ರಾಜಯೋಗವು ಬಹು ಪ್ರಾಚೀನ ಶಾಸ್ತ್ರವಾಗಿದೆ.ಅದನ್ನು ದೊಡ್ಡ ದೊಡ್ಡ ಋಷಿ-ಮುನಿಗಳು ಆತ್ಮಸಾಕ್ಷಾತ್ಕಾರದಲ್ಲಿ ತಮಗೆ ಸಹಾಯಕವಾಗುವಂತೆ ಅನುಸರಿಸಿದರು.ಅದು ರಾಮಾಯಣ ಕಾಲಕ್ಕಿಂತ ಬಹಳ ಹಿಂದೆ ಭಾರತದಲ್ಲಿ ಪ್ರಚಲಿತವಾಗಿದ್ದಿತು.ಸೂರ್ಯ ವಂಶದ ದಶರಥ ಮಹಾರಾಜನಿಗಿಂತ ಎಪ್ಪತ್ತೆರಡು ತಲೆಮಾರುಗಳ ಹಿಂದೆ ಇದ್ದ ಒಬ್ಬ ಮಹರ್ಷಿಯು ಅದನ್ನು ಪ್ರಚುರಪಡಿಸಿದನು. ಯಾವುದರಿಂದ ನಮ್ಮ ಜೀವನದ ಸಮಸ್ಯೆಗಳೆಲ್ಲ ಸುಲಭವಾಗಿ ಪರಿಹಾರವಾಗುವುವೋ ಅಂಥ ಮುಕ್ತಿಯನ್ನು ಪಡೆಯುವ ನೈಜ ಪದ್ಧತಿಯನ್ನು ಕಂಡುಹಿಡಿಯಲು ಆತನು ಬಹುಕಾಲ ಚಿಂತಿಸಿದನು.ಈ ಪುಸ್ತಕದಲ್ಲಿ ವರ್ಣಿಸಲಾದಂತೆ ಆತನು ಕೇಂದ್ರ ಮಂಡಲದಲ್ಲಿ ತೀರ ಕೇಂದ್ರಕ್ಕೆ ಹೊಂದಿಕೊಂಡೇ ಈಜಾಡುತ್ತಿದ್ದನು.ಪ್ರಕೃತಿಯಲ್ಲಿ ಅಗತ್ಯವಾದ ಬದಲಾವಣೆಯನ್ನುಂಟು ಮಾಡಲು ದುಡಿಯುತ್ತಿರುವ ಇಂದಿನ ವಿಭೂತಿಯಂತೆಯೇ ಆತನ ಸ್ಥಿತಿಯಿದ್ದಿತು. ಈ ವಿಷಯವಾಗಿ ಸುದೀರ್ಘ ಚಿಂತನೆ ಮಾಡಿ ಕಟ್ಟಕಡೆಗೆ ಆ ಮಹರ್ಷಿಯು ಒಂದು ಸಾಧನವನ್ನು ಕಂಡುಹಿಡಿದನು. ಅದೇ ಕ್ರಮೇಣ ರಾಜಯೋಗವಾಗಿ ಬೆಳೆಯಿತು. ಆತನು ಕೇಂದ್ರದ ನಿಕಟ ಸಂಪರ್ಕದಲ್ಲಿದ್ದಾಗ,ಅಸ್ತಿತ್ವದಲ್ಲಿರುವ ಜಗತ್ತಿನ ನಿಜಸ್ವರೂಪವನ್ನು ಅದರ ಮೂಲಕಾರಣ ಅಥವಾ ಶಕ್ತಿಸಹಿತವಾಗಿ ಕಂಡುಹಿಡಿದನು. ಕೇಂದ್ರದ ಅಡಿಯಲ್ಲಿರುವ ಯಾವುದೋ ಒಂದು ಶಕ್ತಿಯ ಕ್ಷೋಭವು ವರ್ತಮಾನ ಜಗತ್ತನ್ನು ಅಸ್ತಿತ್ವದಲ್ಲಿ ತಂದಿತೆಂದು ಅರಿತನು.