ಶ್ರೀ. ಆ.ಸರ್ನಾಡ ಅವರು ಕನ್ನಡಿಸಿದ ಈ ಕಿರುಹೊತ್ತಿಗೆ ರಾಜಯೋಗದ ಪ್ರಭಾವವನ್ನು ಕುರಿತಾಗಿದ್ದು ಆಧ್ಯಾತ್ಮಿಕ ಪ್ರಗತಿಯ ದಾರಿಯಲ್ಲಿ ಮಹಾತ್ಮಾ ರಾಮಚಂದ್ರಜಿ ಮಹಾರಾಜರು ಪಡೆದ ಅನುಭವಗಳ ಅಮೂಲ್ಯ ವಿವರಣೆಯಾಗಿದೆ. ಇದರಲ್ಲಿ, ಅವರ ಸ್ವಂತ ಸಂಶೋಧನೆಗಳ ಆಧಾರದ ಮೇಲೆ, ರಾಜಯೋಗದ ಮುಖ್ಯ ಸಾಧನವಾದ ಧ್ಯಾನದ ಮಹತ್ವವನ್ನು ಬಿಂಬಿಸಲಾಗಿದೆಯಲ್ಲದೇ ಆತ್ಮಸಾಕ್ಷಾತ್ಕಾರದ ಗುರಿಯತ್ತ ಕೊಂಡೊಯ್ಯುವ ಮಾರ್ಗದಲ್ಲಿ ಕ್ರಮಿಸಬೇಕಾದ ಅವಸ್ಥೆಗಳನ್ನು ತೋರಿಸಲಾಗಿದೆ. ಸಾಧಕರಿಗೆ ಅನುಕೂಲವಾಗಬೇಕೆಂದು ಸುಭೋಧವಾಗಿಯೂ ಕಳಕಳಿಯಿಂದಲೂ ಬರೆಯಲ್ಪಟ್ಟತ ಆಧ್ಯಾತ್ಮಿಕ ಪ್ರಗತಿಯ ಇಂಥ ಅಧಿಕೃತ ಬರಹಗಳು ಅತಿವಿರಳ. ಈ ಪುಸ್ತಕದಿಂದ ದೊರೆಯುವ ಸಹಾಯಕ್ಕಾಗಿ ಓದುಗರು ಉಪಕೃತರಾಗದಿರಲಾರರು. ಆಧ್ಯಾತ್ಮ ಜೀವನದ ಮುನ್ನಡೆಗೆ ಶ್ರೇಷ್ಟ ಸಾಧನವಾದ ಯೌಗಿಕ ಪ್ರಾಣಾಹುತಿಯ ಶಕ್ತಿಯನ್ನು ಕರುಣಿಸುವ ಮಾರ್ಗದರ್ಶಿ ಅಥವಾ ಗುರುವಿನ ಪಾತ್ರವು ತುಂಬ ಮಹತ್ವದ್ದು. ಎಲ್ಲ ಓದುಗರೂ ಇಂಥ ಅಪರೋಕ್ಷ ಜ್ಞಾನಿಗಳ ಮಾರ್ಗದರ್ಶನವನ್ನು ಪಡೆದು ಆತ್ಮಿಕ ಪರಿಪೂರ್ಣತೆಯನ್ನು ಹೊಂದಿ ಕೃತಾರ್ಥರಾಗಲಿ.
ಎಲ್ಲರಿಗೂ ಶಾಂತಿ ಲಭಿಸಲಿ.
ಜೂನ್ ೨೦ ,೧೯೬೫
ಡಿ. ಗುರುಮೂರ್ತಿ,
ಜಯನಗರ,ಬೆಂಗಳೂರು
ಎಂ.ಎ.ಪಿಎಚ್.ಡಿ. ತತ್ವ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