“ಪ್ರಕೃತಿಗೆ ಈಗ ಪರಿವರ್ತನೆ ಒಂದು ಪರಿಪೂರ್ಣ ಪುನರ್ವ್ಯವಸ್ಥೆ ಬೇಕಾಗಿದೆ; ಹಾಗೂ ಈ ಉದ್ದೇಶಕ್ಕಾಗಿ ವಿಭೂತಿ ಪುರುಷನು ಈಗಾಗಲೇ ಜನ್ಮತಾಳಿರುವನು ಮತ್ತು ತನ್ನ ಕಾರ್ಯದಲ್ಲಿ ತೊಡಗಿದ್ದಾನೆ.” (ಸುಮಾರು 1944ರ ಕೊನೆಯ ಭಾಗದಿಂದ.) ಎಂದು ಗುರುಮಹಾರಾಜರು ‘ಸಹಜ ಮಾರ್ಗದರ್ಶನ’ದಲ್ಲಿ ‘ರಾಜಯೋಗದ ಪ್ರಭಾವ’ ದಲ್ಲಿ ಹೇಳಿದ್ದಾರೆ. “ಈ ಗ್ರಂಥದಲ್ಲಿ ಉಲ್ಲೇಖಿಸಲಾದ ಪರಿವರ್ತನ ಕಾರ್ಯದಲ್ಲಿ ಪ್ರವೃತ್ತನಾದ ವ್ಯಕ್ತಿಯು ಉತ್ತರಭಾರತದಲ್ಲಿ ಎಲ್ಲಿಯೋ ಅಸ್ತಿತ್ವದಲ್ಲಿದ್ದಾನೆ, ಮತ್ತು ಅದಕ್ಕಾಗಿ ಪ್ರಾಮಾಣಿಕವಾಗಿ ಧ್ಯಾನ ಮಾಡುವವನು ಅವನನ್ನು ಕಂಡುಕೊಳ್ಳಬಹುದು, ಅಥವಾ ಅವನೊಂದಿಗೆ ಅತೀಂದ್ರಿಯ ಸಂಪರ್ಕದ ಮೂಲಕ ನಿಜವಾದ ಅಂತಃಸಲ್ಲಾಪ ಮಾಡುವವನಿಗೆ ಪ್ರಕಟನಾಗುವನು.” – ಎಂದು ಇದೇ ಗ್ರಂಥದಲ್ಲಿ ಬರೆಯಲಾಗಿದೆ. ಇದು ಸ್ವಾಭಾವಿಕವಾಗಿಯೇ ಕೆಲವು ಓದುಗರಲ್ಲಿ ಕುತೂಹಲ ಉಂಟು ಮಾಡಿತು. ಹಾಗೂ ಕೆಲವರು ನಿಜಕ್ಕೂ ಅವನ ಶೋಧದಲ್ಲಿ ತೊಡಗಲು ಪ್ರೇರೇಪಿಸಲ್ಪಟ್ಟರು. ಒಬ್ಬನಿಜವಾದ ಜಿಜ್ಞಾಸುವಿಗೆ ತಾನೇ ಶೋಧಿಸಬೇಕೆಂದರೆ ಮೂರು ಸಮಸ್ಯೆಗಳುಂಟು. ನಿಸರ್ಗವು ಬಯಸುವ ಪರಿವರ್ತನೆ ಯಾವುದು? ಯಾರು ಅದಕ್ಕೋಸ್ಕರ ಕೆಲಸ ಮಾಡುತ್ತಿರುವರು? ಅವನ ಕೆಲಸದ ವಿಧಾನ ಯಾವುದು? ಒಬ್ಬನು ಈ ಪ್ರಶ್ನೆಗಳ ಬಗ್ಗೆ ಗಾಢವಾಗಿ ವಿಚಾರ ಮಾಡುತ್ತ ಹೋದರೆ, ಆದರೆ ಅದನ್ನು ಸ್ವೀಕರಿಸಲು ತನ್ನನ್ನು ತಾನು ಸಿದ್ಧಗೊಳಿಸಿಕೊಂಡಿಲ್ಲವಾದರೆ, ಅವನಿಗೆ ಅದರ ತಿಳಿವಳಿಕೆ ಕೂಡಲೇ ಉಂಟಾಗದು. ಆದ್ದರಿಂದ, ಮುಂಬರುವ ಮಹಾ ಕಾರ್ಯಕ್ಕಾಗಿ ತನ್ನನ್ನು ತಾನು ಸಿದ್ಧಗೊಳಿಸುವುದು ಅತ್ಯಗತ್ಯವಾಗುತ್ತದೆ. ಅದನ್ನು ಮಾಡುವುದು ಹೇಗೆ?

