್ಥಿತಿಯನ್ನುಂಟು ಮಾಡುವುದು ಹಾಗೂ ಎಲ್ಲ ಜಟಿಲತೆಗಳನ್ನು ನಾಶ ಮಾಡುವುದು. ಅದು ‘ಬ್ರಹ್ಮ’ ಸ್ವರೂಪವನ್ನು ಹೊಂದಿದೆ ಏಕೆಂದರೆ ಅದು ಬೆಳೆಯುತ್ತದೆ, ವಿಸ್ತಾರಗೊಳ್ಳುತ್ತದೆ ಮತ್ತು ಹೊಸ ಜೀವನವನ್ನು ಸೃಷ್ಟಿಸುತ್ತದೆ.

4. ಧ್ಯಾನದ ಆತ್ಯಂತಿಕ ಫಲವೆಂದರೆ, ಪರಮಾತ್ಮನೊಂದಿಗಿನ ಐಕ್ಯದ – ಸಾಕ್ಷಾತ್ಕಾರ ಮತ್ತು ಆ ಸ್ಥಿತಿಯಲ್ಲಿ ಶಾಶ್ವತವಾಗಿ ನೆಲೆಸಿರುವುದು.

ವ್ಯಕ್ತಿಯ (ತನ್ನದೇ) ಚಿಕ್ಕ ಸೃಷ್ಟಿಯನ್ನು ಹಾಗೂ ಪೃಥಕ್- ವ್ಯಕ್ತಿತ್ವವನ್ನು ಸಂಪೂರ್ಣ ತಿ ಲಯಗೊಳಿಸುವುದರಿಂದ ಇದು ಸಾಧಿತವಾಗುವುದು. ಇದು ಪ್ರಾಪ್ತವಾಗುವುದರಿಂದ ಒಬ್ಬನು ಯಾವುದೇ ತರಹದ ಪ್ರಯತ್ನ, ಹೋರಾಟ ಅಥವಾ ಚಲನದಿಂದ ಮುಕ್ತನಾಗುವನು.

5. ಮಾರ್ಗದರ್ಶಿ (ಗುರು) ಮತ್ತು ಪ್ರಾಣಾಹುತಿಯು ಇದರ ಎರಡು ಮುಖ್ಯ ಸಾಧನಗಳು.

ಯಾರು ಎಲ್ಲ ಮಲಿನತೆಗಳಿಂದ, ಭ್ರಮೆಗಳಿಂದ ಹಾಗೂ ಆವರಣಗಳಿಂದ ಮುಕ್ತನಾಗಿರುವನೋ ಹಾಗೂ ಯಾರು ನಿರಸನ ಸ್ಥಿತಿಯಲ್ಲಿ ಶಾಶ್ವತವಾಗಿ ನೆಲೆಸಿರುವನೋ, ಅಂತಹವನನ್ನು ಗುರುವಾಗಿ ಆರಿಸಿಕೊಳ್ಳಬೇಕು.
ಮಾರ್ಗದರ್ಶಿಯು (ಗುರುವು), ಪ್ರಾಣಾಹುತಿ ಶಕ್ತಿಯಿಂದ ಜಿಜ್ಞಾಸುವಿನ ಎಲ್ಲ ತೊಡಕುಗಳನ್ನೂ ನಿವಾರಿಸುವನು ಹಾಗೂ ಅವನನ್ನು ಉಚ್ಚ ಸ್ತರಗಳಿಗೆ ಶೀಘ್ರವಾಗಿ ಮುಂದೂಡುವನು.

6. ಚಿಂತನ ಶಕ್ತಿಯು ಮಾನವನಲ್ಲಿರುವ ಅತ್ಯಂತ ಶ್ರೇಷ್ಠ ಶಕ್ತಿಯಾಗಿದೆ. ಯಾವ ಶಕ್ತಿಯಿಂದ ಪರಮಾತ್ಮನು ವಿಶ್ವವನ್ನು ಸೃಷ್ಟಿಸಿದನೋ ಅದೇ ಚಿಂತನಶಕ್ತಿಯನ್ನು ಉಪಯೋಗಿಸಿ ಮನುಷ್ಯನು ತನ್ನ ಚಿಕ್ಕ ಸೃಷ್ಟಿಯನ್ನು ನಿರ್ಮಿಸುತ್ತಾನೆ.

