ಸತ್ಸಂಗದ ಉದ್ದೇಶವು, ಅದರಲ್ಲಿ ಭಾಗವಹಿಸುವವರನ್ನು ಅತ್ಯುನ್ನತ ಗುರಿಯತ್ತ ಅಭಿಮುಖಗೊಳಿಸುವುದೇ ಆಗಿದೆ. ಯಾವುದೇ ತಥಾಕಥಿತ ಸತ್ಸಂಗದಲ್ಲಿ ಅಂತಹ ಅಭಿಮುಖಗೊಳಿಸುವಿಕೆಯು ನಡೆಯದಿದ್ದರೆ, ಅಂತಹ ಸತ್ಸಂಗದಲ್ಲಿ ಭಾಗವಹಿಸುವುದು ವ್ಯರ್ಥ.
ಸತ್ಸಂಗ ನಡೆಸುವ ವ್ಯಕ್ತಿಯ ಹೆಗಲಮೇಲೆ ಒಂದು ಮಹತ್ತರ ಹೊಣೆಗಾರಿಕೆಯಿರುತ್ತದೆ. ಒಬ್ಬ ಉನ್ನತ ಯೋಗ್ಯತೆಯುಳ್ಳ ವ್ಯಕ್ತಿಯು ತನ್ನ ಸಂಕಲ್ಪಶಕ್ತಿಯನ್ನುಪಯೋಗಿಸಿ ಯಾವುದೇ ಸ್ಥಳವನ್ನು ಆಧ್ಯಾತ್ಮಿಕ ಶಕ್ತಿಯಿಂದ ತುಂಬಿ ಅದನ್ನು ಪರಿವರ್ತಿಸಬಲ್ಲನು. ಆ ವ್ಯಕ್ತಿಯ ಸಂಕಲ್ಪ ಅಥವಾ ಆಶಯದ ಅನುಗುಣವಾಗಿ ಆ ಸ್ಥಳವು ಸಾಕಷ್ಟು ಬಹಳ ದೀರ್ಘಕಾಲದವರೆಗೆ ಶಕ್ತ್ಯಾವಿಷ್ಟವಾಗಿರುತ್ತದೆ. ಅಂತಹ ವ್ಯಕ್ತಿಯಿಂದ ಮತ್ತು ಸ್ಥಳದಿಂದ ಆಧ್ಯಾತ್ಮಿಕ ಪ್ರಯೋಜನ ಪಡೆಯುವುದಕ್ಕೆ ತನ್ನನ್ನು ತಾನು ಅರ್ಹನನ್ನಾಗಿ ಮಾಡಿಕೊಳ್ಳುವುದು ಅಭ್ಯಾಸಿಗೆ ಬಿಟ್ಟ ಸಂಗತಿ.
ಸತ್ಸಂಗವನ್ನು ನಡೆಸುವ ವ್ಯಕ್ತಿಯು ಅಭ್ಯಾಸಿಗಳ ಮನಸ್ಸನ್ನು ಮನುಷ್ಯನಿಗೆ ಸಾಧ್ಯವಾದ ಅತ್ಯುನ್ನತ ಸ್ಥಿತಿಯ ಕಡೆಗೆ ಆಕರ್ಷಿಸುವ ಸಾಮರ್ಥ್ಯ ಹೊಂದಿರಬೇಕು ಮತ್ತು ಸತ್ಸಂಗದ ಅವಧಿಯುದ್ದಕ್ಕೂ ಅತ್ಯುನ್ನತ ಗುರಿಯತ್ತ ಅಭ್ಯಾಸಿಗಳನ್ನು ಅಭಿಮುಖಗೊಳಿಸಿ ಹಾಗೆಯೇ ಹಿಡಿದಿಡಲು ತನ್ನ ಸಂಕಲ್ಪಶಕ್ತಿಯನ್ನು ಪ್ರಯೋಗಿಸಬೇಕು. ಅಂತಹ ಸ್ಥಳದಲ್ಲಿ ಸತ್ಸಂಗವು ನಡೆದಾಗ, ಸತ್ಸಂಗದ ಸಮಯಾವಧಿಯುದ್ದಕ್ಕೂ ಅಭ್ಯಾಸಿಗಳಿಗೆ ಆಧ್ಯಾತ್ಮಿಕ ಅಮೃತವನ್ನು