ಸಾಕ್ಷಾತ್ತಾಗಿ ಓದಿ ತಿಳಿಯುವಂತೆ ನಿಸರ್ಗವನ್ನು ಅರಿಯುವುದು ಬಹಳ ಕಷ್ಟ. ನಿಸರ್ಗವು ಯಾವುದನ್ನೂ ರಹಸ್ಯವಾಗಿ ಇಡುವುದಿಲ್ಲವಾದರೂ ಮಾನವ ಮನಸ್ಸು ಅದನ್ನು ಗ್ರಹಿಸಲು ತಾನು ಅಸಮರ್ಥ ಎಂದು ಭಾವಿಸುವುದು. ನಿಸರ್ಗವನ್ನು ಅರಿಯಲು ಅಸಮರ್ಥವಾಗಿರುವುದು ಮನಸ್ಸಿನ ನ್ಯೂನತೆಯೇ ಆಗಿದೆ ಎಂಬುದು ಸ್ಪಷ್ಟ. ಮಾನವನ ಮನಸ್ಸು ಏನನ್ನಾದರೂ ಗ್ರಹಿಸಲು ಯತ್ನಿಸಿದಾಗ, ಅದಕ್ಕೊಂದು ತಾತ್ಕಾಲಿಕ ಕೇಂದ್ರ ಅಥವಾ ಒಂದು ಪ್ರವೇಶ ಬಿಂದುವನ್ನು ನಿರ್ಮಿಸಿಕೊಳ್ಳಲಾಗುವಂತೆ ಅದರ ಚಟುವಟಿಕೆಗಳು ಮರುವ್ಯವಸ್ಥೆಗೊಳ್ಳುವವು. ಮನಸ್ಸಿನ ದೋಷಪೂರಿತ ತರಬೇತಿಯಿಂದಾಗಿ ಅದರ ಚಟುವಟಿಕೆಗಳು ಎಷ್ಟು ಗೊಂದಲವುಳ್ಳವೂ, ಅಸ್ತವ್ಯಸ್ತವೂ ಆಗಿರುವವೆಂದರೆ, ಅದರ ದೃಷ್ಟಿಯಲ್ಲಿ ಪ್ರತಿಕ್ಷಣವೂ ಒಂದು ತಪ್ಪಾದ (ನೈಜವಲ್ಲದ) ಕೇಂದ್ರವಿರುವುದು. ಮತ್ತೆ, ಈ (ಹುಸಿ) ಕೇಂದ್ರವೂ ಬದಲಾಗುತ್ತ ಹೋಗುತ್ತಿದ್ದು, ಬೇರೆ ಬೇರೆ ಕ್ಷಣಗಳಲ್ಲಿ ಬೇರೆ ಬೇರೆ ರೂಪ ತಾಳುವುದು. ಆದುದರಿಂದ, ಗ್ರಹಿಕೆಗೆ ಬಂದುದೆಲ್ಲವೂ (ಜ್ಞಾತವಾದುದೆಲ್ಲವೂ) ಮಿಥ್ಯ, ಹಾಗೂ ಇಡೀ ವಿಶ್ವವೇ ಒಂದು ‘ಭ್ರಮೆ’ ಎಂಬ ತಾರ್ಕಿಕ ನಿರ್ಣಯಕ್ಕೆ ತಲುಪುವುದು. ಈ ಹಂತದಲ್ಲಿ ಮಾನವನ ಶೋಧವು. ಹತಾಶೆಗೀಡಾಗದೆ ಮುಂದುವರಿದರೆ, ಅವನ ಮನಸ್ಸಿನ ಚಟುವಟಿಕೆಗಳು ಒಂದು, ತುಲನಾತ್ಮಕವಾಗಿ ಹೆಚ್ಚು ಸ್ಥಿರವಾದ ಕೇಂದ್ರವನ್ನು ನಿರ್ಮಿಸಲು ಪ್ರಾರಂಭಿಸುವವು ಮತ್ತು ಈ ಸ್ಥಿತಿಯಲ್ಲಿ ಪ್ರಾಪ್ತವಾದ ಜ್ಞಾನವು. ಹಿಂದಿನದಕ್ಕೆ ಹೋಲಿಸಿದರೆ, ಹೆಚ್ಚು ಸ್ಪಷ್ಟವೂ ಅಸಂದಿಗ್ಧವೂ ಆಗಿರುವುದು.

ಪ್ರಕೃತಿಯಲ್ಲಿ ಕೆಲಸ ಮಾಡುತ್ತಿರುವ ಶಕ್ತಿಗಳ ವಿಷಯವೂ ಹೀಗೆಯೇ ಉಂಟು.ನಿರೀಕ್ಷಕನು ಅಶಿಕ್ಷಿತ (ತರಬೇತಿಯಿಲ್ಲದವನಿದ್ದರೆ ಅವನು ಬಹಳ ಅಸ್ತವ್ಯಸ್ತತೆ ಮತ್ತು ಗೊಂದಲವನ್ನು ಕಾಣುತ್ತಾನೆ; ಆದರೆ ನುರಿತ ವಿಜ್ಞಾನಿಯು ನಿಸರ್ಗದ ಚಟುವಟಿಕೆಗಳಿಗೆ ಕಾರಣವಾದ ನಿಯಮಗಳನ್ನು ಅನ್ವೇಷಣೆ ಮಾಡುತ್ತಾನೆ; ತೋರಿಬರುವ ದೊಡ್ಡ ಅಸ್ತವ್ಯಸ್ತತೆಯ ಅಡಿಯಲ್ಲಿರುವ ಪರಿಪೂರ್ಣ ಕ್ರಮಬದ್ಧತೆಯನ್ನು ಕಾಣುತ್ತಾನೆ. ಕಾರಣವು ಕಾರ್ಯ(ಪರಿಣಾಮ)ವನ್ನುಂಟುಮಾಡುವ ನಿಯಮ, ಮತ್ತು ‘ಕಾರ್ಯ’ (ಪರಿಣಾಮವು) ಮುಂದಿನ , ಚಟುವಟಿಕೆಗಳಿಗಾಗಿ ‘ಕಾರಣ’ ಆಗುವ ಅಥವಾ ಉಂಟುಮಾಡುವ  ಏಕೈಕ ವೈಶ್ವಿಕ ನಿಯಮವಾಗಿದೆ, ಹಾಗೂ ಕಾರಣ-ಕಾರ್ಯ ಸಾಪೇಕ್ಷ ಸಂಬಂಧದ ಒಂದು ವಿಷವೃತ್ತವಿದೆ, ಹಾಗೂ, ‘ಅಂತಿಮ ಸತ್ಯ’ ಅಥವಾ ‘ಮೂಲ ಕಾರಣ’ ಎನ್ನುವುದು ಮಾನವನ ಊಹೆಯ ಕಟ್ಟುಕತೆಯಾಗಿದೆ ಎಂಬ ಅಂತಿಮ ನಿರ್ಣಯಕ್ಕೆ ಬರುತ್ತಾನೆ. ತತ್ತ್ವಜ್ಞಾನಿಯು ಇನ್ನೂ ಮುಂದೆ ಸಾಗುತ್ತಾನೆ ಮತ್ತು ತನ್ನ ಅನ್ಯೂನ ತರ್ಕಸರಣಿ ಮತ್ತು ಊಹೆಗಳಿಂದ ವಿಶ್ವದ ಪೂರ್ವಕಲ್ಪಿತ ವಿನ್ಯಾಸದಲ್ಲಿ, ತನ್ನದೇ ಮನವರಿಕೆಯ ಹಾಗೂ ಶ್ರದ್ಧೆಯ ಸತ್ಯತೆಯನ್ನು ಸಿದ್ಧಮಾಡುತ್ತಾನೆ. ಈ ರೀತಿ ವಿಜ್ಞಾನಿಗಳು ಹಾಗೂ ತತ್ತ್ವಜ್ಞಾನಿಗಳು ನಿಸರ್ಗವನ್ನು ದರ್ಶಿಸುತ್ತಾರೆ ಹಾಗೂ ಅದನ್ನು, ಸಾಮಾನ್ಯ ಮನುಷ್ಯನು ಅದೇನಿರಬಹುದೆಂದು