ಅದನ್ನೇ ಬೇರೆ ಶಬ್ದಗಳಲ್ಲಿ ಉಪದಾನ ಕಾರಣವೆಂದೂ ಕ್ಷೋಭವೆಂದೂ ಕರೆಯಲಾಗಿದೆ.ಅದು ಮನುಷ್ಯನ ಚಿತ್ ಶಕ್ತಿಗೆ ಸಮಾನವಾಗಿರುವ ಅಥವಾ ಅದರಂತಿರುವ ಶಕ್ತಿಯ ಪರಿಣಾಮವೆಂಬುದನ್ನು ಆತನು ಕೊನೆಗೆ ನಿರ್ಣಯಿಸಿದನು.* ಸ್ವಾಭಾವಿಕವಾಗಿಯೇ, ಚಿತ್ ಶಕ್ತಿಯು ಇಂತಹ ಪರಿಣಾಮವನ್ನುಂಟು ಮಾಡಬಹುದೆಂಬುದನ್ನೂ ಅದರ ಶಕ್ತಿಯು ಅನಂತವಾಗಿದೆ ಎಂಬುದನ್ನೂ ಅವನು ಊಹಿಸಿದನು.ಆಮೇಲೆ ಅವನು ಆ ಚಿತ್ ಶಕ್ತಿಯಿಂದ ಕೆಲಸ ತೆಗೆದುಕೊಂಡು ಅದರಿಂದ ತರಬೇತಿಯನ್ನು ಆರಂಭಿಸಿದನು.ಆ ಕೆಲಸವು ಮುಂದೆ ನಮ್ಮ ಪಾಲಿಗೆ ಬಂದಿತು.ಅದೇ ರಾಜಯೋಗದ ಮೂಲವಾಗಿದೆ.ನಮ್ಮಲ್ಲಿರುವ ಶ್ರೇಷ್ಟ ವಸ್ತುವೆಂದರೆ ಸಂಕಲ್ಪ ಶಕ್ತಿಯೇ.ಅದು ಬೆಳೆಯುತ್ತ ಹೋಗಿ ಕಟ್ಟ ಕಡೆಗೆ ನಮ್ಮನ್ನು ನಮ್ಮ ಗುರಿಗೆ ಮುಟ್ಟಿಸುವುದು. ಅನೇಕ ಮಹರ್ಷಿಗಳು,ಒಬ್ಬರ ತರುವಾಯ ಒಬ್ಬರು, ಅದನ್ನು ಸುಧಾರಿಸಿ ಬೆಳೆಸಿದ್ದಾರೆ. ಸಂಕಲ್ಪವೇ ಕೊನೆಗೆ ಸದ್ರೂಪವನ್ನು ತಾಳಿ ಮೂಲರೂಪದಲ್ಲಿ ಕಾಣಿಸಿಕೊಳ್ಳುವುದು. ಇದೆಲ್ಲವನ್ನೂ ಶ್ರೇಷ್ಠವಾದ ಅಂತರ್ ದೃಷ್ಟಿವುಳ್ಳವರು ಪ್ರಮಾಣಿಸಿ ನೋಡಬಹುದು. ಈ ಶಾಸ್ತ್ರವನ್ನು ಬೋಧಿಸುವ ಪದ್ಧತಿಗಳು ಬೇರೆ ಬೇರೆಯಾಗಿದ್ದರೂ ಮೂಲಭೂತವಾದ ತತ್ವವು ಮಾತ್ರ ಇದೆ.ಈ ಶಕ್ತಿ ಯಿಂದ ನಾವು ದೇವರೊಡನೆ ಸಂಬಂಧವನ್ನು ಜೋಡಿಸುತ್ತೇವೆ.ದೊಡ್ಡ ದೊಡ್ಡ ಋಷಿಗಳು ಕಾಲಕ್ಕೆ ತಕ್ಕಂತೆ ಅಗತ್ಯಾನುಸಾರ ಅದನ್ನು ಸುಧಾರಿಸಿ ಬೆಳೆಸಿದ್ದಾರೆ. ಈ ವಿಷಯವನ್ನು ಕುರಿತು ವಿವರವಾಗಿ ಚರ್ಚಿಸುವ ವ್ಯಾಖ್ಯಾನಗಳು ಬರೆಯಲ್ಪಟ್ಟಿವೆ.