ಈಗ ನಮ್ಮ ಪ್ರೇಮವು ಬಲವತ್ತರವಾದರೆ ಅದರಲ್ಲಿಯೂ ಹೊಕ್ಕೆವು. ಪ್ರತಿಯೊಂದು ಗ್ರಂಥಿಯಲ್ಲಿ ಸ್ವಲ್ಪ ಭಾರದ ಅನುಭವವಾಗುವುದೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳತಕ್ಕದ್ದು, ಇದನ್ನು ನೋಡಿ ಬಹುತೇಕ ಜನರು ಅಭ್ಯಾಸವನ್ನು ಬಿಟ್ಟು ಕೊಡುವರು. ಆದರೆ, ಕಾಯಿಲೆಯ ನಂತರ ಆರೋಗ್ಯ ಲಭಿಸುವದೆಂಬ ಮಾತು ಮನವರಿಕೆಯಾದರೆ ಪ್ರತಿಯೊಂದು ಗ್ರಂಥಿಯನ್ನು ದಾಟುವ ಸಾಹಸವುಂಟಾಗುವುದು. ಈಗ ದಿವ್ಯ ದಶೆಗಳ ರೂಪು ಬೇರೆಯಾಯಿತು. ಭಾರದಿಂದ ಬಿಡುಗಡೆ ದೊರೆಯಿತು, ವಾಸ್ತವಿಕತೆಯ ಕೆಳ ಅಂತಸಿನ ಭಾನವುಂಟಾಯಿತು. ಲಘುತ್ವವು ಮತ್ತಷ್ಟು ಹೆಚ್ಚಿತು: ಸುತ್ತಲೂ ಸರಳತೆಯ ಪ್ರತೀತಿಯಾಗತೊಡಗಿತು. ಆದರೆ ನಿರ್ಮಲತೆ ಇನ್ನೂ ದೂರವಿದೆ. ಇದು ಮೂರನೆಯ ಗ್ರಂಥಿಯ ಅನಂತರದ ಮಾತು. ಇಲ್ಲಿ ಆತ್ಮದ ಸ್ವಲ್ಪ ಪ್ರಕಾಶವು ಅನುಭವಕ್ಕೆ ಬರುವುದು. ಈ ಸ್ಥಾನವನ್ನು ಜನರು ಆತ್ಮದ ಸ್ಥಾನ ವೆಂದು ಕರೆಯುತ್ತಾರೆ, ಏಕೆಂದರೆ, ಇಲ್ಲಿ ಇಂಥವೇ ದಿವ್ಯ ದಶೆಗಳ ಅನುಭವವುಂಟಾಗುವುದು, ಸ್ವಚ್ಛತೆ ಮತ್ತು ಸರಳತೆಗಳು ಈ ಅವಸ್ಥೆಯ ಜೀವಾಳವಾಗಿವೆ. ಬಹುಶಃ ಸಮಾಸಮ ದಶೆಯು ಪ್ರತೀತವಾಗುವುದು. ಇಂಥವೇ ಅಗಣಿತ ಗ್ರಂಥಿಗಳ ಶ್ರೇಣಿ ಇದೆ. ಅವುಗಳ ವರ್ಣನೆಯು ವ್ಯರ್ಥ. ಏಕೆಂದರೆ, ಇವುಗಳ ನಡುವಿನ ಅಂತರವು ಶಬ್ದಗಳಿಂದ ವ್ಯಕ್ತಮಾಡಲು ಬಾರದಷ್ಟು ಕಡಿಮೆಯಿದೆ. ತಾತ್ಪರ್ಯವೇನೆಂದರೆ, ಈಗ ಆತ್ಮಸ್ಥಾನದ ದಿವ್ಯ ದಶೆಗಳು ನಮ್ಮೆದುರು ಕಾಣಿಸಿಕೊಳ್ಳುತ್ತವೆ. ನಮಗೆ, ಈ ಸ್ಥಾನದ ಮಹತ್ವ ತಿಳಿದು ಬಂದು ನಾವದನ್ನು ಮನನಮಾಡಿ ಅದರಲ್ಲಿ ಲಯಹೊಂದುವೆವು. ಈಗ ಮೊದಲನೆಯ ಆವರಣವು ಸರಿಯುವುದು. ನಮಗೆ ಆತ್ಮದ ಸುಗಂಧ ತಟ್ಟುವುದು, ಅಂಥದೇ ದೃಶ್ಯವು ಒಳಗೂ ಹೊರಗೂ ಕಾಣಲಾರಂಭಿಸುವದು. ಒಂದುವೇಳೆ ಹೀಗಾಗದಿದ್ದರೆ ಅದನ್ನು ಜ್ಞಾನದ ದಶೆಯೆಂದು ಎಂದಿಗೂ ಹೇಳಲಾಗದು. ಇದನ್ನು ಧ್ಯಾನಿಸಿ ಪಡೆದುದಾದರೆ ಕೃತ್ರಿಮತೆ ತಲೆದೋರುವುದು. ತನ್ನ ವಿಚಾರಶಕ್ತಿಯ ಜೋರು ಕೊಡುವುದರಿಂದ ಒಳಗೊಳಗೇ ಅದರ ಚಮತ್ಕಾರಗಳ ಅನುಭವವಾಗತೊಡಗುವುದು. ಮುಂದೆ ಇದೇ ಒಂದು ಬಂಧನವಾಗುವುದು; ಮತ್ತು ಬಲೆಯಲ್ಲಿ ಎಷ್ಟರ ಮಟ್ಟಿಗೆ ಸಿಕ್ಕಿಬೀಳುವರೆಂದರೆ ಅದರಿಂದ ಬಿಡುಗಡೆ ಹೊಂದುವುದು ತುಂಬ ಕಷ್ಟವಾಗುವುದು, ಮೊದಲಿನಿಂದ ಕೊನೆಯವರಗೆ ಯೋಗ್ಯವಾದ ಅಭ್ಯಾಸವನ್ನು ಮುಂದುವರಿಸುವವನೇ ನಿಜವಾದ ಸಾಧಕನೆನಿಸುವನು.
ಈ ಮೂರನೆಯ ಗ್ರಂಥಿಯು ಆತ್ಮದ ಸಮಗ್ರ ಕ್ಷೇತ್ರವನ್ನು ಒಳಗೊಳ್ಳುವುದು. ಇದರಲ್ಲಿ ಮತ್ತೆ ಅಸಂಖ್ಯವಾದ ಸಣ್ಣ ಸಣ್ಣ ಗ್ರಂಥಿಗಳಿವೆ. ಇವನ್ನೆಲ್ಲ ದಾಟಿದ ಮೇಲೆಯೇ ನಾವು ಈ ಕ್ಷೇತ್ರದಿಂದ ಹೊರಗೆ ಬರುವೆವು. ಮನುಷ್ಯನಲ್ಲಿ ಈ ವಸ್ತುಗಳು ಅನೇಕ ಪದರುಗಳಾಗಿ ಕುಳಿತಿವೆ. ಅದೇನೇ ಇರಲಿ, ಈಗ ನಾವು ಇದಕ್ಕಿಂತ ಮುಂದೆ ತಲುಪಲು ಯತ್ನಿಸುತ್ತೇವೆ, ಭಗವಂತನ ಸಹಾಯದಿಂದ ನಮಗೆ ಮುಂದಿನ ಸುವಾರ್ತೆ ದೊರೆಯುವುದು, ಇಲ್ಲಿಯವರೆಗಂತೂ ನಮಗೆ ಜ್ಞಾನವಾಗಿಯೇ ಬಿಟ್ಟಿತು. ನಾವು ದಿವ್ಯ ಅಥವಾ ಜ್ಯೋತಿರ್ಮಯ ವೃತ್ತವನ್ನು ಪ್ರವೇಶಿಸಿದುದೇ ಇದಕ್ಕೆ ಸಾಕ್ಷಿ. ಈಗ ಇದರ ಮುಂದಿನ ಗ್ರಂಥಿ ಬರುವುದು,