ಭಾವಿಸುವನೋ ಅಷ್ಟೇ, ಅಥವಾ ಅದಕ್ಕೂ ಹೆಚ್ಚು ಕ್ಲಿಷ್ಟವಾದ ಮತ್ತು ಗಲಿಬಿಲಿಗೊಳಿಸುವ ರೀತಿಯಲ್ಲಿ ಚಿತ್ರಿಸುತ್ತಾರೆ. ಒಬ್ಬ ವಿಜ್ಞಾನಿ ಅಥವಾ ತತ್ತ್ವಜ್ಞಾನಿ ಒಂದು ಜಿಗಿತ ಮುಂದುವರಿದರೆ, ವಾಸ್ತವವಾಗಿ ಸರಳವೂ ಮತ್ತು ಸ್ಪಷ್ಟವೂ ಆಗಿರುವನಿಸರ್ಗದ ಸತ್ಯತೆಯನ್ನು ಕಂಡುಹಿಡಿಯುತ್ತಾನೆ. ಅಲ್ಲದೆ, ನಿಸರ್ಗದ ನಿರ್ಮಾಧ್ಯಮ (ನೇರವಾದ) ಅವಲೋಕನದಿಂದ ಬಂದುದಾಗಿರುವುದರಿಂದ ಅವನ ಆ ಜ್ಞಾನವು ಸಾಕ್ಷಾತ್ ಆದುದೂ, ದೋಷರಹಿತವೂ ಆಗಿರುತ್ತದೆ.

ವಿಜ್ಞಾನಿಗಳು ಕಂಡು ಹಿಡಿದಿರುವಂತೆ ಸ್ಥಿರ (ಬದಲಾವಣೆಗೊಳಗಾಗದ) ನಿಯಮಗಳಿಂದ ನಿಯಂತ್ರಿಸಲ್ಪಡುವ, ಹಾಗೂ, ತತ್ತ್ವಜ್ಞಾನಿಗಳು ವರ್ಣಿಸುವಂತೆ ನಿಸರ್ಗದ ಐಚ್ಛಿಕ ಹಾಗೂ ಉದ್ದೇಶವನ್ನುಳ್ಳ ಚಟುವಟಿಕೆಗಳ ಒಟ್ಟು ಚಿತ್ರವು ತೋರಿಕೆಗೆ ಗೊಂದಲಮಯವಾಗಿ ಕಂಡುಬರುವುದಾದರೂ ಸಾಮಾನ್ಯ ಬುದ್ಧಿಮಟ್ಟದವರಿಗೆ ಸ್ವಲ್ಪಮಟ್ಟಿಗೆ ತೃಪ್ತಿ ಕೊಡಬಹುದು; ಆದರೂ, ಅದು ಅನ್ವೇಷಕ ಮನಸ್ಸಿಗೆ ಆಕರ್ಷಕವೆನಿಸದು ಮತ್ತು ಸಾಕಷ್ಟೆಂದೆನಿಸುವುದಿಲ್ಲ. ನಿಸರ್ಗದಲ್ಲಿ ನಡೆಯುವುದನ್ನು ಅದರ ಸಮಗ್ರ ಸ್ವರೂಪದಲ್ಲಿ ತಾವು ಹೇಳಬಲ್ಲೆವೆಂದು ಕೆಲವು ಯೋಗಿಗಳು ಘೋಷಿಸುತ್ತಾರೆ. ಇದೇ ಉದ್ದೇಶಕ್ಕಾಗಿ ಅಭಿವೃದ್ಧಿಗೊಂಡ ಅತಿಮಾನಸದಿಂದ ಅಥವಾ ಜಾಗ್ರತ ಕುಂಡಲಿನಿಯ ಮೂಲಕ ಅವರಿಗೆ ಈ ಜ್ಞಾನ ಪ್ರಾಪ್ತವಾಗುವುದು ಎಂದು ಅವರು ಹೇಳಿಕೊಳ್ಳುತ್ತಾರೆ. ವಿಶ್ವದ ಕುರಿತಾದ ಅವರ ವಿವರಣೆಗಳೂ ಕೂಡ ಗಹನವಾಗಿರುವುವಲ್ಲದೆ ಕೆಲವೊಮ್ಮೆ ಅತಿಕಲ್ಪನಾಮಯವೂ, ಅವಿವೇಕವೂ ಆಗಿ ತೋರುತ್ತವೆ.