ಆದರೆ ಮನುಷ್ಯನು ದಿವ್ಯ ದೃಷ್ಟಿ ಯನ್ನು ಬೆಳೆಸಿಕೊಳ್ಳಬೇಕೆಂಬುದೇ ಅದರಡಿಯಲ್ಲಿರುವ ವಿಚಾರ. ಯಾರು ಮಾನವ ಜೀವನದ ಪರಿಮಿತಿಯಲ್ಲಿ ಮುಂದುವರಿದು,ತಮ್ಮನ್ನು ಸಾಧ್ಯವಿದ್ದಷ್ಟುಮಟ್ಟಿಗೆ ಸುಧಾರಿಸಿಕೊಳ್ಳುವರೋ ಅವರಿಗೆ ಪದಾರ್ಥಗಳು ತಮ್ಮ ನಿಜರೂಪದಲ್ಲಿ ಗೋಚರವಾಗಿ ಅವುಗಳ ರಹಸ್ಯವು ಹೊಳೆಯುವುದು.ಸಾಮಾನ್ಯವಾಗಿ ತತ್ವ ಜ್ಞಾನಿಗಳು ಪದಾರ್ಥಗಳ ಅಂತರಾಳವನ್ನು ತರ್ಕದ ಮೂಲಕ ತಲುಪಲು ಯತ್ನಿಸುವರೇ ಹೊರತು ದಿವ್ಯದೃಷ್ಟಿಯಿಂದಲ್ಲ.ಸಾಮಾನ್ಯವಾದ ತರ್ಕವು ತಪ್ಪಾಗಿರುವ ಸಂಭವವಿದ್ದು ನಮ್ಮನ್ನು ದಾರಿ ತಪ್ಪಿಸಬಹುದು.ಅದೇ ಅನಾವಶ್ಯಕವಾದ ತರ್ಕದ ಮಾಧ್ಯಮವಿಲ್ಲದೆ ಅಂತರ್ ದೃಷ್ಟಿಯಿಂದ ವಸ್ತುಗಳನ್ನು ನೋಡಿದುದಾದರೆ ಯಾವ ದೋಷವೂ ಇಲ್ಲದೆ ಅವು ಮೂಲ ರೂಪದಲ್ಲಿ ಗೋಚರಿಸುವವು. ಪದಾರ್ಥಗಳು ಎಷ್ಟರ ಮಟ್ಟಿಗೆ ಬದಲಾವಣೆ ಹೊಂದಿವೆಯೆಂದರೆ ಅದನ್ನು ಕ್ರಮವಾಗಿ ವಿವರಿಸಲು ಸಾಧ್ಯವಿಲ್ಲ. ಅನಾದಿ ಕಾಲದಿಂದ ಈ ಜಗತ್ತು ಅಸ್ತಿತ್ವದಲ್ಲಿದ್ದು ಅದರ ಸರಿಯಾದ ದಿನಾಂಕವು ತಿಳಿದುಬಂದಿಲ್ಲ. ಆದರೂ ಕೆಲವರು ‘ಸೃಷ್ಟಿಶಕ’ವನ್ನು ಕಂಡು ಹಿಡಿಯಲು ಯತ್ನಿಸಿದ್ದಾರೆ. ಭೂಮಿಯ ಪರಿಚಲನೆಯು ನಡೆದೇ ಇದೆ;ಅದರ ಕಾರ್ಯಗಳು ಹೆಚ್ಚುತ್ತಲೇ ಇವೆ.ನಾವು ಎಲ್ಲಕಿಂತ ಮೇಲೆ ಹೋಗಿ ಅನಂತರ ವಿಷಯವನ್ನು ಕಂಡುಹಿಡಿಯಲು ಪ್ರಯತ್ನಿಸಬೇಕು. ವಸ್ತುಗಳ ನಿಜಸ್ಥಿತಿಯನ್ನು ಮುಟ್ಟಲು ಇದು ಬಹು ಮುಖ್ಯವಾದ ಸೂತ್ರವೆಂಬುದನ್ನು ತತ್ವಶಾಸ್ತ್ರಜ್ಞರು ಮನಗಾಣಬೇಕು. ಪ್ರಾಯಿಕವಾಗಿ,ಪಂಡಿತರು ಜೀವನದಲ್ಲಿ ಪ್ರಯೋಗ ರಂಗಕ್ಕಿಳಿಯದೆ ವಿಷಯಗಳನ್ನು ವಿವೇಚಿಸಿದ್ದಾರೆ.ಈ ಮಾತು ಪಾಶ್ಚಾತ್ಯ ತತ್ವಜ್ಞಾನಿಗಳ ವಿಷಯದಲ್ಲಿ ಸರ್ವಸಾಮಾನ್ಯ ನನ್ನ ಅಭಿಪ್ರಾಯದಲ್ಲಿ , ಒಬ್ಬನು ತತ್ವಶಾಸ್ತ್ರಜ್ಞನಾಗಿದ್ದುಕೊಂಡೇ ಅಧಃಪತನ ಹೊಂದುವುದು ಅಸ್ವಾಭಾವಿಕವೇನಲ್ಲ. ಆದರೆ, ಅದೇ ಆತನು ಪ್ರತ್ಯಕ್ಷವಾಗಿ ತನ್ನ ಜೀವನದಲ್ಲಿ ಪ್ರಯೋಗಿಸಿ ಅಭ್ಯಾಸ ಮಾಡಿದುದಾದರೆ ಪತನವು ಅಸಂಭವ. ಭಾರತದಲ್ಲಾದರೋ ಋಷಿಗಳು ಮೊದಲು ತಮ್ಮ ಜೀವನದಲ್ಲಿ ಪ್ರಯೋಗಮಾಡಿ ಅನಂತರ ತತ್ವವಿವೇಚನೆ ಮಾಡಿದ್ದಾರೆ.* ತತ್ವಶಾಸ್ತ್ರದಲ್ಲಿ ವಿವೇಚಿಸಲಾದ ಮಟ್ಟಕ್ಕೆ ಅವರು ಬಂದಿರದಿದ್ದರೂ ಚಿಂತೆಯಿಲ್ಲ;ಅಸ್ತಿತ್ವದಲ್ಲಿರುವ ಪದಾರ್ಥಗಳ ರಹಸ್ಯವನ್ನುಭೇಧಿಸಲು ತಮಗೆ ಶಕ್ಯವಿದ್ದಮಟ್ಟಿಗೆ ತಮ್ಮ ಪ್ರಗತಿಯ ಮಟ್ಟಕ್ಕನುಸಾರವಾಗಿ ಅವರು ಪ್ರಯತ್ನ ಮಾಡಿದ್ದಾರೆ. ಅದರ ಫಲಸ್ವರೂಪವಾಗಿಯೇ ವಿವಿಧ ವರ್ಣಗಳಲ್ಲಿ ಕಾಣುತ್ತಿರುವ ಷಡ್ದದರ್ಶನಗಳು ಹುಟ್ಟಿಕೊಂಡಿವೆ. ನಾವು ಯಾವಾಗಲೂ ನಮ್ಮ ಅಭ್ಯಾಸವು ಮುಗಿದಾಗಲೇ ವಿಷಯ ವಿವೇಚನೆಗೆ ಕೈಹಾಕಬೇಕು.ಸಂಕ್ಷೇಪವಾಗಿ ಹೇಳುವದಾದರೆ,ಗ್ರಂಥಿಗಳು ತಾವಾಗಿಯೇ ಬಿಚ್ಚತೊಡಗಿದಾಗ ನಾವು ವಿಷಯಗಳನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕು.ಇದು ಕೇಂದ್ರ ಮಂಡಲದ ದರ್ಶನಕ್ಕೆ ಸಂಬಂಧಪಟ್ಟಿದ್ದು ಈ ಬಗೆಗೆ ನಾನು ಮುಂದೆ ಹೇಳುವವನಿದ್ದೇನೆ. ಆ ಮಂಡಲದಿಂದ ನಾವು ಮಾಡುವ ವಿಷಯ ನಿರ್ಣಯವೆಲ್ಲ ಸ್ವಲ್ಪವೂ ದೋಷಯುಕ್ತವಾಗಿರದೆ ಸರಿಯಾಗಿಯೇ ಇರುತ್ತದೆ.