ನಿರಂತರವಾಗಿ ಊಡಿಸಲಾಗುತ್ತದೆ; ಮತ್ತು ಅಂತಹ ಸತ್ಸಂಗವು ಯಾವುದೇ ಒತ್ತಾಯ, ಭಯ, ಅಥವಾ ಪ್ರಯತ್ನವಿಲ್ಲದೆಯೇ ತನ್ನಿಂದ ತಾನೇ, ಸಹಜವಾಗಿಯೇ ವ್ಯವಸ್ಥಿತ ಮತ್ತು ಅನುಶಾಸಿತ (ಶಿಸ್ತುಬದ್ಧವಾಗಿರುತ್ತದೆ. ಭಾಗವಹಿಸಿದ ಸಂಗಿಗಳೆಲ್ಲರ ಮನಸ್ಸಿನ ನಿಮ್ಮ ವೃತ್ತಿಗಳನ್ನು ಸಂಪೂರ್ಣ ನಿರ್ಬಲಗೊಳಿಸಲಾಗುತ್ತದೆ ಹಾಗೂ ಅವರು ಒಂದು ದೈವೀ ಪರಿಸರದಲ್ಲಿರುವ ಅನುಭೂತಿ ಪಡೆಯುತ್ತಾರೆ. ಅದರ ಪ್ರಭಾವವನ್ನವಲಂಬಿಸಿ, ಅಥವಾ ಒಬ್ಬ ಅಭ್ಯಾಸಿಯು ಒಂದು ನಿರ್ದಿಷ್ಟ ಅವಧಿಯವರೆಗೆ ಅದನ್ನು (ಆ ಸ್ಥಿತಿಯನ್ನು) ಧಾರಣ ಮಾಡಿಟ್ಟುಕೊಳ್ಳುವಂತೆ ಸತ್ಸಂಗ ನಡೆಸುವವನು ತನ್ನ ಸಂಕಲ್ಪ ಶಕ್ತಿಯನ್ನು ಪ್ರಯೋಗಿಸಬಲ್ಲನೆಂಬುದನ್ನು ಅವಲಂಬಿಸಿ, ಅಭ್ಯಾಸಿಯು ಸತ್ಸಂಗದ ಅವಧಿಯ ನಂತರವೂ, ಅವನು ಹಾಗೆ ಬಯಸಿದರೆ, ಅದೇ ಸ್ಥಿತಿಯನ್ನು ಕಾಯ್ದುಕೊಳ್ಳಲು ಸಾಧ್ಯ
ಒಂದುವೇಳೆ ಸತ್ಸಂಗವನ್ನು ನಡೆಸುವ ವ್ಯಕ್ತಿಯು ಕೆಳಮಟ್ಟದ ಚಾರಿತ್ರ್ಯವುಳ್ಳವನಾಗಿದ್ದರೆ ಹಾಗೂ ಸಂಸ್ಥೆ, ಕಟ್ಟುಪಾಡುಗಳಲ್ಲಿ ಮತ್ತು ತನ್ನ ಮೂಲಕವೇ ಅಭ್ಯಾಸಿಗಳ, ಹಾಗೆನ್ನಬಹುದಾದ ಕ್ಷೇಮವುಂಟೆಂಬುದರಲ್ಲಿ ಆಸಕ್ತಿಹೊಂದಿದವನಾಗಿದ್ದರೆ, ಅಂತಹ ಸತ್ಸಂಗವು ಅದೈವೀ ಅಂಶಗಳಿಂದ ಮತ್ತು ಮಲಿನತೆಗಳಿಂದ ಕಲುಷಿತಗೊಳ್ಳುತ್ತದೆ. ಅಂತಹ ಸಮಾರಂಭದಲ್ಲಿ ಪಾಲುಗೊಳ್ಳುವ ವ್ಯಕ್ತಿಗಳು ಅವೇ ಮಲಿನತೆಗಳನ್ನು ಕಲೆಹಾಕಿಕೊಳ್ಳುತ್ತಾರೆ ಮತ್ತು ಅತ್ಯುಚ್ಚ ಗುರಿಯತ್ತ ತಮ್ಮ ಮನಸ್ಸನ್ನು