ಪ್ರಾಮಾಣಿಕ ಜಿಜ್ಞಾಸುವು ಹತಾಶನಾಗಿ ಒಬ್ಬ ಜ್ಞಾನಿಯ ಬಳಿಗೆ ಓಡಬೇಕಾಗುವುದು. ಅವನನ್ನು ಹುಡುಕುವುದು ಹೇಗೆ? ಹೃದಯದಲ್ಲಿ ಅತಿಯಾದ ವೇದನೆಪಟ್ಟು ಪ್ರಾಮಾಣಿಕವಾಗಿ ಪ್ರಾರ್ಥಿಸುವುದೇ ಮಾನವಕುಲದ ಪ್ರೇಮಿಗಳೂ, ಸಹಾಯಕರೂ ಕೊಟ್ಟ ಉತ್ತರವಾಗಿದೆ. ಹಾಗಿದ್ದರೂ,ಸಹಾಯಕ್ಕಾಗಿ ಆರಿಸಿಕೊಂಡ ಮನುಷ್ಯನು ನಿಜವಾಗಿಯೂ ಯೋಗ್ಯ ವ್ಯಕ್ತಿಯಾಗಿರುವ ಬಗ್ಗೆ ಭರವಸೆಯನ್ನು ಮನಸ್ಸು ಬೇಡುತ್ತದೆ. ಅದಕ್ಕೆ ಹೃದಯವು ಉತ್ತರ ನೀಡುವುದು. ಎಲ್ಲಿ ಸ್ವಾರ್ಥದ ಹಾಗೂ ಶೋಷಣೆಯ ಲವಲೇಶವೂ ಇಲ್ಲವೋ ಅಲ್ಲಿ ಆ ವಸ್ತು ಇರುವುದು. ಹೃದಯವು ತತ್‌ಕ್ಷಣವೇ ಸ್ಥೂಲತೆ ಹಾಗೂ ಜಡತೆ ಕಳೆದು ರಿಕ್ತವಾದಂತಿರುವ ಭಾವ ತಳೆಯುವುದು. ಹಾಗೂ ಅಂತಹ ವ್ಯಕ್ತಿಯ ಸಾನ್ನಿಧ್ಯದಲ್ಲಿ ತನ್ನದೇ ಸ್ವರೂಪವಾದ ನೈಜ ಶಾಂತಿಯನ್ನು ಅನುಭವಿಸುವುದು. ಹೃದಯದಲ್ಲಿ ತಾನು ತನ್ನ ಮನೆಗೆ ಬಂದ ಒಂದು ಆಂತರಿಕ ಭಾವನ ನೆಲೆಸುವುದು. ಎಲ್ಲ ಬಂಧನಗಳೂ ಕಳಚುತ್ತಿರುವಂತೆ ಅನಿಸುವುದು. ಇಂತಹ ವ್ಯಕ್ತಿಯೊಂದಿಗಿನ ಕೆಲ ಸಮಯದ ಸಹವಾಸದಿಂದಾಗಿ ಸಂಪೂರ್ಣ ಇಚ್ಛಾರಹಿತನಾದ, ಸರಳತೆಯ,ಹಾಗೂ ನಿಷ್ಕಪಟತೆಯ ಭಾವನೆ ಬೆಳೆಯುವುದು. ದೇವರು ಅಥವಾ ವಿಶ್ವದ ಕಲ್ಪನೆ ಕೂಡ ಹೃದಯದಿಂದ ಅಳಿದು ಹೋಗುವುದು. ಅಂತಹ ಯೋಗ್ಯ ವ್ಯಕ್ತಿಯ ಸಹಾಯದಿಂದ, ಅವನು ನಿಸರ್ಗವನ್ನು (ಪ್ರಕೃತಿ) ಅವಲೋಕಿಸಿ ಅರಿಯಬಯಸುವ ಬದಲಿಗೆ, ವ್ಯಕ್ತಿಯು ಪ್ರಕೃತಿಯು ತನ್ನೆದುರಿಗೆ ತೆರೆದಿಟ್ಟ ಪುಸ್ತಕವೆಂಬಂತೆ ಸಾಕ್ಷಾತ್ತಾಗಿ ಕಾಣಬಲ್ಲನು. ಚೈತನ್ಯತತ್ತ್ವವನ್ನು (spirit) ಅರಿಯಲು ಅವನಿಗೆ ಭೌತಿಕ ಸಾಧನಗಳ ಅಥವಾ ಚಿಹ್ನೆಗಳ ಆವಶ್ಯಕತೆ ಅಥವಾ ಅನಿವಾರ್ಯತೆ ಮತ್ತೆ ಉಂಟಾಗುವುದಿಲ್ಲ. ಏಕೆಂದರೆ, ಗುರುಗಳು ಆತನನ್ನು ಆ ಹಂತಕ್ಕೆ ಕರೆದೊಯ್ದಾಗ ಅವನು ಆ ಚೈತನ್ಯತತ್ತ್ವದಲ್ಲಿಯೇ ಜೀವಿಸಲು ಮತ್ತು ಚಲಿಸಲು ಪ್ರಾರಂಭಿಸುತ್ತಾನೆ.

ಈಗ, ಮೇಲೆ ಹೇಳಿದ ವಿಭೂತಿಪುರುಷನು ಕಾರ್ಯಮಾಡುತ್ತಿರುವ ವಿಧಾನಗಳ ಬಗ್ಗೆ ನೋಡೋಣ. ನಮ್ಮ ಸದ್ಯದ ಅಸ್ತಿತ್ವದ ಸ್ತರದಲ್ಲಿ ಇವು ನಮಗೆ ಹೆಚ್ಚೇನೂ ಪ್ರಯೋಜನಕಾರಿಯಾಗದಿರಬಹುದು, ಆದರೂ ನಮ್ಮ ಕುತೂಹಲವು , ಸಮಾಧಾನ ಹೊಂದಬೇಕಾದುದು ಇನ್ನೂ ಉಳಿದಿರುತ್ತದೆ. ಅದನ್ನು ಅವನ ಮೂಲಕವೇ ಕಂಡುಕೊಳ್ಳುವುದು ಉತ್ತಮ ಮಾರ್ಗವೆನಿಸುತ್ತದೆ. ಅವನ ಕಾರ್ಯವನ್ನು ವಿವರಿಸುವುದು ಅತ್ಯಂತ ಕಠಿಣ, ಏಕೆಂದರೆ, ನಾವು ‘ಕಾರ್ಯ’ (ಕೆಲಸ) ಶಬ್ದವನ್ನು ಸಾಮಾನ್ಯವಾಗಿ ತಿಳಿಯುವ ರೀತಿಯಲ್ಲಿ (ಅರ್ಥದಲ್ಲಿ) ಅವನು ಕಾರ್ಯಗೈಯುವುದಿಲ್ಲ. ಹಾಸ್ಯಮಯವಾಗಿ ಹೇಳುವುದಾದರೆ, ಅವನು ಏನನ್ನೂ ಮಾಡದೆಯೇ ಯಾವಾಗಲೂ ಕಾರ್ಯತತ್ಪರನಾಗಿರುತ್ತಾನೆ.