* * *
೧*ಈ ಪುಸ್ತಕದಲ್ಲಿ ವಿವೇಚಿಸಲಾದಂತೆ ಮಾನವ ಮನಸ್ಸಿನ ಹುಟ್ಟನ್ನು ಕುರಿತಾದ ತತ್ವವು ತರ್ಕಬದ್ಧವಾಗಿಯೇ ಇದೆ.ಪ್ರಸುಪ್ತವಾದ ಭಗವದಿಚ್ಛೆಯಿಂದ ಪ್ರೇರಿತವಾದ ಮೊಟ್ಟಮೊದಲಿನ ಕ್ಷೋಭವು ಅಸ್ತಿತ್ವಕ್ಕೆ ಕಾರಣವಾಯಿತು. ಆ ಕ್ಷೋಭವು ಸುಪ್ತ ಶಕ್ತಿಗಳನ್ನು ಚಾಲನಗೊಳಿಸಿತು; ಹಾಗೂ ಸೃಷ್ಟಿಯ ಮತ್ತು ಪ್ರಾಣಿ ಜೀವನದ ಕ್ರಮವು ಆರಂಭವಾಯಿತು. ಕ್ಷೋಭ ಅಥವಾ ಪ್ರೇರಣೆಯಾಗಿ ಕಾಣುವ ಆ ಮೂಲ ಶಕ್ತಿಯೇ ಮುಖ್ಯ ಕ್ರಿಯಾ ಶಕ್ತಿಯಾಗಿ ಪ್ರತಿಯೊಂದು ಜೀವಿಯಲ್ಲಿಯೂ ಅವತರಿಸಿತು. ಮನುಷ್ಯನಲ್ಲಿ ಅದು ಮನಸ್ಸೆಂಬ ಸಂಜ್ಞೆಯನ್ನು ಪಡೆಯಿತು. ಅದರಡಿಯಲ್ಲಿ, ಪ್ರಥಮ ಕ್ಷೋಭದಲ್ಲಿದ್ದ ಅದೇ ಸುಪ್ತೇಚ್ಛೆಯೇ ಇರುವುದು. ಹೀಗೆ, ಮಾನವನ ಮನಸ್ಸು ಆ ಮೂಲ ಶಕ್ತಿಯೊಂದಿಗೆ ಏಕರೂಪವಾಗಿದ್ದು ಅದರ ಅಂಶವೇ ಆಗಿದೆ. ಆದುದರಿಂದ ಅವೆರಡರ ಕಾರ್ಯಗಳೂ ತೀರ ಸಮಾನವಾಗಿವೆ.
೨* ತತ್ವಜ್ಞಾನವು ತರ್ಕವನ್ನವಲಂಬಿಸಿರದೆ ಅಂತರ್ಜ್ಞಾನವನ್ನವಲಂಬಿಸಿದೆ. ಪಾಶ್ಚಾತ್ಯ ತತ್ವಜ್ಞಾನಿಗಳನೇಕರು ಹೇಳುವಂತೆ ಅದು ‘ಸಂದೇಹ’ ದಿಂದ ಆರಂಭವಾಗುವುದಿಲ್ಲ; ‘ಆಶ್ಚರ್ಯದಿಂದ ಆರಂಭವಾಗುವುದು. ಆದುದರಿಂದ ವಿಷಯಗಳ ವಾಸ್ತವತೆಯೆಡೆಗೆ ತಲುಪಲು ಅದರಲ್ಲಿ ಬರುವ ಎಲ್ಲ ಅನುಭವಗಳನ್ನೂ ಪ್ರತ್ಯಕ್ಷವಾಗಿ ಅನುಭವಿಸುವುದು ಅಗತ್ಯವಾಗಿದೆ.