ಅಭಿಮುಖಗೊಳಿಸಿಕೊಳ್ಳುವುದರ ಬದಲಿಗೆ ಸಂಕುಚಿತ ಮನಸ್ಕತೆ, ದುರಾಗ್ರಹ, ಭಯ, ಅಂಧಶ್ರದ್ಧೆ ಮುಂತಾದವುಗಳ ಕೆಳಮಟ್ಟದ ಮತ್ತು ಅನಪೇಕ್ಷಣೀಯ ಸ್ತರದಲ್ಲಿ ಸಿಕ್ಕಿಬೀಳುತ್ತಾರೆ, ಅಲ್ಲದೆ ಸಾಮಾನ್ಯ ಸಮುದಾಯಕ್ಕೂ ಅನಿಷ್ಟಕಾರಕರಾಗುತ್ತಾರೆ.
ವಾಸ್ತವವಾಗಿ, ಸತ್ಸಂಗ ಅಥವಾ ಅಭ್ಯಾಸಿಗಳ ಸಮಾವೇಶವು ಆಧ್ಯಾತ್ಮಿಕ ತರಬೇತಿಯ (ಶಿಕ್ಷಣದ) ಸ್ಥಳವಾಗಬೇಕು, ಭಾಗವಹಿಸುವವರು ಆಧ್ಯಾತ್ಮಿಕ ಶಿಕ್ಷಣ ಪಡೆಯುವ ಏಕೈಕ ಉದ್ದೇಶದಿಂದ ಅಲ್ಲಿಗೆ ಹೋಗಬೇಕು. ಅದಿಲ್ಲವಾದರೆ, ಆ ಸಮಾವೇಶವು ಒಂದು ಮನೋರಂಜನೆಯ ಮತ್ತು ವ್ಯಾಪಾರ-ವ್ಯವಹಾರದ ಸಂಗತಿಯಾಗುವುದು ಮತ್ತು ಅಂತಹ ಸಮಾರಂಭಗಳನ್ನು ನಡೆಸುವ ವ್ಯಕ್ತಿ ಮತ್ತು ಅವನ ಹಿಂಬಾಲಕರು, ಆಧ್ಯಾತ್ಮಿಕ ಹೆಸರಿನಲ್ಲಿ ಮುಗ್ಧಜನರನ್ನು ಶೋಷಣೆ ಮಾಡುವ ಮೂಲಕ ಸಂಪತ್ತು ಮತ್ತು ಅಧಿಕಾರಗಳನ್ನು ಪಡೆಯುವ ಕೂಟವಾಗುವುದು, ಭ್ರಷ್ಟತೆ ಮತ್ತು ಅವನತಿಯ ಮುಖ್ಯ ಕಾರಣಗಳೆಂದರೆ, ಅಧಿಕಾರದಾಹ, ಧನದಾಹ, ಸುಖಾನುಭವಕ್ಕೆ ಮತ್ತು ಇಚ್ಛಾಪೂರ್ತಿಗೆ ಹಾತೊರೆಯುವುದು ಇವೇ ಆಗಿವೆ. ನಿಜವಾದ ಸತ್ಸಂಗವೆಂದರೆ ‘ಭಗವಂತನಲ್ಲಿ ಆಸಕ್ತಿ’ಯೇ ಆಗಿದೆ. ಅದು ಅನಾಸಕ್ತಿಯಲ್ಲಿ ಮತ್ತು ಮೋಹತ್ಯಾಗದಲ್ಲಿ ಪರಿಣಮಿಸುತ್ತದೆ. ನಿರ್ಮೋಹತ್ವದಿಂದ ಭಗವಂತನಲ್ಲಿ ನಮ್ಮ ಬುದ್ಧಿ ನಿಶ್ಚಲವಾಗುತ್ತದೆ. ಭಗವಂತನಲ್ಲಿ (ದೈವೀ ಸ್ಥಿತಿಯಲ್ಲಿ ) ನೆಲೆನಿಲ್ಲುವುದೇ ಮುಕ್ತಜೀವನ ಅಥವಾ ಜೀವನ್ಮುಕ್ತಿ’ ಎಂದು ಶ್ರೀಶಂಕರಾಚಾರ್ಯರು ಹೇಳುತ್ತಾರೆ.