ಚಿಂತನಶಕ್ತಿಯನ್ನು ದೈವತ್ವದೊಂದಿಗೆ ಜೋಡಿಸಿದ್ದಾದರೆ, ಆಲೋಚನೆ ಸ್ವಾಭಾವಿಕ ರೀತಿಯಲ್ಲಿ ಕೆಲಸ ಮಾಡತೊಡಗುವನು, ಹಾಗೂ ಆಲೋಚನೆ (ವಿಚಾರ)ದಿಂದ ಉದ್ಭವಿಸಿದುದೆಲ್ಲವೂ ನಿಸರ್ಗದೊಂದಿಗೆ ಸಂಪೂರ್ಣ ಸಾಮರಸ್ಯ ಹೊಂದಿರುವುದು.

ನಾವು ನಮ್ಮ ಚಿಂತನವನ್ನು ಭೌತಿಕ ವಸ್ತು ಹಾಗೂ ಸ್ಥೂಲ ಶರೀರದೊಂದಿಗೆ ಜೋಡಿಸಿದ್ದರಿಂದ ಆ ಚಿಂತನವು ತನ್ನ ಮೂಲ ಶಕ್ತಿಯನ್ನು ಕಳೆದುಕೊಂಡಿತು. ಹಾಗೂ ಸ್ಥೂಲವಾಯಿತು. ನಾವು ನಮ್ಮ ಮೂಲ ಸ್ಥಿತಿಯನ್ನು ಹಾಗೂ ಸೂಕ್ಷ್ಮತೆಯನ್ನು ಮರಳಿ ಪಡೆಯಬೇಕೆಂದರೆ ಅದನ್ನು ಸದ್ಯದ ತೊಡಕಿನಿಂದ ಬೇರ್ಪಡಿಸಿ, ಅತ್ಯಂತ ಸೂಕ್ಷ್ಮವಾದುದಕ್ಕೆ ಜೋಡಿಸಬೇಕು.

ಆದರೆ, ನಮ್ಮ ಆಲೋಚನೆಯನ್ನು ಅದರ ಸದ್ಯದ ತೊಡಕಿನಿಂದ ಬೇರ್ಪಡಿಸುವುದು ನಮಗೆ ಅತ್ಯಂತ ಕಷ್ಟದಾಯಕವಾಗಿದೆ. ಅದಕ್ಕಾಗಿಯೇ ನಾವು ಹೋರಾಟದ ಒತ್ತಡ ಹಾಗೂ ಕಷ್ಟವನ್ನು ಅನುಭವಿಸುತ್ತೇವೆ. ಅತ್ಯಂತ ಸೂಕ್ಷ್ಮ ಸ್ಥಿತಿಯಲ್ಲಿ ನೆಲೆಗೊಂಡ ಒಬ್ಬ ವ್ಯಕ್ತಿಯನ್ನು ನಾವು ತೀವ್ರವಾಗಿ ಪ್ರೇಮಿಸಬಲ್ಲೆವಾದರೆ ಇದನ್ನು ಅತಿ ಸುಲಭವಾಗಿ ಸಫಲವಾಗುವಂತೆ ಮಾಡಬಹುದು.

ಅದಿಲ್ಲವಾದರೆ, ಪರಮ ಪ್ರಭುವಿನ ಅತ್ಯಂತ ಸೂಕ್ಷ್ಮತಮ ಒಂದು ಸ್ವರೂಪವನ್ನು ಕಲ್ಪಿಸಿ ಅದರ ಮೇಲೆ, ಅಂತಹ ಒಬ್ಬ ವ್ಯಕ್ತಿಯ ಸಹಾಯದೊಂದಿಗೆ ಧ್ಯಾನ ಮಾಡಬೇಕು.

ಧ್ಯಾನಕ್ಕೋಸ್ಕರ ತೆಗೆದುಕೊಳ್ಳತಕ್ಕ ಸ್ವರೂಪ (ಕಲ್ಪನೆ) ವು ಕಲ್ಪಿಸಿಕೊಳ್ಳಲು ಸುಲಭವೂ ಮತ್ತು ಅಭ್ಯಾಸಕ್ಕೆ ಸುರಕ್ಷಿತವೂ ಆಗಿರಬೇಕು. ಇದು ಸರ್ವವ್ಯಾಪವಾದ ಪ್ರಭೆ ಅಥವಾ ಪ್ರಕಾಶ ಅಥವಾ ಹೃದಯದಲ್ಲಿ ಪ್ರಭುವಿನ ಜ್ಯೋತಿರ್ಮಯ ಸರ್ವ ವ್ಯಾಪಕತೆ ಮಾತ್ರವೇ ಆಗಿರಲು ಸಾಧ್ಯ.