ಜಗತ್ತಿಗೆ ಆವಶ್ಯಕತೆ ಉಂಟಾದಾಗಲೆಲ್ಲ, ಒಬ್ಬ ವಿಭೂತಿ- ಪುರುಷನು ಅದನ್ನು ಸರಿಪಡಿಸಲು ಹುಟ್ಟಿಬರುತ್ತಾನೆಂದು ದೇವರೇ ಭರವಸೆ ಕೊಟ್ಟಿರುವುದು ಎಲ್ಲ ಪವಿತ್ರ ಗ್ರಂಥಗಳಲ್ಲಿ ಕಂಡುಬರುತ್ತದೆ. ಅವನ ಕಾರ್ಯದ ಒಂದು ಸುಂದರ ನಿದರ್ಶನವನ್ನು ಭಗವಾನ್ ಶ್ರೀಕೃಷ್ಣನಲ್ಲಿ ಕಾಣಬಹುದು. ಮಹಾಭಾರತ ಯುದ್ಧದಲ್ಲಿ ಶ್ರೀಕೃಷ್ಣನು ನೇರವಾಗಿ ಕಾರಣನಾದುದನ್ನು ಅಥವಾ ಕ್ರಿಯಾಶೀಲ ಯೋಧನಾದುದನ್ನು ಯಾವುದೇ ನ್ಯಾಯಾಲಯದಲ್ಲಿ ಸಿದ್ಧ ಮಾಡಲು ಸಾಧ್ಯವಿಲ್ಲ. ಆದಾಗ್ಯೂ ಶ್ರೀಕೃಷ್ಣನೇ ಮಹಾಭಾರತ ಯುದ್ಧವು ಸಂಭವಿಸುವಂತೆ ಮಾಡಿದನು ಎಂಬುದನ್ನು ಪ್ರತಿಯೊಬ್ಬನೂ ಬಲ್ಲನು. ನಮ್ಮ ಕಾಲದಲ್ಲಿಯೇ ನಿಸರ್ಗದ ಸಂಹಾರಕ ಹಾಗೂ ಸೃಜನಾತ್ಮಕ ಚಟುವಟಿಕೆಗಳಿಂದ ನಾವು ಬಹಳಷ್ಟು ಬದಲಾವಣೆಗಳನ್ನು ಕಂಡಿದ್ದೇವೆ. ತನ್ನ ಚಟುವಟಿಕೆಗಳ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯವೆಸಗುತ್ತಿರುವ, ಈ ಎಲ್ಲ ಬದಲಾವಣೆಗಳ ಹಿಂದೆ ಕೆಲಸಮಾಡುತ್ತಿರುವ ಸಂಕಲ್ಪ- ಶಕ್ತಿಯನ್ನು ಅಂತರ್ದೃಷ್ಟಿ ಹೊಂದಿರುವವರು ಗಮನಿಸದಿರಲಾರರು. ಮಾನುಷರೂಪಧಾರಣೆ ಮಾಡಿದ ವ್ಯಕ್ತಿ ಮಾತ್ರವೇ ಇಂತಹ ಸಂಕಲ್ಪಶಕ್ತಿಯನ್ನು ಪ್ರಯೋಗಿಸಬಲ್ಲನು. ಇಂತಹ ಉಂಟು ಮಾಡುವುದಕ್ಕಾಗಿ ವ್ಯಕ್ತಿಯು ಅಂತಹ ಅಗತ್ಯ ಶಕ್ತಿಗಳು ವಿಶೇಷವಾಗಿ ಅನುಗ್ರಹಿಸಲ್ಪಟ್ಟಿರಬೇಕು.