ಪೂಜ್ಯ ಬಾಬೂಜಿಯವರು ಸತ್ಸಂಗಕ್ಕೆ ಅತಿಶಯ ಮಹತ್ವ ಕೊಡುತ್ತಾರೆ; ಏಕೆಂದರೆ, ಸಹಜಮಾರ್ಗ ಪದ್ಧತಿಯಲ್ಲಿ ಪ್ರಚುರಪಡಿಸಿದ ಸತ್ಸಂಗವು ಅದ್ವಿತೀಯವಾದುದು. ಸತ್ಸಂಗದಲ್ಲಿ ಭಾಗವಹಿಸುವ ಅಭ್ಯಾಸಿಗಳ ಹೃದಯದ ಶುದ್ದೀಕರಣ ಮತ್ತು ಅವರ ಮನಸ್ಸು ಅತ್ಯುಚ್ಚ ಗುರಿಯತ್ತ ಅಭಿಮುಖಗೊಳ್ಳುವುದು ಇವೆರಡೂ ಅದೆಷ್ಟು ಸ್ವಾಭಾವಿಕವಾಗಿ ಮತ್ತು ಅಪ್ರಜ್ಞಾತವಾಗಿ ನಡೆಯುತ್ತದೆ ಎಂದರೆ, ಅದನ್ನು ಅನುಭವ ಪಡೆದು ಮಾತ್ರವೇ ನಂಬಲು ಸಾಧ್ಯ. ವಾಸ್ತವವಾಗಿ, ಪೂಜ್ಯ ಬಾಬೂಜಿ ಮಹಾರಾಜರ ಹೆಸರಿನಲ್ಲಿ ನಡೆಯುವ ಸತ್ಸಂಗವು, ಅದರಲ್ಲಿ ಭಾಗವಹಿಸುವವರ ಹೃದಯದಲ್ಲಿ ಒಂದು ಶಾಶ್ವತ ಪರಿಣಾಮವನ್ನು ಉಂಟುಮಾಡುವುದು ಮತ್ತು ಅಭ್ಯಾಸಿಗಳಲ್ಲಿ ಸೂಕ್ಷ್ಮ ಪರಿವರ್ತನೆಯನ್ನು ತರುತ್ತದೆ. ನಿಜವಾದ ಸ್ವಾತಂತ್ರ್ಯದ ಮಂದಮಾರುತವು ಸತ್ಸಂಗದ ಆದ್ಯಂತ ಬೀಸುತ್ತಿರುತ್ತದೆ ಹಾಗೂ ಗುರಿಯನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ತಲುಪಬೇಕೆಂಬ ಚಡಪಡಿಕೆ ಹೃದಯದಲ್ಲಿ ಉಂಟಾಗುತ್ತದೆ.
ಗುರುಗಳು ನಮಗೆ ಸರಿಯಾದ ಚಿಂತನ, ಮಾತು ಮತ್ತು ಕ್ರಿಯೆಗಳನ್ನಿತ್ತು ಅನುಗ್ರಹಿಸಲಿ.
[ಷಹಜಹಾನಪುರದಲ್ಲಿ 30.4.1989 ರಂದು ಮಾಡಿದ ಭಾಷಣ]