7. ನಾವು ಈ ‘ವಿಚಾರರಾಹಿತ್ಯ’ದ ಸ್ಥಿತಿಯನ್ನು ನಾವು ಗುರಿಯಾಗಿ ಇಟ್ಟುಕೊಳ್ಳತಕ್ಕದ್ದಲ್ಲ; ಬದಲಿಗೆ, ಚಿತ್ತ ಸರೋವರದಲ್ಲಿ ಏಳುವ ವಿಚಾರಗಳನ್ನು ಶುದ್ಧಗೊಳಿಸಬೇಕು ಮತ್ತು ಕ್ರಮಬದ್ಧಗೊಳಿಸಬೇಕು. ಈ ಶುದ್ದೀಕರಣ ಮತ್ತು ಕ್ರಮಬದ್ಧಗೊಳಿಸುವುದು, ಗುರುಗಳೊಂದಿಗೆ ಸಹಕರಿಸುವುದರಿಂದ ಸಾಧಿಸಲಾಗುತ್ತದೆ.
ಸಹಕಾರ ಎಂದರೆ ಶ್ರದ್ಧೆ ಮತ್ತು ಆತ್ಮ ವಿಶ್ವಾಸಗಳಿಂದ ಗುರುವಿಗೆ ಸಮರ್ಪಿತನಾಗುವುದು. ಗುರುವನ್ನು ಕುರಿತ ಉತ್ಕಟ ಪ್ರೇಮವು ಈ ಶರಣಾಗತಿಯನ್ನು ಸ್ವಾಭಾವಿಕವಾಗಿ ಉಂಟುಮಾಡುವುದು.

8. ಒಂದಾದ ನಂತರ ಒಂದಾಗಿ ಬರುವ ತರಂಗಗಳು ನಮ್ಮ ಹೃದಯದಲ್ಲಿ ಉಕ್ಕಿ ಬರುವಾಗ, ಗುರುವಿನ ಚರಣಗಳಲ್ಲಿ ನಮ್ಮನ್ನು ನಾವೇ ಸಮರ್ಪಿಸಿಕೊಳ್ಳ ಬಯಸುತ್ತೇವೆ. ನಾವು ಅವನ ಚರಣಗಳನ್ನು ಭದ್ರವಾಗಿ ಹಿಡಿದುಕೊಳ್ಳ ಬಯಸುತ್ತೇವೆ. ಗುರುಗಳ ವಿಷಯದ ಕಥೆಗಳನ್ನು ಹಾಡಬಯಸುತ್ತೇವೆ. ಗುರುವಿನ ಕಥೆಗಳನ್ನು ಕೇಳುವುದರಲ್ಲಿ ನಮಗೆ ಹೆಚ್ಚು ಹೆಚ್ಚು ಸಂತೋಷವಾಗುವುದು. ಗುರುವಿಗೆ ನಮ್ಮ ಸರ್ವಸ್ವವನ್ನೂ ಅರ್ಪಿಸಲು ಪ್ರಬಲ ಆಕಾಂಕ್ಷೆ ಉಂಟಾಗುವುದು. ಗುರುವಿನ ಆಲೋಚನೆಯಿಂದ ನಾವು ಮೂಕರಾಗುವೆವು. ಹಾಗೂ ಚಕಿತರಾಗುವೆವು. ಸಂಕ್ಷೇಪದಲ್ಲಿ ಹೇಳುವುದಾದರೆ, ನಾವು ನಮ್ಮ ಹೃದಯವನ್ನೇ ಗುರುವಿಗೆ ಅರ್ಪಿಸುತ್ತೇವೆ.

ಈಗ ಗುರುವಿನಲ್ಲಿ ಐಕ್ಯ ಹೊಂದುವುದರ ಹೊರತಾದ ಎಲ್ಲ ಇಚ್ಛೆಗಳು ನಮಗೆ ವಿದಾಯ ಹೇಳುವುವು. ನಾವು ದೇಹ ಪ್ರಜ್ಞೆಯನ್ನು ಕಳೆದುಕೊಳ್ಳುವೆವು. ಮತ್ತು ಆತ್ಮ-ಪ್ರಜ್ಞೆಯನ್ನೂ ಕೂಡ. ಅಂದರೆ, ಗುರುವಿನ ವಿಚಾರವೂ ಮರೆಯಾಗುವುದು. ಆಗ ನಾವು ಪ್ರಾರ್ಥನೆಯನ್ನಾಗಲಿ, ಪೂಜೆಯನ್ನಾಗಲಿ ಮಾಡಲಾರೆವು ನಮಗೆ ಕಂಡುಬರುತ್ತದೆ. ಸಂಪೂರ್ಣ ನಿರಸನದಲ್ಲಿ ನಾವು ಈಜತೊಡಗುವೆವು ಎಂದು ಹೇಳಬಹುದು.

ಇದುವೇ ಧರ್ಮ ಮತ್ತು ಯೋಗದ ಅತ್ಯುನ್ನತ ಸ್ಥಿತಿಗೇರುವುದಾಗಿದೆ.