ನಮ್ಮದೇ ಆಧ್ಯಾತ್ಮಿಕ ಉನ್ನತಿಗೋಸ್ಕರ ಅಂತಹ ಮಹಾಶಕ್ತಿಯ ಪ್ರಯೋಜನ ಪಡೆಯುವುದೇ ನಮಗಿಂದು ಬೇಕಾಗಿರುವುದು. ‘ಸಹಜಮಾರ್ಗ’ದಲ್ಲಿ ‘ಪ್ರಾಣಾಹುತಿ’ಯ ಮೂಲಕ ಈ ವಿಶೇಷ ಶಕ್ತಿಗಳನ್ನು ಅಭ್ಯಾಸಿಗಳ ಅಧ್ಯಾತ್ಮಿಕ ತರಬೇತಿಗಾಗಿ ಬಳಸಲಾಗುವುದು. ಮಾನವ ಮನಸ್ಸಿನ ಹಟಮಾರಿ ಪ್ರವೃತ್ತಿಗಳನ್ನು ಪರಿಪೂರ್ಣ ಸಮತ್ವದ ಸ್ಥಿತಿಗೆ ತರಲು ಬೇಕಾಗುವ ಶಕ್ತಿಗಿಂತಲೂ ಬಹಳ ಕಡಿಮೆ ಶಕ್ತಿ ರಾಕೆಟನ್ನು ಆಕಾಶದಲ್ಲಿ ಹಾರಿಸಿಬಿಡಲು ಸಾಕಾಗುವುದು. ಇಂತಹ ವಿಭೂತಿ ಪುರುಷನ ಶಕ್ತಿಯು ಸಂಪೂರ್ಣ ಸಮತೋಲನವನ್ನು ಕ್ಷಣಮಾತ್ರದಲ್ಲಿ ಮರಳಿ ತರಬಲ್ಲದು. ಅವನ ಸಂಕಲ್ಪಶಕ್ತಿಯು ಚ್ಯುತಿಯಿಲ್ಲದ್ದು. ನಿಜಕ್ಕೂ ಅವನು ಎಷ್ಟರಮಟ್ಟಿಗೆ ‘ಸತ್ತುಹೋದ ಹಾಗೆ’ ಆಗಿರುವನೆಂದರೆ, ನಿಸರ್ಗವು ಬಯಸುವುದೆಲ್ಲವನ್ನೂ ತನ್ನ ಸಂಕಲ್ಪಶಕ್ತಿಯಿಂದ ಮಾಡಲು ಅವನು ವಿವಶನಾಗಿರುವನು. ತನ್ನನ್ನು ತಾನು ಸಂಪೂರ್ಣ ನಿರಸನಗೊಳಿಸಿಕೊಂಡ ಅವನಿಗೆ ಮಾಡಲು ಬೇರೇನೂ ಕೆಲಸ ಉಳಿದಿಲ್ಲ. ಸಹಾಯಕ್ಕಾಗಿ ನಮ್ಮ ದುಃಖತಪ್ತ ಮೊರೆ ಇಲ್ಲದಿದ್ದರೆ, ಯಾರಿಗೂ ಕಾಣದಂತೆ ಅವನು ಹೊರಟು ಹೋಗಬಹುದಾಗಿತ್ತು. ಮಾನವ ರೂಪದಲ್ಲಿ ಅಡಗಿರುವ ಅವನನ್ನು ಶೋಧಿಸುವುದು ಮತ್ತು ನಮ್ಮ ಧ್ಯೇಯ ಪ್ರಾಪ್ತಿಗಾಗಿ ನಮಗೆ ಅವನು ಸಹಾಯ ಮಾಡಲು ಅವನಿಗೆ ಸಹಾಯಮಾಡುವುದು (ಸಹಕರಿಸುವುದು) ನಮಗೆ ಬಿಟ್ಟದ್ದಾಗಿದೆ.

[ಸಹಜಮಾರ್ಗ ಪತ್ರಿಕೆ, ಸಂ.4, 1971]